Advertisement

ಜಿಲ್ಲೆಯಲ್ಲಿ ವ್ಯಾಪಾರ ಬಹುತೇಕ ಸ್ಥಗಿತ

01:46 PM Jul 05, 2017 | |

ವಿಜಯಪುರ: ಕೇಂದ್ರ ಸರ್ಕಾರ ಜು. 1ರಿಂದ ದೇಶಾದ್ಯಂತ ಜಾರಿಗೆ ತಂದಿರುವ ಏಕರೂಪದ ಸರಕು ಹಾಗೂ ಸೇವಾ ತೆರಿಗೆ -ಜಿಎಸ್‌ಟಿ ನೀತಿ ವಿಜಯಪುರ ಜಿಲ್ಲೆಯಲ್ಲೂ ವ್ಯವಹಾರಿಕವಾಗಿ ಸಾಕಷ್ಟು ಗಂಭೀರ ಪರಿಣಾಮ ಬೀರಿದೆ. ಹೀಗಾಗಿ ಎಪಿಎಂಸಿ ವರ್ತಕರು ಸೇರಿದಂತೆ ಜಿಲ್ಲೆಯ ಬಹುತೇಕ ವಹಿವಾಟು ಸ್ಥಗಿತ ಗೊಂಡಿದೆ. 

Advertisement

ಒಂದು ದೇಶ, ಒಂದೇ ತೆರಿಗೆ ಘೋಷಣೆಯೊಂದಿಗೆ ಜಾರಿಗೆ ಬಂದಿರುವ ಸರಕು ಹಾಗೂ ಸೇವಾ ತೆರಿಗೆ ವಿಷಯದಲ್ಲಿ
ಉದ್ಯಮಿಗಳು ಮಾತ್ರವಲ್ಲ, ವಾಣಿಜ್ಯ ತೆರಿಗೆ, ಕಾನೂನು ಸಲಹೆ, ತೆರಿಗೆ ಸಲಹೆಗಾರು ಹೀಗೆ ಪ್ರತಿಯೊಬ್ಬರಲ್ಲೂ ಗೊಂದಲಗಳಿವೆ. ಸರಕು ವಿಷಯದಲ್ಲಿ ಗೊಂದಲ ನಿವಾರಣೆ ಆಗಿದ್ದರೂ, ಸೇವಾ ತೆರಿಗೆ ವಿಧಿಸುವ ವಿಷಯದಲ್ಲಿ ಮಾತ್ರ ಗೊಂದಲ ನಿವಾರಣೆ ಆಗಿಲ್ಲ. ವ್ಯಾಪಾರಿಗಳು ಕೇಳುವ ಅನುಮಾನಗಳಿಗೆ ಉತ್ತರಿಸುವಲ್ಲಿ ಅಧಿಕಾರಿಗಳು, ತೆರಿಗೆ ಸಲಹೆಗಾರರು, ಕಾನೂನು ಪಂಡಿತರಿಗೂ ಸಾಧ್ಯವಾಗುತ್ತಿಲ್ಲ. ಹೀಗಾಗಿ ಕಾನೂನು ಜಾರಿಯಾಗಿ ನಾಲ್ಕು ದಿನ 
ಕಳೆದರೂ ಜವಳಿ ಉದ್ಯಮ ಹೊರತಾಗಿ ಇತರೆ ಬಹುತೇಕ ಎಲ್ಲ ವ್ಯಾಪಾರಿಗಳ ವಹಿವಾಟು ಮಾತ್ರ ಆರಂಭಗೊಂಡಿಲ್ಲ.
ಹತ್ತಿ-ಅರಳೆ, ದ್ವಿದಳ, ಆಹಾರ ಧಾನ್ಯ, ಅಕ್ಕಡಿಕಾಳು, ಎಣ್ಣೆ-ಎಣ್ಣೆಕಾಳು ವ್ಯಾಪಾರ ಸೇರಿದಂತೆ ಎಪಿಎಂಸಿ ಸೇರಿದಂತೆ
ಜಿಲ್ಲೆಯ ಬಹುತೇಕ ವ್ಯಾಪಾರ-ವಹಿವಾಟು ಸ್ಥಗಿತಗೊಂಡಿದೆ. ಇದಕ್ಕಾಗಿ ಕಳೆದ ನಾಲ್ಕು ದಿನಗಳಲ್ಲಿ ವಾಣಿಜ್ಯ ತೆರಿಗೆ ಅಧಿಕಾರಿಗಳು, ಎಪಿಎಂಸಿ ವರ್ತಕರು, ಸಗಟು ವ್ಯಾಪಾರಿಗಳು, ತೆರಿಗೆ ಕಾನೂನು ಹಾಗೂ ಸಲಹೆಗಾರರ ಸಭೆ ನಡೆಸಿ ಜಾಗೃತಿ ಮೂಡಿಸಲು ಮುಂದಾಗಿದ್ದರೂ ಗೊಂದಲ ಮಾತ್ರ ನಿವಾರಣೆ ಆಗಿಲ್ಲ. ಜಿಎಸ್‌ಟಿ ಕಾನೂನು ಜಾರಿಗೆ ಮುನ್ನ ದೇಶದಲ್ಲಿ ಸಾಕಷ್ಟು ಮೊದಲು ಜನರಲ್ಲಿ ಜಾಗೃತಿ ಮೂಡಿಸಬೇಕಿತ್ತು. ಸಣ್ಣ ಗೊಂದಲಗಳೂ ಇಲ್ಲದಂತೆ ಸಣ್ಣ ವಸ್ತು-ಸೇವೆ ವಿಷಯದಲ್ಲೂ ಪೂರ್ಣ ಪ್ರಮಾಣದಲ್ಲಿ ಜನರಲ್ಲಿ ಕಾನೂನಿನ ಅರಿವು ಮೂಡಿಸಬೇಕಿತ್ತು. ಆದರೆ ಪೂರ್ವ ಸಿದ್ಧತೆ ಇಲ್ಲದೇ ಸರ್ಕಾರ ಜಾರಿಗೆ ತಂದಿರುವ ಕಾಯ್ದೆ ಸಮಸ್ಯೆಗಳನ್ನು ಸೃಷ್ಟಿಸಿದೆ. ಈ ಕುರಿತು ಕೇಳುವ ಅನುಮಾನಗಳಿಗೆ ಸ್ವಯಂ ಅಧಿಕಾರಿಗಳು, ಕಾನೂನು ಪಂಡಿತರು, ತೆರಿಗೆ ಸಲಹೆಗಾರರಲ್ಲೇ ವಿರೋಧಾಭಾಸಗಳಿವೆ. ಯಾವುದಕ್ಕೆ, ಎಷ್ಟು ತೆರಿಗೆ ವಿಧಿ ಸಬೇಕು ಎಂಬ ವಿಷಯದಲ್ಲೂ ಪರಸ್ಪರ ಗೊಂದಲಗಳಿವೆ. ಹೀಗಾಗಿ ಜಿಲ್ಲೆಯಲ್ಲಿ ಬಹುತೇಕ ಉದ್ಯಮಗಳ ವ್ಯಾಪಾರ-ವಹಿವಾಟು ಸ್ಥಗಿತಗೊಂಡಿವೆ.

ಎಪಿಎಂಸಿ ವರ್ತಕರು ಸಂಗ್ರಹಿಸುವ ಶೇ. 2ರಷ್ಟು ಕಮೀಷನ್‌ ವಿಷಯದಲ್ಲಿ ಗೊಂದಲ ಇದೆ. ಈ ಕಮೀಷನ್‌ ಕಡಿತ ಮಾಡುತ್ತಿರುವುದು ಸೇವಾ ತೆರಿಗೆಯಲ್ಲಿ ಬರುವುದೋ, ಇಲ್ಲವೋ ಎಂಬ ಗೊಂದಲ ನಿವಾರಣೆ ಆಗಿಲ್ಲ. ಹೀಗಾಗಿ ಸೇವಾ
ತೆರಿಗೆ ವಿಧಿಸುವ ವಿಷಯದಲ್ಲಿ ಸ್ಪಷ್ಟೀಕರಣ ಆಗಿಲ್ಲ. ಒಂದೊಮ್ಮೆ ಕಮೀಷನ್‌ ಕಡಿತ ಮಾಡಿಕೊಂಡ ಬಳಿಕ ಇದು ಜಿಎಸ್‌ಟಿ ಕಾನೂನಿಗೆ ವಿರುದ್ಧ ಎಂದು ತಕರಾರು ಉಂಟಾಗಿ, ದೂರುಗಳು ಬಂದಲ್ಲಿ ಇಲ್ಲದ ಸಮಸ್ಯೆ ಎದುರಿಸಬೇಕಾಗುತ್ತದೆ. ರೈತರ ಜೊತೆಗೆ ಹೊಂದಿರುವ ವ್ಯಾಪಾರ ವಿಶ್ವಾಸಾರ್ಹತೆಗೂ ಧಕ್ಕೆ ಆಗಲಿದೆ. ಹೀಗಾಗಿ ಈ ಗೊಂದಲದ ಕುರಿತು ಸಂಶಯ ನಿವಾರಣೆ ಆಗದ ಹೊರತು ವ್ಯಾಪಾರ ಆರಂಭಿಸದಿರಲು ನಿರ್ಧರಿಸಿದ್ದಾರೆ.

ಪರಿಣಾಮ ಜಿಲ್ಲೆಯ ಬಹುತೇಕ ಎಲ್ಲ ಉದ್ಯಮಗಳು ಸ್ಥಗಿತಗೊಂಡಿದ್ದು, ಶೇ. 40ರಷ್ಟು ಸರಕು ಸಾಗಾಣಿಕೆ ವಾಹನಗಳು
ಸಂಚಾರ ಸ್ಥಗಿತಗೊಳಿಸಿವೆ. ಎಪಿಎಂಸಿ ವರ್ತಕರು ವಹಿವಾಟು ಸ್ಥಗಿತಗೊಳಿಸಿರುವ ಕಾರಣ ಗ್ರಾಮೀಣ ಭಾಗದಿಂದ ಬರುವ ರೈತರ ಕೃಷಿ ಉತ್ಪನ್ನಗಳ ಸಾಗಾಣಿಕೆಯೂ ಸ್ಥಗಿತವಾಗಿದೆ. ಹೀಗಾಗಿ ಸರಕು ಸಾರಿಗೆ ವ್ಯವಸ್ಥೆ ಮೇಲೂ ಪರಿಣಾಮ ಬೀರಿದ್ದು ಸಾಕಷ್ಟು ಆರ್ಥಿಕ ನಷ್ಟವಾಗಿದೆ. ಇದರಿಂದ ಚಾಲಕರು ಹಾಗೂ ಸಹಾಯಕರು ಉದ್ಯೋಗ ಇಲ್ಲದೇ ಸಂಬಳಕ್ಕೂ ಸಂಚಕಾರ ಬಂದಿದೆ. ಜಿಎಸ್‌ಟಿ ಜಾರಿ ವಿಷಯದಲ್ಲಿ ವ್ಯಾಪಾರಿಗಳಲ್ಲಿ ಮೂಡಿರುವ ಆತಂಕ ಹಾಗೂ ಸಾರ್ವಜನಿಕರಲ್ಲಿ ಉಂಟಾಗಿರುವ ಅನುಮಾನ ನಿವಾರಣೆಗೆ ಅ ಧಿಕಾರಿಗಳು ಕಾರ್ಯೋನ್ಮುಖರಾಗಿದ್ದಾರೆ. ವಾಣಿಜ್ಯ
ತೆರಿಗೆ ಇಲಾಖೆ ಜಂಟಿ ಆಯುಕ್ತ ಕಚೇರಿಯಿಂದ ಸ್ಥಳೀಯ ಅಧಿಕಾರಿಗಳು ಸ್ಪಷ್ಟೀಕರಣ ಕೋರಿದ್ದು, ಅನುಭವಿ ಅ ಧಿಕಾರಿಗಳಿಂದ ಸ್ಪಷ್ಟೀಕರಣಕ್ಕೆ ಕಾಯಲಾಗುತ್ತಿದೆ. ಬರುವ ಒಂದೆರಡು ದಿನಗಳಲ್ಲಿ  ಈ ವಿಷಯದಲ್ಲಿ ಸಂಪೂರ್ಣ ಗೊಂದಲ ನಿವಾರಣೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ವಾಣಿಜ್ಯ ತೆರಿಗೆ ಇಲಾಖೆ ಮೂಲಗಳು ಸ್ಪಷ್ಟಪಡಿಸಿವೆ.
ಇದರ ಹೊರತಾಗಿ ಸಾಮಾನ್ಯವಾಗಿ ವ್ಯಾಪಾರ ಕಡಿಮೆ ಇರುವ ಆಷಾಢ ಮಾಸದಲ್ಲೇ ಜಿಎಸ್‌ಟಿ ಜಾರಿಗೊಂಡಿದ್ದು, ಜವಳಿ ಉದ್ಯಮ  ಎಂದಿನಂತೆ ವಹಿವಾಟು ಆರಂಭಿಸಿದೆ. ಜಿಎಸ್‌ಟಿ ವಿಷಯದಲ್ಲಿ ಸಂಪೂರ್ಣ ಮಾಹಿತಿ ದೊರೆಯದಿದ್ದರೂ ಜನಸಾಮಾನ್ಯರು ಮಾಧ್ಯಮಗಳ ವರದಿಗಳಿಂದ ಜಾಗೃತಿ ಹೊಂದಿದ್ದು, ತಕರಾರು ತೆಗೆಯುತ್ತಿಲ್ಲ. ಇನ್ನು ದೊಡ್ಡ ಮಟ್ಟದ ಸಗಟು ಕಿರಾಣಿ ವ್ಯಾಪಾರಿಗಳಲ್ಲಿ ಗೊಂದಲ ಇದ್ದರೂ, ಸಣ್ಣ ವ್ಯಾಪಾರಿಗಳಿಂದ ಅಗತ್ಯ ವಸ್ತುವಿನ ಪೂರೈಕೆ ಒತ್ತಡದ ಕಾರಣ ಕಿರಾಣಿ ವಹಿವಾಟು ಸರಾಗವಾಗಿದೆ. ಹೋಟೆಲ್‌ ಉದ್ಯಮ ಸಹಜವಾಗಿಯೇ ನಡೆದಿದೆ.

ಜಿಎಸ್‌ಟಿ ಅನುಷ್ಠಾನದ ವಿಷಯದಲ್ಲಿ ಹಲವು ಗೊಂದಲಗಳಿರುವ ಕಾರಣ ಜಿಲ್ಲೆಯ ಬಹುತೇಕ ಉದ್ಯಮಗಳು ಸ್ಥಗಿತಗೊಂಡಿವೆ. ವ್ಯಾಪಾರಿಗಳಲ್ಲಿ ಮೂಡಿರುವ ಕೆಲ ಅನುಮಾನಗಳಿಗೆ ಸಂಪೂರ್ಣ ತೃಪ್ತಿದಾಯಕ ಸ್ಪಷ್ಟೀಕರಣ ದೊರೆಯದ ಹೊರತು ಯಾವುದೇ ವಹಿವಾಟು ಆರಂಭಿಸುವುದಿಲ್ಲ. 
ರವೀಂದ್ರ, ಅಧ್ಯಕ್ಷರು ಮರ್ಚೆಂಟ್‌ ಅಸೋಶಿಯೇಶನ್‌, ವಿಜಯಪುರ

Advertisement

ತೆರಿಗೆ ವಂಚಕ ಜವಳಿ ಉದ್ಯಮಿಗಳು ಮಾತ್ರ ಜಿಎಸ್‌ಟಿ ವಿರೋಧಿಸಿ ಪ್ರತಿಭಟಿಸುತ್ತಿದ್ದಾರೆ. ಆದರೆ ನೈಜ ವ್ಯಾಪಾರ ಮಾಡುವ ಜವಳಿ ಅಂಗಡಿಯವರು ಸಹಜವಾಗಿ ವಹಿವಾಟು ನಡೆಸಿದ್ದಾರೆ. ತೆರಿಗೆ ಹೆಸರಿನಲ್ಲಿ ಪರೋಕ್ಷವಾಗಿ
ಗ್ರಾಹಕರನ್ನು ವಂಚಿಸುತ್ತಿದ್ದ ವ್ಯಾಪಾರಿಗಳಿಗೆ ಮಾತ್ರ ಇದು ತೊಂದರೆಯಾಗಿದೆ. ನಮಗೇನೂ ಸಮಸ್ಯೆ ಇಲ್ಲ.
ವಿಶ್ವನಾಥ ಭಾವಿ, ಅಧ್ಯಕ್ಷರು, ಜಿಲ್ಲಾ ಜವಳಿ ವ್ಯಾಪಾರಿಗಳ ಸಂಘ, ವಿಜಯಪುರ 

ಜಿ.ಎಸ್‌. ಕಮತರ

Advertisement

Udayavani is now on Telegram. Click here to join our channel and stay updated with the latest news.

Next