ಮುಂಬಯಿ: ದೇಶದಲ್ಲಿ ಅಪೌಷ್ಟಿಕತೆಯ ಸಮಸ್ಯೆ ಬಹಳ ಹಿಂದಿನಿಂದಲೂ ಕಂಡುಬಂದಿದೆ. ಮಕ್ಕಳಿಗೆ ಮತ್ತು ತಾಯಂದಿರಿಗೆ ಯೋಗ್ಯ ಪೌಷ್ಟಿಕ ಆಹಾರ ದೊರೆಯದ ಕಾರಣ ಈ ಸಮಸ್ಯೆ ಕಂಡುಬರುತ್ತಿದೆ. ಅದರಲ್ಲೂ ಇದರಲ್ಲಿ ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಅಪೌಷ್ಟಿಕ ಮಕ್ಕಳಿ¨ªಾರೆ ಎಂದು ವರದಿಯಿಂದ ಬಹಿರಂಗಗೊಂಡಿದೆ.
ಸರಕಾರವು ಮಾಹಿತಿ ಹಕ್ಕು ಕಾಯಿದೆಯಡಿ ನೀಡಿರುವ ಇತ್ತೀಚಿನ ಅಂಕಿಅಂಶಗಳಿಂದ ಮಾಹಿತಿ ತಿಳಿದುಬಂದಿದೆ. ಬಡತನದಿಂದಾಗಿ ಲಕ್ಷಾಂತರ ತಾಯಂದಿರು ಪೌಷ್ಟಿಕ ಆಹಾರದಿಂದ ವಂಚಿತರಾಗಿರುವುದರಿಂದ ಹೆಚ್ಚಿನ ಸಂಖ್ಯೆಯ ಮಕ್ಕಳು ಅಪೌಷ್ಟಿಕತೆಯಿಂದ ಜನಿಸುತ್ತಿದ್ದಾರೆ.
ವರದಿಯ ಪ್ರಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಆರ್‌ಟಿಐ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದು, ದೇಶದಲ್ಲಿ 33 ಲಕ್ಷಕ್ಕೂ ಹೆಚ್ಚು ಅಪೌಷ್ಟಿಕ ಮಕ್ಕಳಿದ್ದು, ಅವರಲ್ಲಿ ಅರ್ಧಕ್ಕಿಂತ ಹೆಚ್ಚು ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇದರಲ್ಲಿ ಮಹಾರಾಷ್ಟ್ರ, ಬಿಹಾರ ಮತ್ತು ಗುಜರಾತ್‌ಗಳಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. 2011ರ ಜನಗಣತಿ ಪ್ರಕಾರ ದೇಶದಲ್ಲಿ 46 ಕೋಟಿಗೂ ಹೆಚ್ಚು ಮಕ್ಕಳಿದ್ದಾರೆ. 2020ರ ನವೆಂಬರ್‌ನಲ್ಲಿ 9.27 ಲಕ್ಷಗಳಷ್ಟಿತ್ತು. ಅದೇ 2021ರ ಅಕ್ಟೋಬರ್ ವೇಳೆಗೆ ಅಪೌಷ್ಟಿಕ ಮಕ್ಕಳ ಸಂಖ್ಯೆ 17.76 ಲಕ್ಷಕ್ಕೆ ಏರಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಶೇ. 91ರಷ್ಟು ಹೆಚ್ಚಾಗಿದೆ.
ಮಹಾರಾಷ್ಟ್ರದಲ್ಲಿ ಅಪೌಷ್ಟಿಕ ಮಕ್ಕಳ ಸಂಖ್ಯೆ 6.16 ಲಕ್ಷಗಳಷ್ಟಿದ್ದು. ದೇಶದಲ್ಲಿ ಅಪೌಷ್ಟಿಕ ಮಕ್ಕಳ ಸಂಖ್ಯೆಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಈ ಪೈಕಿ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ 4.58 ಲಕ್ಷದಷ್ಟಿದೆ. ಅದೇ 1.57 ಲಕ್ಷ ಮಕ್ಕಳು ಮಧ್ಯಮ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ.
ಗರ್ಭಾವಸ್ಥೆಯಿಂದಲೇ ಕ್ರಮ ಅಗತ್ಯ:
ಅಪೌಷ್ಟಿಕತೆಯ ಸಮಸ್ಯೆಯನ್ನು ಪರಿಹರಿಸಲು ತತ್‌ಕ್ಷಣದ ಕ್ರಮಗಳ ಅಗತ್ಯವಿದೆ ಎಂದು ಅಪೊಲೋ ಆಸ್ಪತ್ರೆಯ ಹಿರಿಯ ಮಕ್ಕಳ ತಜ್ಞ ಅನುಪಮ್ ಸಿಬ್ಬಲ್ ಹೇಳಿದ್ದಾರೆ. ಅಪೌಷ್ಟಿಕತೆಯಿಂದ ಬೇರೆ ಕಾಯಿಲೆಗೆ ತುತ್ತಾಗುವ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಮಕ್ಕಳಲ್ಲಿ ಅಪೌಷ್ಟಿಕತೆಯ ಸಮಸ್ಯೆಯನ್ನು ತೊಡೆದುಹಾಕಲು ಗರ್ಭಾವಸ್ಥೆಯಿಂದಲೇ ಕ್ರಮ ಗಳನ್ನು ತೆಗೆದುಕೊಳ್ಳುವುದು ಆವಶ್ಯಕ. ಹಾಲುಣಿ ಸುವ ತಾಯಂದಿರಿಗೂ ಪೌಷ್ಟಿಕ ಆಹಾರದ ಅಗತ್ಯವಿದೆ. ಇದಕ್ಕಾಗಿ ಆರು ತಿಂಗಳ ವಯಸ್ಸಿನ ಶಿಶುಗಳಿಗೆ ಸರಿಯಾದ ಹಾಲುಣಿಸುವಿಕೆಯನ್ನು ಮತ್ತು ಐದು ವರ್ಷ ವಯಸ್ಸಿನೊಳಗೆ ಸಮತೋಲಿತ ಮತ್ತು ಪೌಷ್ಟಿಕಾಂಶದ ಆಹಾರವನ್ನು ನೀಡುವುದು ಮುಖ್ಯವಾಗಿದೆ ಎಂದು ಸಿಬಲ್ ಹೇಳಿದ್ದಾರೆ.