ಲಕ್ನೋ: ಡೆಂಗ್ಯೂ ರೋಗಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ರಕ್ತದ ಪ್ಲೇಟ್ ಲೆಟ್ ಗಳ ಬದಲಿಗೆ ಹಣ್ಣಿನ ರಸದ ಡ್ರಿಪ್ ಹಾಕಿದ ಪರಿಣಾಮ ರೋಗಿ ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದ ಪ್ರಯಾಗ್ ರಾಜ್ ನ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಬದುಕು ಬದಲಿಸಿದ ಕಾಂತಾರ; ಮೂಗುತಿ ಸುಂದರಿಯ ಮನದ ಮಾತು
ಘಟನೆ ಬಳಿಕ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಆಸ್ಪತ್ರೆಯ ವೈದ್ಯಾಧಿಕಾರಿಗಳ ನಿರ್ಲಕ್ಷ್ಯ ಬಯಲಾದ ನಂತರ ಖಾಸಗಿ ಆಸ್ಪತ್ರೆಗೆ ಬೀಗ ಹಾಕಲಾಗಿದೆ. ಚಿಕಿತ್ಸೆಯಲ್ಲಿ ನಿರ್ಲಕ್ಷ್ಯ ತೋರಿದ ವೈದ್ಯರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಮೃತ ರೋಗಿಯ ಕುಟುಂಬ ಸದಸ್ಯರು ಉತ್ತರಪ್ರದೇಶ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
32 ವರ್ಷದ ಡೆಂಗ್ಯೂ ರೋಗಿಗೆ ಪ್ರಯಾಗ್ ರಾಜ್ ನ ಆಸ್ಪತ್ರೆಯಲ್ಲಿ ಪ್ಲಾಸ್ಮಾ(ರಕ್ತದ ಪ್ಲೇಟ್ ಲೆಟ್) ಬದಲು ಮೂಸಂಬಿ ರಸದ ಡ್ರಿಪ್ ಹಾಕಿದ್ದರು, ಇದರ ಪರಿಣಾಮ ರೋಗಿಯ ಆರೋಗ್ಯ ಸ್ಥಿತಿ ಚಿಂತಾಜನಕವಾಗಿತ್ತು ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ನಂತರ ರೋಗಿಯನ್ನು ಮತ್ತೊಂದು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಅಷ್ಟರಲ್ಲಿ ಆತ ಸಾವನ್ನಪ್ಪಿರುವುದಾಗಿ ವರದಿ ವಿವರಿಸಿದೆ. ಈ ಪ್ಲೇಟ್ ಲೆಟ್ ಬ್ಯಾಗ್ ನಕಲಿಯಾಗಿದ್ದು, ಇದು ರಾಸಾಯನಿಕ ಮಿಶ್ರಿತ ಮೂಸಂಬಿ ಜ್ಯೂಸ್ ಎಂಬುದಾಗಿ ಎರಡನೇ ಖಾಸಗಿ ಆಸ್ಪತ್ರೆಯ ವೈದ್ಯರು ತಿಳಿಸಿರುವುದಾಗಿ ವರದಿ ವಿವರಿಸಿದೆ.
ಆಸ್ಪತ್ರೆಯ ವೈದ್ಯರ ಬೇಜವಾಬ್ದಾರಿಯಿಂದ ನನ್ನ 26 ವರ್ಷದ ಸಹೋದರಿ ವಿಧವೆಯಾಗಿದ್ದಾಳೆ. ಈ ನಿಟ್ಟಿನಲ್ಲಿ ಆಸ್ಪತ್ರೆಯ ವೈದ್ಯರ ವಿರುದ್ಧ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಮೃತ ರೋಗಿಯ ಸಂಬಂಧಿ ಸೌರಭ್ ತ್ರಿಪಾಠಿ ಒತ್ತಾಯಿಸಿದ್ದಾರೆ.