Advertisement

ಉ.ಕ.ದತ್ತ ಮುಖಮಾಡದ ಬಹುತೇಕ ಸಚಿವರು

06:10 AM Sep 02, 2018 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಪರಮೇಶ್ವರ್‌ ತಲಾ ಒಂದು ಬಾರಿ ಉತ್ತರ ಕರ್ನಾಟಕದತ್ತ ಮುಖಮಾಡಿದ್ದರೆ, ಹಲವು ಸಚಿವರು ಉ.ಕ. ಜಿಲ್ಲೆಗಳತ್ತ  ತಿರುಗಿಯೂ ನೋಡಿಲ್ಲ. ಸಚಿವರಾದ ಡಿ.ಕೆ.ಶಿವಕುಮಾರ್‌, ಕೃಷ್ಣ ಬೈರೇಗೌಡ, ಆರ್‌.ವಿ. ದೇಶಪಾಂಡೆ, ಕೃಷಿ ಸಚಿವ ಶಿವಶಂಕರ ರೆಡ್ಡಿ ಹೊರತುಪಡಿಸಿದರೆ ಬಹುತೇಕ ಸಚಿವರು ತಮ್ಮ ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದ್ದಾರೆ. 

Advertisement

ಈ ರೀತಿಯ ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ ಉ.ಕ.ಹೋರಾಟ ಸಮಿತಿ ಮುಖಂಡರು ವಿವಿಧ ಸಂಘಟನೆಗಳೊಂದಿಗೆ ಸೆ.23 ರಂದು ಬಾಗಲಕೋಟೆಯಲ್ಲಿ ಪ್ರತ್ಯೇಕ ರಾಜ್ಯದ ಮುಂದಿನ ಹೋರಾಟ ಕುರಿತಂತೆ ಸಭೆ ನಡೆಸಲು ನಿರ್ಧರಿಸಿದ್ದು, ಹೋರಾಟವನ್ನು ತೀವ್ರಗೊಳಿಸಲು ಮುಂದಾಗಿದ್ದಾರೆ.

ದೋಸ್ತಿ ಸರ್ಕಾರ ಆರಂಭದಿಂದಲೂ ಉ.ಕ.ಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿರುವುದಲ್ಲದೆ ಪ್ರತ್ಯೇಕ ಉತ್ತರ ಕರ್ನಾಟಕಕ್ಕಾಗಿ  ಹೋರಾಟ ಸಮಿತಿ ಒಂದು ಕೋಟಿ ಸಹಿ ಸಂಗ್ರಹ ಕಾರ್ಯ ಆರಂಭಿಸಿದೆ. ಈಗಾಗಲೇ 66 ಲಕ್ಷ ಜನರು ಸಹಿ ಮಾಡಿದ್ದು ಉ.ಕ.ದ 13 ಜಿಲ್ಲೆಗಳ ಜನರು ಸಹಿ ಮಾಡುವ ಮೂಲಕ ಪ್ರತ್ಯೇಕ ರಾಜ್ಯಕ್ಕೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.

ಉ.ಕ.ದ ಕಡೆಗಣನೆ ಆಗುತ್ತಿದೆ ಎಂದು ಆರೋಪಿಸಿ ಅನೇಕ ಸಂಘ ಸಂಸ್ಥೆಗಳು ಪ್ರತ್ಯೇಕ ರಾಜ್ಯಕ್ಕಾಗಿ ಆ.2 ರಂದು ಬಂದ್‌ ಕರೆ ನೀಡಿದ್ದವು. ಆ ಸಂದರ್ಭದಲ್ಲಿ ಎಚ್ಚೆತ್ತುಕೊಂಡಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಈ ಭಾಗಕ್ಕೆ ಯಾವುದೇ ರೀತಿಯ ಅನ್ಯಾಯ ಮಾಡುವುದಿಲ್ಲ ಎಂಬ ಭರವಸೆ ನೀಡಿದ್ದರು.

ಜುಲೈ 31 ರಂದು ಉತ್ತರ ಕರ್ನಾಟಕ ಹೋರಾಟಗಾರರ ತುರ್ತು ಸಭೆ ನಡೆಸಿದ್ದ ಕುಮಾರಸ್ವಾಮಿ, ಹತ್ತಕ್ಕೂ ಹೆಚ್ಚು ಇಲಾಖೆಗಳನ್ನು ಬೆಳಗಾವಿಯ ಸುವರ್ಣ ಸೌಧಕ್ಕೆ ವರ್ಗಾವಣೆ ಮಾಡುವುದಾಗಿ ತಿಳಿಸಿದ್ದರು. ಉಪ ಲೋಕಾಯುಕ್ತರ ಕಚೇರಿ, ಮಾಹಿತಿ ಹಕ್ಕು ಆಯೋಗದ ಆಯುಕ್ತರ ಕಚೇರಿ ಉ.ಕ. ಹಾಗೂ ಹೈ-ಕ ಅಭಿವೃದ್ಧಿ ಮಂಡಳಿಯ ಆಯುಕ್ತರ ಕಚೇರಿಯನ್ನು ಶಾಶ್ವತವಾಗಿ ಕಲಬುರಗಿಗೆ ಸ್ಥಳಾಂತರಿಸುವುದಾಗಿ ಹೇಳಿದ್ದರು. 

Advertisement

ಮುಖ್ಯಮಂತ್ರಿ ಭರವಸೆ ನೀಡಿ ತಿಂಗಳು ಕಳೆದರೂ ಯಾವುದೇ ಕಚೇರಿಗಳು  ಸ್ಥಳಾಂತರಗೊಂಡಿಲ್ಲ. ಬದಲಾಗಿ ಬೆಳಗಾವಿಯಲ್ಲಿದ್ದ ಕೆಶಿಪ್‌ ಕಚೇರಿ ಹಾಗೂ ಆಯುಷ್‌ ಕಚೇರಿಯನ್ನು ಹಾಸನಕ್ಕೆ ಸ್ಥಳಾಂತರಿಸಲಾಗಿದೆ. ಅಲ್ಲದೇ ಚುನಾವಣೆಗೂ ಮೊದಲು ಹುಬ್ಬಳ್ಳಿಯಲ್ಲಿ ಮನೆ ಮಾಡಿದ್ದ ಕುಮಾರಸ್ವಾಮಿ ಚುನಾವಣೆ ನಂತರ ಆ ಕಡೆ ತಿರುಗಿಯೂ ನೋಡಲಿಲ್ಲ ಎಂಬ ಆರೋಪವಿದೆ. ಅಲ್ಲದೆ,  ಆಲಮಟ್ಟಿ ಜಲಾಶಯ ಭರ್ತಿಯಾಗಿ ಬಾಗಿನ ಅರ್ಪಿಸಲು ತೆರಳುವುದಾಗಿ ಹೇಳಿದ್ದ ಮುಖ್ಯಮಂತ್ರಿ  ಹವಾಮಾನ ವೈಪರಿತ್ಯದ ಹಿನ್ನೆಲೆಯಲ್ಲಿ  ಬೆಂಗಳೂರಿಗೆ ವಾಪಸ್‌ ಆಗಿದ್ದರು.

ಇನ್ನು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಕೂಡ ಉತ್ತರ ಕರ್ನಾಟಕದ ಕಡೆಗೆ ಮುಖ ಮಾಡಿಲ್ಲ. ರಾಹುಲ್‌ ಗಾಂಧಿ ಪಕ್ಷದ ಪ್ರಚಾರ ಕಾರ್ಯಕ್ರಮಕ್ಕೆ ಬೀದರ್‌ಗೆ ಬಂದಾಗ ಭೇಟಿ ನೀಡಿದ್ದ ಪರಮೇಶ್ವರ್‌ ಆಡಳಿತಾತ್ಮಕ ವಿಷಯ ಕುರಿತಂತೆ ಉ.ಕ.ದ ಯಾವ ಜಿಲ್ಲೆಯಲ್ಲೂ  ಪ್ರವಾಸ ಕೈಗೊಂಡಿಲ್ಲ. 

ಸೆ.23 ರಂದು ಸಭೆ ಸೇರಿ ಮುಂದಿನ ಹೋರಾಟದ ಕುರಿತು ತೀರ್ಮಾನ ಕೈಗೊಳ್ಳಲಾಗುವುದು. ಪ್ರತ್ಯೇಕ ರಾಜ್ಯಕ್ಕಾಗಿ ಈಗಾಗಲೇ ಸಹಿ ಸಂಗ್ರಹ ಆರಂಭಿಸಿದ್ದು, 1 ಕೋಟಿ ಸಹಿ ಸಂಗ್ರಹಿಸಿ ಪ್ರಧಾನಿ ಮತ್ತು  ರಾಷ್ಟ್ರಪತಿಗೆ ಕಳುಹಿಸಲು ನಿರ್ಧರಿಸಿದ್ದೇವೆ.
– ನಾಗೇಶ್‌ ಗೋಲಶೆಟ್ಟಿ, ಉ.ಕ. ಹೋರಾಟ ಸಮಿತಿ, ಪ್ರಧಾನ ಕಾರ್ಯದರ್ಶಿ 

ಯಾರ ಭೇಟಿ ಎಷ್ಟು ಬಾರಿ?
ಸಚಿವರಾದ ಆರ್‌.ವಿ.ದೇಶಪಾಂಡೆ, ರಾಜಶೇಖರ ಪಾಟೀಲ್‌, ಶಿವಶಂಕರ ರೆಡ್ಡಿ ಆರು ಜಿಲ್ಲೆಗಳಿಗೆ ಭೇಟಿ ನೀಡಿದ್ದಾರೆ. ಸಿ.ಎಸ್‌. ಪುಟ್ಟರಾಜು, ವೆಂಕಟರಮಣಪ್ಪ, ಕೆ.ಜೆ. ಜಾರ್ಜ್‌, ಸಾ.ರಾ. ಮಹೇಶ್‌, ಜಯಮಾಲಾ ಹಾಗೂ ಪುಟ್ಟರಂಗಶೆಟ್ಟಿ ಉ.ಕ.ದ ಯಾವ ಜಿಲ್ಲೆಗೂ ಭೇಟಿ ನೀಡದೇ ನೂರು ದಿನ ಕಳೆದಿದ್ದಾರೆ.

– ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next