ಲಕ್ನೋ : ಲಖೀಂಪುರ್‌ಖೇರಿ ಹಿಂಸಾಚಾರ ಘಟನೆಯ ಪ್ರಮುಖ ಆರೋಪಿಯಾಗಿರುವ ಆಶಿಶ್ ಮಿಶ್ರಾ ಶನಿವಾರ ಬೆಳಗ್ಗೆ 10:30 ರ ವೇಳೆಗೆ ಉತ್ತರ ಪ್ರದೇಶದ ಕ್ರೈಂ ಬ್ರಾಂಚ್ ಪೋಲೀಸರ ಎದುರು ಹಾಜರಾಗಿದ್ದಾರೆ.
ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ಅಜಯ ಕುಮಾರ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾ ವಿರುದ್ಧ ಪೊಲೀಸರು ಈಗಾಗಲೇ ಕೊಲೆ ಕೇಸ್ ದಾಖಲಿಸಿಕೊಂಡಿದ್ದು, ಇದುವರೆಗೆ ಬಂಧಿಸಿಲ್ಲ. ತೀವ್ರ ವಿಚಾರಣೆಯನ್ನು ಭಾರಿ ಭದ್ರತೆಯೊಂದಿಗೆ ನಡೆಸುತ್ತಿದ್ದಾರೆ.
ಶುಕ್ರವಾರವೂ ವಿಚಾರಣೆಗೆ ಆಗಮಿಸಿರದ ಹಿನ್ನಲೆಯಲ್ಲಿ ಪೊಲೀಸರು ಹೊಸತಾಗಿ ಸಮನ್ಸ್ ನೀಡಿ, ಶನಿವಾರ ಬೆಳಗ್ಗೆ 11 ಗಂಟೆಗೆ ಹಾಜರಾಗುವಂತೆ, ತಪ್ಪಿದಲ್ಲಿ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿ ಲಖೀಂಪುರ್‌ಖೇರಿಯಲ್ಲಿರುವ ಅವರ ನಿವಾಸಕ್ಕೆ ನೋಟಿಸ್ ಅಂಟಿಸಿದ್ದರು.
ಸಿಧು ಉಪವಾಸ ಅಂತ್ಯ
ಆಶಿಶ್ ಮಿಶ್ರಾನನ್ನು ಬಂಧಿಸುವ ವರೆಗೆ ಉಪವಾಸ ಸತ್ಯಾಗ್ರಹ ಕುಳಿತಿದ್ದ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರು ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.
ಸಿಧು ಅವರು ಲಖೀಂಪುರ್‌ಖೇರಿ ಯ ಹಿಂಸಾಚಾರದಲ್ಲಿ ಮೃತಪಟ್ಟಿದ್ದ ಪತ್ರಕರ್ತ ರಾಮನ್ ಕಶ್ಯಪ್ ಅವರ ಮನೆಯಲ್ಲಿ ಶುಕ್ರವಾರದಿಂದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು.