ಕಲಬುರಗಿ: ಒಂದು ಲಾರಿ ಮರಳಿಗೆ 60 ರಿಂದ 70 ಸಾವಿರ ರೂ. ತೆರಬೇಕು ಎಂಬ ಸಾರ್ವಜನಿಕರ ಆಕ್ರೋಶದ ನಡುವೆಯೇ ಟನ್ ಮರಳು ಗರಿಷ್ಠ 13 ಸಾವಿರ ರೂಪಾಯಿಗೆ ಹರಾಜಾಗಿದೆ. ಈ ಲೆಕ್ಕಾಚಾರದಂತೆ ಇಪ್ಪತ್ತೈದು ಟನ್ ಮರಳು ಖರೀದಿಸಬೇಕಾದರೆ ಜನತೆ ಮೂರು ಲಕ್ಷ ರೂಪಾಯಿ ಪಾವತಿಸಬೇಕು! ಜಿಲ್ಲೆಯ ಕಾಗಿಣಾ ಮತ್ತು ಭೀಮಾ ನದಿ ಪಾತ್ರಗಳ ಹದಿನಾರು ಬ್ಲಾಕ್‌ಗಳಿಗೆ ಕಳೆದ ಜುಲೈನಲ್ಲಿ ಇ-ಹರಾಜು ಬಿಡ್ಡಿಂಗ್ ನಡೆದಿತ್ತು. ಇದರಲ್ಲಿ ಒಂದೊಂದು ಬ್ಲಾಕ್‌ನಲ್ಲಿ ಟನ್ ಮರಳು ಕನಿಷ್ಠ 2 ಸಾವಿರ ರೂ.ನಿಂದ 13,761 ರೂ.ವರೆಗೆ ಹರಾಜಾಗಿದೆ.
ಇದು ರಾಜ್ಯದಲ್ಲಿಯೇ ಅತಿ ಹೆಚ್ಚಿನ ಬಿಡ್ಡಿಂಗ್ ಎನ್ನಲಾಗಿದೆ. ಈ 16 ಬ್ಲಾಕ್‌ಗಳ ಪೈಕಿ ಕಲಬುರಗಿ ಜಿಲ್ಲೆಯ ಮೂವರು ಮಾತ್ರ ಗುತ್ತಿಗೆ ಪಡೆದಿದ್ದಾರೆ. ಉಳಿದವರೆಲ್ಲ ಬೆಳಗಾವಿ, ಬಾಗಲಕೋಟೆ ಹಾಗೂ ಗದಗ ಜಿಲ್ಲೆಯವರು. ಬೆಳಗಾವಿಯ ರವೀಂದ್ರ ಅಪ್ಪಾಸಾಬ ಮಾಲಿ ಎನ್ನುವರು ಏಳು ಬ್ಲಾಕ್‌ಗಳನ್ನು ಗುತ್ತಿಗೆ ಪಡೆದಿದ್ದು, ಟನ್ ಮರಳಿಗೆ 4 ಸಾವಿರ ರೂ.ದಿಂದ 10 ಸಾವಿರ ರೂ.ವರೆಗೂ ಬಿಡ್ ಮಾಡಿದ್ದಾರೆ.
ಬಾಗಲಕೋಟೆಯ ಪಿ.ಎಲ್.ಕಾಂಬಳೆ ಎಂಬುವರು ನಾಲ್ಕು ಬ್ಲಾಕ್‌ಗಳನ್ನು ನಾಲ್ಕು ಸಾವಿರ ರೂ.ದಿಂದ ಎಂಟು ಸಾವಿರ ರೂ. ವರೆಗೂ ಬಿಡ್ ಮಾಡಿ ಗುತ್ತಿಗೆ ಹಿಡಿದಿದ್ದಾರೆ. ಜೇವರ್ಗಿ ತಾಲೂಕಿನ ಮದರಿ ಬಳಿಯ ಬ್ಲಾಕ್ ಟನ್‌ಗೆ 1,833 ರೂ. ಹಾಗೂ ಅದೇ ಜೇವರ್ಗಿ ತಾಲೂಕಿನ ನೇಲೋಗಿ ಬ್ಲಾಕ್-2 ಮಾತ್ರ 13,761 ರೂ.ಗೆ ಬಿಡ್ಡಿಂಗ್ ಆಗಿದೆ. ಇದನ್ನು ಜಿಲ್ಲೆಯ ಅಫಜಲಪುರ ತಾಲೂಕಿನ ಮಣ್ಣೂರು ಗ್ರಾಮದ ಅಶೋಕ ಮಾಂಗ್ ಎಂಬುವರು ಪಡೆದಿದ್ದಾರೆ.
ನೆರೆಯ ಯಾದಗಿರಿ ಜಿಲ್ಲೆಯ ಕೃಷ್ಣಾ ನದಿ ಪಾತ್ರದಲ್ಲಿ ಎಂಟು ಮರಳು ಬ್ಲಾಕ್‌ಗಳು ಹರಾಜಾಗಿವೆ. ನಾಲ್ಕು ಬ್ಲಾಕ್‌ಗಳು 1200 ರೂ.ದಿಂದ 1500 ರೂ.ತನಕ ಹಾಗೂ ಉಳಿದ ನಾಲ್ಕು ಬ್ಲಾಕ್‌ಗಳು 4ರಿಂದ 6 ಸಾವಿರ ರೂ. ವರೆಗೂ ಹರಾಜಾಗಿವೆ. ಕೃಷ್ಣಾ ನದಿಯಲ್ಲಂತೂ ಭೀಮಾ ನದಿಗಿಂತ ನಾಲ್ಕು ಪಟ್ಟು ಉತ್ತಮ ಮರಳು ಸಿಗುತ್ತದೆ. ಇಲ್ಲೇ ಕಡಿಮೆ ದರಕ್ಕೆ ಗುತ್ತಿಗೆ ಪಡೆಯಲಾಗಿದೆ. ಈ ಹಿಂದಿನ ವರ್ಷಗಳಲ್ಲಿ ಪ್ರತಿ ಟನ್ ಮರಳಿಗೆ 700 ರೂ.ದಿಂದ 1000 ರೂ.ವರೆಗೆ ಮಾತ್ರ ಬಿಡ್ಡಿಂಗ್ ನಡೆಯುತ್ತಿತ್ತು. ಇದಕ್ಕೆ ಹೋಲಿಸಿದರೆ ಈ ಸಲ ಹತ್ತು ಪಟ್ಟು ಹೆಚ್ಚಳವಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ. ಜತೆಗೆ, ಹೊಸ ನೀತಿ ಜಾರಿ ಬಳಿಕ ಮರಳು ದರ ಕಡಿಮೆಯಾಗಬಹುದು ಎಂಬ ಲೆಕ್ಕಾಚಾರವೂ ಸುಳ್ಳಾಗಿದೆ. ಇನ್ನೊಂದೆಡೆ ಟೆಂಡರ್‌ನ ನಿಯಮಾವಳಿ ಪ್ರಕಾರ ರಾಯಲ್ಟಿ ತುಂಬಿ ಮರಳು ಸಾಗಾಣಿಕೆ ಮಾಡಲಿಕ್ಕೆ ಸಾಧ್ಯವೇ ಇಲ್ಲ. ಹೀಗಾಗಿ, ಈಗ ನಡೆದಿರುವ ಇ-ಟೆಂಡರ್ ಸಂಪೂರ್ಣ ಅವೈಜ್ಞಾನಿಕ ಎನ್ನಲಾಗುತ್ತದೆ.
ಇಂದು ಸಚಿವರ ಸಭೆ
ನಿರೀಕ್ಷೆ ಮೀರಿದ ದರಕ್ಕೆ ಮರಳು ಬ್ಲಾಕ್‌ಗಳ ಬಿಡ್ಡಿಂಗ್ ನಡೆದಿರುವ ಹಿನ್ನೆಲೆಯಲ್ಲಿ ಮುಂದಿನ ಹೆಜ್ಜೆಯಿಡುವ ನಿಟ್ಟಿನಲ್ಲಿ ಗಣಿ ಮತ್ತು ಭೂ ವಿಜ್ಞಾನ ಸಚಿವ ವಿನಯ ಕುಲಕರ್ಣಿ ಬೆಂಗಳೂರಿನಲ್ಲಿ ಗುರುವಾರ ಗುತ್ತಿಗೆದಾರರು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ಕರೆದಿದ್ದಾರೆ. ಹೊಸ
ಗುತ್ತಿಗೆ ನೀತಿ ಪ್ರಕಾರ ಮುಂದುವರಿಯಬೇಕೆ? ಇಲ್ಲವೇ ಹೊಸದಾಗಿ ನಿಯಮಾವಳಿ ರೂಪಿಸಿ ಮಗದೊಮ್ಮೆ ಗುತ್ತಿಗೆ ನೀಡಬೇಕೋ ಎಂಬುದರ ಕುರಿತು ಚರ್ಚೆ ನಡೆಯಲಿದೆ.
ಹೊಸ ಮರಳು ನೀತಿ ಅನ್ವಯ ಮರಳು ಬ್ಲಾಕ್‌ಗಳ ಐದು ವರ್ಷಗಳ ಗುತ್ತಿಗೆಯನ್ನು ಇ-ಹರಾಜು ಮೂಲಕ ಕಳೆದ ತಿಂಗಳು ನೀಡಲಾಗಿದೆ. ನಿಯಮಾವಳಿ ಪ್ರಕಾರ ಗುತ್ತಿಗೆದಾರರು ದರ ಏರಿಸಿ ಪ್ರತಿ ಟನ್‌ಗೆ 13,761 ರೂ.ವರೆಗೂ ಬಿಡ್ಡಿಂಗ್ ಮಾಡಿದ್ದಾರೆ. ಈ ದರ 10
ಟನ್ ಲಾರಿ ಮರಳಿಗೆ 1.37 ಲಕ್ಷ ರೂ.ಆಗುತ್ತದೆ. ಈ ದರದಂತೆ ಮರಳು ಪಡೆಯಲು ಸಾರ್ವಜನಿಕರಿಗೆ ಸಾಧ್ಯವಾಗುವುದೇ ಇಲ್ಲ. ಹೀಗಾಗಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಸರ್ಕಾರವೇ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ.
ಎಂ.ವೆಂಕಟೇಶಕುಮಾರ, ಕಲಬುರಗಿ ಜಿಲ್ಲಾಧಿಕಾರಿ
ಹಣಮಂತರಾವ ಭೈರಾಮಡಗಿ