Advertisement

ಸಗ್ರಿ ವಾರ್ಡ್‌ಗೆ ಹೆಚ್ಚಿನ ಅನುದಾನ: ಪ್ರಮೋದ್‌ ಭರವಸೆ

01:18 PM Mar 26, 2017 | Harsha Rao |

ಉಡುಪಿ: ಪ್ರಾಮಾಣಿಕ ಸೇವೆಯ 1,708 ಕೋ.ರೂ. ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದ್ದರೂ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಬೇಕಿವೆ. ಇದಕ್ಕಾಗಿ ಸರಕಾರದಿಂದ ವಿವಿಧ ಯೋಜನೆಗಳ ಮುಖಾಂತರ ಅನುದಾನ ಒದಗಿಸುವಂತೆ ಬೇಡಿಕೆ ಇಟ್ಟಿದ್ದೇನೆ ಎಂದು ಸಚಿವ ಪ್ರಮೋದ್‌ ಮಧ್ವರಾಜ್‌ ಭರವಸೆ ನೀಡಿದರು.

Advertisement

ಸಗ್ರಿ ಚಕ್ರತೀರ್ಥ ರಸ್ತೆಯ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ಉಡುಪಿ ನಗರಸಭೆ ವ್ಯಾಪ್ತಿಯ “ಸಗ್ರಿ ವಾರ್ಡ್‌ ಮಟ್ಟದ ಜನಸಂಪರ್ಕ ಸಭೆ’ ಅಧ್ಯಕ್ಷತೆ ವಹಿಸಿದ್ದ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಗ್ರಿ ವಾರ್ಡ್‌ ನಗರಸಭೆ ವ್ಯಾಪ್ತಿಯಲ್ಲಿದ್ದರೂ ಇನ್ನಷ್ಟು ಅಭಿವೃದ್ಧಿ ಕಾರ್ಯಗಳ ಬಗ್ಗೆ ಬೇಡಿಕೆಯಿದೆ. ನಗರಸಭೆ ವ್ಯಾಪ್ತಿಯ ಅಭಿವೃದ್ಧಿಗಾಗಿ ಈಗಾಗಲೇ 50 ಕೋ.ರೂ. ಅನುದಾನದ ಬೇಡಿಕೆ ಸಲ್ಲಿಸಿದ್ದು, ಆ ಅನುದಾನದಲ್ಲಿ ಸಗ್ರಿ ವಾರ್ಡ್‌ಗೆ ಹೆಚ್ಚಿನ ಅನುದಾನ ನೀಡುವ ಮೂಲಕ ಹಂತ ಹಂತವಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತೇನೆ ಎಂದರು.

ಪ್ರಜೆಗಳೇ ಪ್ರಭುಗಳು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ “ಪ್ರಜೆಗಳೇ ಪ್ರಭುಗಳು’ ಈ ನೆಲೆಯಲ್ಲಿ ಪ್ರಜೆಗಳ ಕಷ್ಟ-ಕಾರ್ಪಣ್ಯ ಆಲಿಸಬೇಕು, ಬಗೆಹರಿಸಬೇಕೆಂಬ ಸದುದ್ದೇಶದಿಂದ ಸರಕಾರದ ಎಲ್ಲ ಅಧಿಕಾರಿಗಳೊಂದಿಗೆ ಜನರಿದ್ದೆಡೆಗೆ ತೆರಳಿ ಅಹವಾಲು ಸ್ವೀಕರಿಸಿ ಪರಿಹಾರ ನೀಡುವ “ಜನಸಂಪರ್ಕ ಸಭೆ’ಯನ್ನು ಆರಿಸಿಕೊಂಡಿದ್ದೇನೆ ಎಂದರು.

ಸಿದ್ದರಾಮಯ್ಯ ನೇತೃತ್ವದ ಸರಕಾರ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ರಾಜ್ಯದ ಜನರ ವಿಶ್ವಾಸಕ್ಕೆ ಪಾತ್ರವಾಗಿದ್ದು, ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಈವರೆಗೆ ವಿವಿಧ ಇಲಾಖೆಗಳ ಅನುದಾನದಿಂದ 1,708 ಕೋ.ರೂ. ಅಭಿವೃದ್ಧಿಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಒಳಚರಂಡಿ, ಕುಡಿಯುವ ನೀರಿನ ವ್ಯವಸ್ಥೆಗೆ ಉಡುಪಿ
 ವಿಧಾನಸಭಾ ಕ್ಷೇತ್ರಕ್ಕೆ 320 ಕೋ.ರೂ., ನಗರೋತ್ಥಾನ ಕಾರ್ಯಕ್ಕೆ 35 ಕೋ.ರೂ. ಮಂಜೂ ರಾಗಿದೆ ಎಂದು ಅವರು ಹೇಳಿದರು.

ಸವಲತ್ತು ವಿತರಣೆ: ಇದೇ ಸಂದರ್ಭ ಸಚಿವರು ಅರ್ಹ ಫ‌ಲಾನುಭವಿಗಳಿಗೆ ವಿವಿಧ ಪಿಂಚಣಿ, ಸವಲತ್ತು, ಸೌಲಭ್ಯಗಳನ್ನು ವಿತರಿಸಿದರು. ಗ್ರಾಮಸ್ಥರಿಂದ ಅಹವಾಲು ಅರ್ಜಿಗಳನ್ನು ಸ್ವೀಕರಿಸಿದ ಸಚಿವರು ಬಹುತೇಕ ಅರ್ಜಿಗಳಿಗೆ ವಿವಿಧ ಇಲಾಖಾಧಿಕಾರಿಗಳ ಮುಖಾಂತರ ಸ್ಥಳದಲ್ಲಿಯೇ ಪರಿಹಾರ ಸೂಚಿಸಿದರು. 

Advertisement

ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ ತಿಲಕ್‌ರಾಜ್‌, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ. ನರಸಿಂಹಮೂರ್ತಿ, ಉಡುಪಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸತೀಶ್‌ ಅಮೀನ್‌ ಪಡುಕೆರೆ, ಸಗ್ರಿ ವಾರ್ಡ್‌ ಸದಸ್ಯೆ ಲತಾ ಆನಂದ ಶೇರಿಗಾರ್‌, ನಗರಸಭೆ ಸದಸ್ಯರಾದ ಪಿ. ಯುವರಾಜ್‌, ಗಣೇಶ್‌ ನೇರ್ಗಿ, ಜನಾರ್ದನ್‌ ಭಂಡಾರ್ಕರ್‌, ಹಸನ್‌ ಸಾಹೇಬ್‌, ರಮೇಶ್‌ ಪೂಜಾರಿ, ಸುಕೇಶ್‌ ಕುಂದರ್‌, ಸತೀಶ್‌ ಪುತ್ರನ್‌, ಹೇಮಲತಾ ಹಿಲರಿ ಜತ್ತನ್ನ, ಉಡುಪಿ ತಹಶೀಲ್ದಾರ್‌ ಮಹೇಶ್ಚಂದ್ರ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಜನಾರ್ದನ್‌, ಸರ್ಕಲ್‌ ಇನ್ಸ್‌ಪೆಕ್ಟರ್‌ ನವೀನ್‌ ಚಂದ್ರ ಜೋಗಿ ಹಾಗೂ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

ನಗರಸಭೆ ಪೌರಾಯುಕ್ತ ಡಿ. ಮಂಜುನಾಥಯ್ಯ ಸ್ವಾಗತಿಸಿ ಪ್ರಸ್ತಾವನೆಗೈದರು. ಸುಧಾಕರ ಪೆರಂಪಳ್ಳಿ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next