ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಫಲಿತಾಂಶ ಪ್ರಕಟಗೊಂಡಿದ್ದು, ಇದು ರಾಜ್ಯದ ಲೋಕಸಭಾ ಇತಿಹಾಸದಲ್ಲಿ ಹಲವು ದಾಖಲೆಗಳನ್ನು ಹುಟ್ಟು ಹಾಕಿದೆ. ಬಿಜೆಪಿ ಪ್ರಚಂಡ ಗೆಲುವು ಸಾಧಿಸಿದ್ದು 25 ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ತೆದುಕೊಂಡಿದೆ. ಅದೇ ರೀತಿ, ಮೈತ್ರಿ ಪಕ್ಷಗಳು ತೀವ್ರ ಮುಖಭಂಗ ಅನುಭವಿಸಿದ್ದು, ತಲಾ 1 ಸೀಟುಗಳಿಗೆ ಸೀಮಿತವಾಗಿವೆ. ಈ ಮಧ್ಯೆ, ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದಿರುವ ಸುಮಲತ ಅಂಬರೀಶ್ ದಾಖಲೆ ಬರೆದಿದ್ದಾರೆ.
ಮತ್ತೂಂದಡೆ, ಘಟಾನುಘಟಿಗಳು ಸೋಲು ಕಂಡಿದ್ದು, ಕೆಲವು ಅಚ್ಚರಿ ಫಲಿತಾಂಶಗಳು ಹೊರಬಿದ್ದಿವೆ. ಹಲವು ದಶಕಗಳ ಬಳಿಕ ಬಿಜೆಪಿ ಒಂದೇ ಪಕ್ಷಕ್ಕೆ ಅತಿ ಹೆಚ್ಚು ಸ್ಥಾನಗಳು ಸಿಕ್ಕಿದ್ದರೆ, ಕಾಂಗ್ರೆಸ್ ಪಕ್ಷ ಕೇವಲ ಒಂದು ಸ್ಥಾನದಲ್ಲಿ ಗೆದ್ದು ತೀವ್ರ ಮುಖಭಂಗ ಎದುರಿಸಿದೆ. ಕುಟುಂಬ ರಾಜಕಾರಣಕ್ಕೆ ಈ ಚುನಾವಣೆಯಲ್ಲಿ ಮಿಶ್ರ ಫಲಿತಾಂಶ ಸಿಕ್ಕಿದ್ದು, ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಸ್ವಾಮಿಯನ್ನು ಸೋಲಿಸುವ ಮೂಲಕ ಹಳೆ ಮೈಸೂರು ಭಾಗದ ಮತದಾರರು ಕುಟುಂಬ ರಾಜಕಾರಣವನ್ನು ತಿರಿಸ್ಕರಿಸಿದ್ದರೆ,
ಸೋಲಿಲ್ಲದ ಸರದಾರ ಮಲ್ಲಿಕಾರ್ಜುನ ಖರ್ಗೆಯವರನ್ನು ಸೋಲಿಸಿರುವ ಉತ್ತರ ಕರ್ನಾಟಕದ ಮತದಾರರು, ಡಾ.ಉಮೇಶ್ ಜಾಧವ್ ಹಾಗೂ ಅವರ ಪುತ್ರ ಡಾ.ಅವಿನಾಶ್ ಜಾಧವ್ ಅವರನ್ನು ಗೆಲ್ಲಿಸುವ ಮೂಲಕ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ, ಎಂ.ವೀರಪ್ಪ ಮೊಯ್ಲಿ ಅವರಂತ ಘಟಾನುಘಟಿಗಳು ಮುಗ್ಗರಿಸಿದ್ದು ಈ ಬಾರಿಯ ಫಲಿತಾಂಶದ ವಿಪರ್ಯಾಸ. ಎಸ್. ಮುನಿಸ್ವಾಮಿ, ವೈ.ದೇವೇಂದ್ರಪ್ಪ ಅವರು ಅಚ್ಚರಿಯ ಗೆಲುವು ಪಡೆದಿದ್ದಾರೆ. ತೇಜಸ್ವಿ ಸೂರ್ಯ ಹಾಗೂ ಪ್ರಜ್ವಲ್ ರೇವಣ್ಣ ಇವರಿಬ್ಬರಿಗೆ 28 ವರ್ಷ ವಯಸ್ಸಿನಲ್ಲಿ ಲೋಕಸಭೆ ಪ್ರವೇಶಿಸುವ ಸೌಭಾಗ್ಯ ಸಿಕ್ಕಿದೆ.
ರಾಜ್ಯದ 28 ಕ್ಷೇತ್ರಗಳಿಗೆ ಎಪ್ರಿಲ್ 18 ಮತ್ತು 23ರಂದು ಎರಡು ಹಂತಗಳಲ್ಲಿ ಮತದಾನ ನಡೆದಿತ್ತು. ಒಟ್ಟು 478 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. 5.10 ಕೋಟಿ ಮತದಾರರ ಪೈಕಿ, 3.50 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ಮಂಡ್ಯದಲ್ಲಿ ಅತಿ ಹೆಚ್ಚು ಶೇ.81ರಷ್ಟು ಮತದಾನ ಆಗಿದ್ದರೆ, ಅತಿ ಕಡಿಮೆ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಶೇ.54ರಷ್ಟು ಮತದಾನ ಆಗಿತ್ತು. ಒಟ್ಟಾರೆ ಮತದಾನ ಶೇ.68.61ರಷ್ಟು ಆಗಿದ್ದು, ಅದು ಈವರೆಗಿನ ದಾಖಲೆ ಆಗಿತ್ತು.
ಹೊರಗಡೆಯೂ ಜಿಗಜಿಣಗಿ ಹೀರೋ: ಜಿಗಜಿಣಗಿ ಅವರು ತವರು ಕ್ಷೇತ್ರ ತೊರೆದು ನೆರೆಯ ಚಿಕ್ಕೋಡಿ ಕ್ಷೇತ್ರಕ್ಕೆ ವಲಸೆ ಹೋಗಿ ಮೊದಲ ಯತ್ನದಲ್ಲೇ ವಿಜಯ ಸಾಧಿಸಿದ್ದರು. ರಾಷ್ಟ್ರ ರಾಜಕಾರಣದಲ್ಲಿ (ರತ್ನಮಾಲಾ ಸವಣೂರು ವಿರುದ್ಧ ಮೊದಲ ಬಾರಿ ಶಂಕರಾನಂದ ಸೋತಿದ್ದರು.) ಸೋಲಿಲ್ಲದ ಸರದಾರ ಎಂದೇ ಕರೆಸಿಕೊಂಡಿದ್ದ ಕಾಂಗ್ರೆಸ್ ಪಾಳೆಯದಲ್ಲಿ ಕೇಂದ್ರದಲ್ಲಿ ಪ್ರಭಾವಿ ನಾಯಕರಾಗಿದ್ದ ಹಿರಿಯ ಬಿ.ಶಂಕರಾನಂದ ಅವರನ್ನು ಸೋಲಿಸಿದ್ದರು. ಅಲ್ಲದೇ ಶಂಕರಾನಂದ ಅವರ ಪುತ್ರ ಪ್ರದೀಪ ಕಣಗಲಿ ಅವರನ್ನು ಎರಡು ಬಾರಿ ಸೋಲಿಸಿ ಅನ್ಯ ಕ್ಷೇತ್ರದಲ್ಲಿ ಸತತ ಮೂರು ಬಾರಿ ವಿಜಯ ಸಾಧಿಸಿದ್ದರು. ದಶಕದ ಹಿಂದೆ ಮತ್ತೆ ತವರು ಕ್ಷೇತ್ರಕ್ಕೆ ಬಂದ ಜಿಗಜಿಣಗಿ ಇಲ್ಲಿಯೂ ಎರಡು ಬಾರಿ ಸತತ ವಿಜಯ ಸಾಧಿಸಿ, ಮೂರನೇ ಬಾರಿ ಪಿಎಚ್‌ಡಿ ಪದವೀಧರೆ ಡಾ.ಸುನಿತಾ ಚವ್ಹಾಣ ಎಂಬ ಮಹಿಳೆಯನ್ನು ಮಣಿಸಿ ಮತ್ತೂಂದು ಹ್ಯಾಟ್ರಿಕ್ ಬಾರಿಸಿದ್ದಾರೆ.
ಪಕ್ಷಗಳ ಬಲಾಬಲ
25 ಬಿಜೆಪಿ
1 ಕಾಂಗ್ರೆಸ್
1 ಜೆಡಿಎಸ್
1 ಪಕ್ಷೇತರ
ಸೋತ ಘಟಾನುಘಟಿಗಳು
ಎಚ್.ಡಿ. ದೇವೇಗೌಡ – ಜೆಡಿಎಸ್
ಮಲ್ಲಿಕಾರ್ಜುನ ಖರ್ಗೆ-ಕಾಂಗ್ರೆಸ್
ಕೆ.ಎಚ್. ಮುನಿಯಪ್ಪ-ಕಾಂಗ್ರೆಸ್
ಎಂ. ವೀರಪ್ಪ ಮೊಯ್ಲಿ-ಕಾಂಗ್ರೆಸ್
ಮೊದಲ ಬಾರಿಗೆ “ಲೋಕ’ ಪ್ರವೇಶ
ತೇಜಸ್ವಿ ಸೂರ್ಯ-ಬೆಂಗಳೂರು ದಕ್ಷಿಣ (ಬಿಜೆಪಿ)
ಪ್ರಜ್ವಲ್ ರೇವಣ್ಣ-ಹಾಸನ (ಜೆಡಿಎಸ್)
ಎಸ್. ಮುನಿಸ್ವಾಮಿ-ಕೋಲಾರ (ಬಿಜೆಪಿ)
ವೈ. ದೇವೇಂದ್ರಪ್ಪ-ಬಳ್ಳಾರಿ (ಬಿಜೆಪಿ)
ಎ. ನಾರಾಯಣಸ್ವಾಮಿ-ಚಿತ್ರದುರ್ಗ (ಬಿಜೆಪಿ)
ಡಾ.ಉಮೇಶ್ ಜಾಧವ್-ಕಲಬುರಗಿ (ಬಿಜೆಪಿ)
ಬಿ.ಎನ್. ಬಚ್ಚೇಗೌಡ-ಚಿಕ್ಕಬಳ್ಳಾಪುರ (ಬಿಜೆಪಿ)
ರಾಜಾ ಅಮರೇಶ್ವರ ನಾಯಕ್-ರಾಯಚೂರು (ಬಿಜೆಪಿ)
ಅಣ್ಣಾ ಸಾಹೇಬ್ ಜೊಲ್ಲೆ-ಚಿಕ್ಕೋಡಿ (ಬಿಜೆಪಿ)
ಸುಮಲತ ಅಂಬರೀಶ್-ಮಂಡ್ಯ (ಪಕ್ಷೇತರ)
ಅತಿ ಹೆಚ್ಚು ಬಾರಿ ಗೆದ್ದವರು: 6 ಬಾರಿ
ರಮೇಶ್ ಜಿಗಜಿಣಗಿ-ವಿಜಯಪುರ (ಬಿಜೆಪಿ)
ಅನಂತಕುಮಾರ್ ಹೆಗಡೆ-ಉತ್ತರ ಕನ್ನಡ (ಬಿಜೆಪಿ)
ಹ್ಯಾಟ್ರಿಕ್ ಗೆಲುವು
ಡಿ.ಕೆ. ಸುರೇಶ್ (ಬೆಂಗಳೂರು ಗ್ರಾಮಾತರ).
ಜಿ.ಎಂ. ಸಿದ್ದೇಶ್ವರ್ (ದಾವಣಗೆರೆ).
ಶಿವಕುಮಾರ್ ಉದಾಸಿ (ಹಾವೇರಿ).
ನಳಿನ್ ಕುಮಾರ್‌ಕಟೀಲು (ದಕ್ಷಿಣ ಕನ್ನಡ).
ಅತಿ ಕಿರಿಯ ಸಂಸದ
ತೇಜಸ್ವಿಸೂರ್ಯ-ಬಿಜೆಪಿ-28 ವರ್ಷ
ಪ್ರಜ್ವಲ್ ರೇವಣ್ಣ-ಜೆಡಿಎಸ್-28 ವರ್ಷ
ಅತಿ ಹಿರಿಯ ಸಂಸದ
ಜಿ.ಎಸ್. ಬಸವರಾಜು-ತುಮಕೂರು-
ಬಿಜೆಪಿ-78 ವರ್ಷ
ಅಚ್ಚರಿ ಗೆಲುವು
ಎಸ್. ಮುನಿಸ್ವಾಮಿ-ಕೋಲಾರ (ಬಿಜೆಪಿ)
ತೇಜಸ್ವಿ ಸೂರ್ಯ-ಬೆಂಗಳೂರು ದಕ್ಷಿಣ (ಬಿಜೆಪಿ)
ಅತಿ ಹೆಚ್ಚು ಮತ ಪಡೆದವರು
8.78 ಲಕ್ಷ ಡಿ.ಕೆ. ಸುರೇಶ್-ಬೆಂಗಳೂರು ಗ್ರಾಮಾಂತರ (ಕಾಂಗ್ರೆಸ್)
ಅತಿ ಹೆಚ್ಚು ಅಂತರದ ಗೆಲುವು
4.79 ಲಕ್ಷ ಅನಂತ ಕುಮಾರ ಹೆಗಡೆ -ಉತ್ತರ ಕನ್ನಡ (ಬಿಜೆಪಿ)