ಬೆಳ್ತಂಗಡಿ : ತಾಲೂಕಿನಲ್ಲಿ ಈಗಾಗಲೇ 110 ಶಂಕಿತ ಡೆಂಗ್ಯೂ ಪ್ರಕರಣ ಪತ್ತೆಯಾಗಿದ್ದು, ಸ್ಯಾಂಪಲ್ ಗಳು ದೃಢಪಟ್ಟಿವೆ. ರೋಗಗಳು ಹರಡದಂತೆ ತಡೆಗಟ್ಟಲು ನೀರು ನಿಲ್ಲದಂತೆ ನೋಡಿ ಕೊಳ್ಳುವಂತೆ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಆದರೆ ತಾಲೂಕಿನ ಮುಖ್ಯ ಕಾರ್ಯ ಚಟುವಟಿಕೆಗಳ ತಾಣವಾದ ಮಿನಿ ವಿಧಾನಸೌಧ ಆವರಣದ ಕೂಗಳತೆಯ ಪ್ರದೇಶದಲ್ಲಿ ಅಶುಚಿತ್ವ ತಾಂಡವವಾಡುತ್ತಿದ್ದರೂ ಯಾರೂ ಇತ್ತ ಗಮನ ಹರಿಸುತ್ತಿಲ್ಲ.
ನಗರ ಸ್ವಚ್ಛತೆ ಬಗ್ಗೆ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ಪಡೆಯಲು ತಹಶೀಲ್ದಾರ್ ತಮ್ಮಣ್ಣ ಚಿನ್ನಪ್ಪ ಹಾದಿಮನಿ ಅವರಿಗೆ ಎರಡು ದಿನಗಳಿಂದ ಕರೆ ಮಾಡಿದರೂ ಸ್ವೀಕರಿಸಿಲ್ಲ.
ಪ್ರವೇಶ ದ್ವಾರ ಬಳಿ ಅಶುಚಿತ್ವ ಮಿನಿ ವಿಧಾನಸೌಧದ ಮುಖ್ಯ ದ್ವಾರದ ಮೂಲಕ ತಹಶೀಲ್ದಾರ್, ಸಮಾಲೋಚನೆ ಸಂದರ್ಭದಲ್ಲಿ ವೈದ್ಯಾಧಿಕಾರಿಗಳು ಹಾಗೂ ಇತರ ಅಧಿಕಾರಿಗಳು ತೆರಳಬೇಕಿದೆ. ಮುಖ್ಯ ದ್ವಾರದ ಬಳಿಯೇ ಕಸ ಹಾಗೂ ಚರಂಡಿಯ ಕೊಳಚೆ ನೀರು ನಿಂತಿದ್ದು, ಸೊಳ್ಳೆ ಉತ್ಪತ್ತಿಯಾಗುವ ಎಲ್ಲ ಸಾಧ್ಯತೆಗಳಿವೆ. ಜತೆಗೆ ಪ್ಲಾಸ್ಟಿಕ್ ಬಾಟಲ್‌ಗಳೂ ಇವೆ. ಆದರೆ ಸಮಸ್ಯೆಯನ್ನು ಯಾರೂ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ.
ಬೇಸಗೆಯಲ್ಲೂ ಈ ಚರಂಡಿಯಲ್ಲಿ ನೀರು ನಿಲ್ಲುತ್ತಿದ್ದು, ಕೊಳಚೆ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕಿದೆ. ಸಾವಿರಾರು ಸಾರ್ವಜನಿಕರು ಮಿನಿ ವಿಧಾನಸೌಧ, ತಾಲೂಕು ಕಚೇರಿ, ಭೂಮಿ ಕೇಂದ್ರ, ಪೊಲೀಸ್ ಠಾಣೆಗಳಿಗೆ ದಿನ ನಿತ್ಯ ತೆರಳುತ್ತಿರುತ್ತಾರೆ. ಜತೆಗೆ ಕಚೇರಿಗೆ ಸಂಬಂಧಿಸಿದ ಸಿಬಂದಿಯೂ ಓಡಾಡುತ್ತಿರುತ್ತಾರೆ. ಅಶುಚಿತ್ವದಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಯಿದೆ.
ತಾಲೂಕು ಬಸ್ ನಿಲ್ದಾಣದ ಬಳಿ ಸರಕಾರಿ ಬಸ್ ನಿಲುಗಡೆ ಮಾಡುವ ಜಾಗದ ಬಳಿ ಸಾರ್ವಜನಿಕರು ಕೂರಲು ವ್ಯವಸ್ಥೆ ಮಾಡಲಾಗಿದೆ. ಇದೇ ಜಾಗದಲ್ಲಿ ಅಂಗಡಿ ಮುಂಗಟ್ಟುಗಳಿಗೆ, ಸಾರ್ವಜನಿಕ ಶೌಚಾಲಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಂಗಡಿ ಮುಂಗಟ್ಟುಗಳ ಮೇಲ್ಭಾಗದಲ್ಲಿ ನೀರು ತುಂಬಿಸುವ ತೊಟ್ಟಿಗಳಿದ್ದು, ತುಂಬಿದ ಬಳಿಕ ಮೇಲ್ಭಾಗದಲ್ಲಿ ಚೆಲ್ಲಿ ಶೇಖರಣೆಯಾಗುತ್ತಿದೆ. ನೀರು ಹರಿದು ಹೋಗಲೂ ಜಾಗವಿಲ್ಲ, ಸಮರ್ಪಕವಾಗಿ ಆವಿಯೂ ಆಗುತ್ತಿಲ್ಲ. ಮಳೆ ಬಂದರೆ ಮಳೆ ನೀರು ಶೇಖರಣೆಯಾಗುತ್ತದೆ. ಕಸವೂ ಇರುವುದರಿಂದ ಕೊಳೆತು ರೋಗಗಳು ಉತ್ಪತ್ತಿಯಾಗುವ ಸಾಧ್ಯತೆ ಹೆಚ್ಚಾಗಿದೆ. ಬಸ್ ನಿಲ್ದಾಣ ಬಳಿಯಿಂದ ಮಿನಿ ವಿಧಾನಸೌಧಕ್ಕೆ ತೆರಳಲು ಮೆಟ್ಟಿಲು ಹತ್ತುವ ವೇಳೆ ಗಮನಕ್ಕೆ ಬರುತ್ತದೆ.
ಮಳೆ ಬಂದರೆ ಬಸ್ ನಿಲ್ದಾಣದ ಬಳಿ, ಹಳೇ ತಾಲೂಕು ಕಚೇರಿ ತೆರಳುವ ಮೆಟ್ಟಿಲು ಆರಂಭವಾಗುವ ಜಾಗದಲ್ಲಿ ನೀರು ನಿಲ್ಲುತ್ತದೆ. ಜತೆಗೆ ಆಗಾಗ ದುರ್ವಾಸನೆಯೂ ಬರುತ್ತಿದ್ದು, ಸಮೀಪದಲ್ಲಿರುವ ಕೆಎಸ್‌ಆರ್‌ಟಿಸಿ ಅಧಿಕಾರಿಗಳು, ಸ್ಥಳೀಯರು ಹಲವು ಬಾರಿ ದೂರನ್ನೂ ನೀಡಿದ್ದರು. ತಾಲೂಕು ಕೇಂದ್ರದಲ್ಲೇ ಈ ರೀತಿಯಾದಲ್ಲಿ ಮುಂದೇನು ಎನ್ನುವ ಪ್ರಶ್ನೆ ಮೂಡುತ್ತಿದೆ. ತಾಲೂಕು ಕೇಂದ್ರದಲ್ಲಿ ಸ್ವಚ್ಛತೆ ಕಾಪಾಡಬೇಕು ಎನ್ನುವುದು ಸಾರ್ವಜನಿಕರ ಆಶಯವಾಗಿದೆ.
ಮುಂಜಾಗ್ರತೆ
ಅಶುಚಿತ್ವ ಕಂಡು ಬಂದಿರುವ ಜಾಗಗಳಿಗೆ ತೆರಳಿ ಕೂಡಲೇ ಕ್ರಮ ಕೈಗೊಳ್ಳಲಾಗುವುದು. ನಗರದಲ್ಲಿ ಸ್ವಚ್ಛತೆ ಕಾಪಾಡುವಂತೆ ಪ.ಪಂ.ಗೆ ಪತ್ರ ಬರೆಯಲಾಗುವುದು. ತಾಲೂಕಿನಲ್ಲೂ ಯಾವುದೇ ರೋಗಗಳು ಹಬ್ಬದಂತೆ ಹಾಗೂ ಬಾರದಂತೆ ಮುಂಜಾಗ್ರತೆ ಮಾಡಲಾಗುತ್ತಿದೆ. ಸಾರ್ವಜನಿಕರೂ ಎಚ್ಚರ ವಹಿಸುವುದು ಅಗತ್ಯ.
- ಡಾ| ಕಲಾಮಧು ಶೆಟ್ಟಿ
ತಾಲೂಕು ಆರೋಗ್ಯಾಧಿಕಾರಿ
ಎಲ್ಲರಿಗೂ ಸಮಸ್ಯೆ
ಪ್ರತಿವರ್ಷ ಮಳೆಗಾಲ ಪ್ರಾರಂಭವಾಗುವುದಕ್ಕೂ ಮುನ್ನ ಚರಂಡಿ ಸ್ವಚ್ಛತೆ ನಡೆಸಬೇಕು. ಮಿನಿ ವಿಧಾನಸೌಧ ಬಳಿ ನೀರು ನಿಂತಿದ್ದು, ಸಮೀಪದಲ್ಲೇ ಮೆಟ್ರಿಕ್ ಅನಂತರದ ವಿದ್ಯಾರ್ಥಿ ನಿಲಯ ಇದೆ. ರೋಗ ಹರಡಿದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಸಮಸ್ಯೆಯಾಗಲಿದೆ. ಆರ್.ಸಿ.ಸಿ. ಚರಂಡಿಯನ್ನು ನೀರು ಸಮರ್ಪಕವಾಗಿ ಹರಿಯುವಂತೆ ವೈಜ್ಞಾನಿಕವಾಗಿ ಮಾಡಿದಲ್ಲಿ ಹೆಚ್ಚಿನ ಸಮಸ್ಯೆ ತಪ್ಪಲಿದೆ.
- ಶೇಖರ್ ಲಾೖಲ
ಸಿಐಟಿಯು ಮುಖಂಡ
ಹರ್ಷಿತ್ ಪಿಂಡಿವನ