Advertisement

ಅತೃಪ್ತ ಶಾಸಕರಿಗೇ ಹೆಚ್ಚು ಅನುದಾನ

01:28 AM Jul 15, 2019 | Team Udayavani |

ಬೆಂಗಳೂರು: ಅಭಿವೃದ್ಧಿಗೆ ಅನುದಾನ ನೀಡುತ್ತಿಲ್ಲ ಎಂದು ಆರೋಪಿಸಿ ಅತೃಪ್ತ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ, ವಾಸ್ತವವಾಗಿ ಸಮ್ಮಿಶ್ರ ಸರ್ಕಾರದಲ್ಲಿ ಅತಿ ಹೆಚ್ಚು ಅನುದಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದವರು ಇದೇ ಅತೃಪ್ತರು!

Advertisement

2018-19ನೇ ಸಾಲಿನಲ್ಲಿ ಮಂಡಿಸಿದ ಬಜೆಟ್‌ನಲ್ಲಿ ಆನೇಕಲ್‌ ಸೇರಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳಿಗೆ 8,015.28 ಕೋಟಿ ರೂ. ನೀಡಲಾಗಿದೆ. ಇದರಲ್ಲಿ ಸುಮಾರು ಶೇ.30ರಷ್ಟು ಅನುದಾನ ಈಗ ರಾಜೀನಾಮೆ ಸಲ್ಲಿಸಿರುವ ಆರು ಶಾಸಕರಿಗೇ ಹೋಗಿದೆ. ಆ ಪೈಕಿ ಐವರು ಕಾಂಗ್ರೆಸ್‌ ಶಾಸಕರೇ ಆಗಿದ್ದಾರೆ.

ಅಷ್ಟೇ ಅಲ್ಲ, ಕಳೆದ ಐದು ವರ್ಷಗಳಿಗೆ ಹೋಲಿಸಿದರೆ, ಈ ಆರು ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೆ ಸರಾಸರಿ 286.26 ಕೋಟಿ ರೂ. ಹಂಚಿಕೆಯಾಗಿದೆ. ಹಿಂದಿನ ನಾಲ್ಕು ವರ್ಷಗಳಲ್ಲಿ ಅಂದರೆ 2013-14ರಿಂದ 2017-18ರವರೆಗೆ ಆರೂ ಕ್ಷೇತ್ರಗಳಿಗೆ ಕ್ರಮವಾಗಿ ತಲಾ 35.53 ಕೋಟಿ, 47.49 ಕೋಟಿ, 54.95 ಕೋಟಿ, 209.65 ಕೋಟಿ ಹಾಗೂ 93.14 ಕೋಟಿ ರೂ.ಹಂಚಿಕೆ ಆಗಿತ್ತು.

ಇನ್ನು 2018-19ರಲ್ಲಿ ಅತಿ ಹೆಚ್ಚು ಅನುದಾನ ಗಿಟ್ಟಿಸಿಕೊಂಡು ಗಮನ ಸೆಳೆದವರು ಕಾಂಗ್ರೆಸ್‌ ಶಾಸಕ ಮುನಿರತ್ನ. ಅವರು ಪ್ರತಿನಿಧಿಸುವ ರಾಜರಾಜೇಶ್ವರಿ ನಗರಕ್ಕೆ 557.1 ಕೋಟಿ ಅನುದಾನ ಹಂಚಿಕೆ ಆಗಿದೆ. ಶಾಸಕ ಮಂಜುನಾಥ್‌ (ಜೆಡಿಎಸ್‌) ಪ್ರತಿನಿಧಿಸುವ ದಾಸರಹಳ್ಳಿ ಕ್ಷೇತ್ರಕ್ಕೆ 528 ಕೋಟಿ ರೂ.ನೀಡಲಾಗಿದೆ.

ಅದೇ ರೀತಿ, ಕಳೆದ ಐದು ವರ್ಷಗಳಲ್ಲಿ ಅತ್ಯಧಿಕ ಅನುದಾನ (1,273.82 ಕೋಟಿ ರೂ.) ಹಂಚಿಕೆ ಆಗಿದ್ದು ಕೂಡ ಅದೇ ರಾಜರಾಜೇಶ್ವರಿ ನಗರಕ್ಕೆ. ನಂತರದ ಸ್ಥಾನಗಳಲ್ಲಿ ಎಸ್‌.ಟಿ. ಸೋಮಶೇಖರ್‌ ಪ್ರತಿನಿಧಿಸುವ ಯಶವಂತಪುರ (924 ಕೋಟಿ ರೂ.) ಹಾಗೂ ಬೈರತಿ ಬಸವರಾಜ ಪ್ರತಿನಿಧಿಸುವ ಕೆ.ಆರ್‌. ಪುರ (908.68 ಕೋಟಿ ರೂ.) ಕ್ಷೇತ್ರಗಳಿವೆ ಎಂದು ಬಿಬಿಎಂಪಿ ಮೂಲಗಳು “ಉದಯವಾಣಿ’ಗೆ ತಿಳಿಸಿವೆ.

Advertisement

ಇದೇ ರೀತಿ, ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅಡಿ ಯಶವಂತಪುರ ಮತ್ತು ಕೆ.ಆರ್‌.ಪುರ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಕೈಗೊಳ್ಳಬೇಕಾದ ಯೋಜನೆಗಳ ಬಗ್ಗೆ ಪ್ರಸ್ತಾವನೆ ಸಲ್ಲಿಸಿಲ್ಲ. ಉಳಿದಂತೆ ಬಿಟಿಎಂ ಲೇಔಟ್‌ನಲ್ಲಿ 67 ಲಕ್ಷ ಮೊತ್ತದ 5 ಕಾಮಗಾರಿಗಳು, ಮಹಾಲಕ್ಷ್ಮೀ ಲೇಔಟ್‌ನಲ್ಲಿ 83 ಲಕ್ಷ ಮೊತ್ತದ 4 ಕಾಮಗಾರಿಗಳು, ಶಿವಾಜಿನಗರದಲ್ಲಿ 50 ಲಕ್ಷದ 5 ಕಾಮಗಾರಿಗಳು, ರಾಜರಾಜೇಶ್ವರಿ ನಗರದಲ್ಲಿ 25.75 ಲಕ್ಷ ಮೊತ್ತದ 2 ಕಾಮಗಾರಿಗಳಿಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ.

ಹಿಂದಿನದ್ದೂ ಖರ್ಚಾಗಿಲ್ಲ?: ಅಲ್ಲದೆ, ಹಿಂದಿನ ಐದು ವರ್ಷಗಳ ಲೆಕ್ಕ ಹಾಕಿದರೂ ನಗರಾಭಿವೃದ್ಧಿ ಇಲಾಖೆ ಮಾಹಿತಿ ಪ್ರಕಾರ 2014-15ರಿಂದ 2017-18ರವರೆಗೆ ಬಿಬಿಎಂಪಿ, ಜಲಮಂಡಳಿ ಮತ್ತು ಬಿಎಂಆರ್‌ಸಿ ಸೇರಿ ಪ್ರಮುಖ ಮೂರು ಸಂಸ್ಥೆಗಳಿಗೆ ಸರ್ಕಾರದಿಂದ ವಿವಿಧ ಯೋಜನೆಗಳಿಗಾಗಿ ರಾಜ್ಯ ಬಜೆಟ್‌ನಲ್ಲಿ 16,392 ಕೋಟಿ ರೂ.ಮೀಸಲಿಟ್ಟಿದ್ದು,

ಸುಮಾರು 14 ಸಾವಿರ ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಖರ್ಚಾಗಿದ್ದು 13 ಸಾವಿರ ಕೋಟಿ ರೂ.ಆದರೆ, ಈ ಪೈಕಿ ಬಿಬಿಎಂಪಿ ಪ್ರದರ್ಶನ ನೀರಸವಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ 8,869 ಕೋಟಿ ರೂ.ಮೀಸಲಿಟ್ಟಿದ್ದು, ಈ ಪೈಕಿ 7,648 ಕೋಟಿ ರೂ.ಬಿಡುಗಡೆ ಆಗಿತ್ತು.

ಅನುದಾನವೊಂದೇ ಕಾರಣವಲ್ಲ; ಅತೃಪ್ತರು: ಹೀಗಿರುವಾಗ, ಅತೃಪ್ತ ಶಾಸಕರು ಅನುದಾನ ನೀಡುತ್ತಿಲ್ಲ ಎಂದು ಆರೋಪಿಸುತ್ತಿದ್ದಾರೆ. ಅಲ್ಲದೆ, ಸ್ಥಳೀಯ ಜನರ ಪ್ರತಿಕ್ರಿಯೆಗಳು ಕೂಡ ಇದಕ್ಕೆ ಪೂರಕವಾಗಿದ್ದು, ಕ್ಷೇತ್ರದಲ್ಲಿ ಹಿಂದಿದ್ದ ಸಮಸ್ಯೆಗಳು ಹಾಗೇ ಇವೆ ಎನ್ನುತ್ತಾರೆ.

ಆದರೆ, ಅಂಕಿ-ಅಂಶಗಳು ಹೇಳುವುದೇ ಒಂದು ಹಾಗೂ ವಾಸ್ತವ ಮತ್ತೂಂದು. ಬಜೆಟ್‌ನಲ್ಲಿ ಘೋಷಣೆ ಆಗಿದೆ. ಆದರೆ, ಅದರಲ್ಲಿ ಬಿಡುಗಡೆ ಆಗಿರುವ ಮೊತ್ತ ಕಡಿಮೆ. ಅಲ್ಲದೆ, ಅತೃಪ್ತಿಗೆ ಅನುದಾನ ಕೊರತೆಯೊಂದೇ ಕಾರಣವಲ್ಲ; ಆಡಳಿತ ವೈಖರಿ, ಇನ್ನಿಲ್ಲದ ಹಸ್ತಕ್ಷೇಪಗಳೂ ಕಾರಣವಾಗಿವೆ ಎಂದು ರಾಜೀನಾಮೆ ನೀಡಿದ ಶಾಸಕರು ದೂರುತ್ತಾರೆ.

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next