Advertisement

ಗಾರೆ ಕೆಲಸಗಾರ; ಇಂದು ವಿದೇಶಿ ವೆಜಿಟಬಲ್‌ ಸ್ಪೆಶಲಿಸ್ಟ್‌

12:43 PM Nov 17, 2018 | |

ಬೆಂಗಳೂರು: ನೂರಾರು ಎಕರೆ ಜಮೀನು ಹೊಂದಿದ ರೈತರೇ ಇಂದು ಕೃಷಿಯಲ್ಲಿ ನಷ್ಟ ಅನುಭವಿಸಿ ಕೈಸುಟ್ಟುಕೊಳ್ಳುತ್ತಿದ್ದಾರೆ. ಆದರೆ, ಇಲ್ಲೊಬ್ಬ ರೈತ ಎಸ್ಸೆಸ್ಸೆಲ್ಸಿ ಫೇಲಾಗಿದ್ದರೂ ಕೇವಲ ಮೂರು ಎಕರೆ ಜಮೀನಿನಲ್ಲಿ ವಿದೇಶಿ ತರಕಾರಿಗಳನ್ನು ಬೆಳೆದು ಪ್ರತಿ ತಿಂಗಳು 50 ಸಾವಿರ ರೂ. ಎಣಿಸುತ್ತಿದ್ದಾನೆ! ಮೂಲತಃ ಮೈಸೂರಿನ ತಳೂರು ಗ್ರಾಮದ ಯೋಗೇಶ್‌ ಕೇವಲ ದಶಕದ ಹಿಂದಷ್ಟೇ ಎಸ್ಸೆಸ್ಸೆಲ್ಸಿ ಫೇಲಾಗಿ ಗಾರೆ ಕೆಲಸ ಮಾಡಿಕೊಂಡಿದ್ದರು.

Advertisement

ಈಗ ಅದೇ ವ್ಯಕ್ತಿ ತಿಂಗಳಿಗೆ ಅಂದಾಜು 50 ಸಾವಿರ ರೂ. ಗಳಿಸುವುದರ ಜತೆಗೆ ಮೈಸೂರಿನಲ್ಲಿ “ವಿದೇಶಿ ವೆಜಿಟೇಬಲ್‌ ಯೋಗೇಶ್‌’ ಎಂಬ ಶೀರ್ಷಿಕೆ ಅಡಿ ಬಾನುಲಿ ಕಾರ್ಯಕ್ರಮದಲ್ಲಿ ನೂರಾರು ರೈತರಿಗೆ ಪಾಠ ಮಾಡುತ್ತಾರೆ. ನಗರದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಂಡ ನಾಲ್ಕು ದಿನಗಳ ಕೃಷಿ ಮೇಳದಲ್ಲಿ ಯೋಗೇಶ್‌ ಅವರ ಸಾಧನೆಗೆ ಜಿಲ್ಲಾ ಮಟ್ಟದ ಅತ್ಯುತ್ತಮ ರೈತ ಎಂದು ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. 

3.15 ಎಕರೆ ಜಮೀನಿನಲ್ಲಿ ಅರಣ್ಯ ಕೃಷಿ, ಮೇವಿನ ಬೆಳೆಗಳು, ಹೈನುಗಾರಿಕೆ, ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಈ ಪೈಕಿ ಒಂದು ಎಕರೆಯಲ್ಲಿ ವಿದೇಶಿ ತರಕಾರಿ ಬೆಳೆಗಳಾದ ರೆಡ್‌ಕಾಬೇಜ್‌, ಹಳದಿ ಚೆರ್ರಿ ಟೊಮೆಟೊ, ಟೇಬಲ್‌ ರ್ಯಾಡಿಶ್‌, ಬ್ರೋಕೊಲಿ, ಟರ್ನಿಫ್, ರೆಡ್‌ರ್ಯಾಡಿಶ್‌, ಸಿಲ್ಲೆರಿ ಸೇರಿದಂತೆ 25ಕ್ಕೂ ಹೆಚ್ಚು ಜಾತಿಯ ತರಕಾರಿಗಳನ್ನು ಬೆಳೆಯುತ್ತಿದ್ದಾರೆ.

ಇವರು ಬೆಳೆದ ತರಕಾರಿ ಬೆಟ್ಟಗಳ ರಾಣಿ ಊಟಿ ಸೇರಿದಂತೆ ಗೋವಾ, ಹೈದರಾಬಾದ್‌, ಚೆನ್ನೈ, ಮೈಸೂರಿನ ಸೂಪರ್‌ ಮಾರ್ಕೆಟ್‌ಗೆ ಹೋಗುತ್ತದೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆಹೋಗಿ, ಯಗೇಶ್‌ ಆನ್‌ಲೈನ್‌ ತರಕಾರಿ ಮಾರುಕಟ್ಟೆ ಪ್ರವೇಶಿಸಿದ್ದು, ತಮ್ಮ ಬೆಳೆಯನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವ ಗುರಿ ಹೊಂದಿದ್ದಾರೆ. 

ಈ ನಿಟ್ಟಿನಲ್ಲಿ ಸ್ಥಳೀಯವಾಗಿ ಸ್ವಯಂ ಸೇವಾ ಸಂಘವೊಂದರಡಿ 25 ಜನ ರೈತರ ಕ್ಲಸ್ಟರ್‌ ಹಾಗೂ ವಿದೇಶಿ ತರಕಾರಿ ಬೆಳೆಯುವ ರೈತರ ಕ್ಲಸ್ಟರ್‌ಗಳನ್ನು ರೂಪಿಸಿದ್ದಾರೆ. ಇದರಲ್ಲಿ 50 ರೈತರು ನೋಂದಣಿಯಾಗಿದ್ದು, ಇದರಿಂದ ಪ್ರೇರಣೆಗೊಂಡು ಪಿರಿಯಾಪಟ್ಟಣದಲ್ಲೂ ರೈತರು ಕ್ಲಸ್ಟರ್‌ ಮಾಡಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ನನ್ನ ಆದಾಯವನ್ನು 10-20 ಸಾವಿರ ರೂ. ಹೆಚ್ಚಿಸಿಕೊಳ್ಳುವ ಗುರಿ ಇದ್ದು, ಇದರಲ್ಲಿ ಯಶಸ್ವಿಯಾಗುತ್ತೇನೆ ಎಂಬ ವಿಶ್ವಾಸವೂ ಇದೆ ಎಂದು ಹೇಳಿದರು. 

Advertisement

ಮೊದಲು ಗಾರೆ ಕೆಲಸ ಮಾಡಿಕೊಂಡಿದ್ದೆ. ನಂತರ ಫ್ರಾಂಕ್ಲಿನ್‌ ಹಾಗೂ ಇನ್ಫೋಸಿಸ್‌ ಕಂಪೆನಿಗಳಲ್ಲಿ ಸಣ್ಣ ಕೆಲಸ ಸಿಕ್ಕಿತು. ಅಲ್ಲಿಂದ ಮಾರುಕಟ್ಟೆ ಕ್ಷೇತ್ರದಲ್ಲಿ ಕೆಲ ದಿನಗಳು ಕೆಲಸ ಮಾಡಿದೆ. ಎಲ್ಲಿಯೂ ಯಶಸ್ಸು ಸಿಗಲಿಲ್ಲ. ಕೊನೆಗೆ ಕೃಷಿಯತ್ತ ಮುಖಮಾಡಿದೆ. ಸಾಧನೆ ಖುಷಿ ಕೊಟ್ಟಿದೆ. ವಿದೇಶಿ ತರಕಾರಿಗಳ ಬಗ್ಗೆ ನಮ್ಮಲ್ಲಿನ ರೈತರು ಮತ್ತು ಗ್ರಾಹಕರಿಗೆ ಅರಿವಿನ ಅವಶ್ಯಕತೆ ಇದೆ ಎಂದು ಅವರು ಅಭಿಪ್ರಾಯಪಟ್ಟರು. 

ಹೊಲದಲ್ಲಿ ಟಿಲ್ಲರ್‌; ಖಾಲಿ ಟೈಮಲ್ಲಿ ಗಿರಣಿ!: ಅದೇ ರೀತಿ, ಮತ್ತೂಬ್ಬ ಅತ್ಯುತ್ತಮ ರೈತ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ತಗ್ಗಲೂರು ಗ್ರಾಮದ ಬಿ. ಸಿದ್ದಪ್ಪ ಕೇವಲ 9.59 ಎಕರೆ ಜಾಗದಲ್ಲಿ ಸಮಗ್ರ ಕೃಷಿಯಿಂದ ತಿಂಗಳಿಗೆ 65ರಿಂದ 70 ಸಾವಿರ ರೂ. ಆದಾಯ ಗಳಿಸುತ್ತಿದ್ದಾರೆ. 

ಸಿದ್ದಪ್ಪ ತಮ್ಮ ಜಮೀನಿನಲ್ಲಿ ಹತ್ತಿ, ಜೋಳ, ಹುರುಳಿ, ಕಡಲೆ, ಅಲಸಂದೆ ಬೆಳೆಗಳ ಜತೆಗೆ ಬದನೆ, ಬಾಳೆ, ಬೀಟ್‌ರೂಟ್‌, ಬೀನ್ಸ್‌ ಸೇರಿದಂತೆ ಇತರೆ ತರಕಾರಿ ಬೆಳೆಗಳನ್ನೂ ಬೆಳೆಯುತ್ತಿದ್ದಾರೆ. ಇದರಿಂದ ವಾರ್ಷಿಕ ನಾಲ್ಕು ಲಕ್ಷ ಆದಾಯ ಬರುತ್ತಿದೆ. ಜತೆಗೆ ಒಂದೂವರೆ ಲಕ್ಷ ಸೀಡ್‌ಗಳ ನರ್ಸರಿ ಮಾಡುತ್ತಿದ್ದಾರೆ.

ಇದರಿಂದ ತಿಂಗಳಿಗೆ 15ರಿಂದ 20 ಸಾವಿರ ರೂ. ಬರುತ್ತಿದೆ. ಟ್ರ್ಯಾಕ್ಟರ್‌ ಇಟ್ಟುಕೊಂಡಿದ್ದು, ಬಾಡಿಗೆ ಓಡಿಸುತ್ತಿದ್ದಾರೆ. ಅಲ್ಲದೆ, ಬಿಡುವಿನ ವೇಳೆಯಲ್ಲಿ ತಮ್ಮ ಬಳಿ ಇರುವ ಪವರ್‌ ಟಿಲ್ಲರ್‌ ಅನ್ನು ಹಿಟ್ಟಿನ ಗಿರಣಿಯಾಗಿ ಪರಿವರ್ತಿಸಿ, ಸುತ್ತಲಿನ ಮೂರ್‍ನಾಲ್ಕು ಹಳ್ಳಿಗಳಿಂದ ಬರುವ ರಾಗಿ, ಗೋಧಿ, ಜೋಳ, ಕಾರದಪುಡಿ ಮತ್ತಿತರ ಉತ್ಪನ್ನಗಳನ್ನು ಹಿಟ್ಟುಹಾಕಿ ಕೊಡುತ್ತೇನೆ. ಇದರಿಂದ ತಿಂಗಳಿಗೆ 6-7 ಸಾವಿರ ರೂ. ಆದಾಯ ಬರುತ್ತಿದೆ ಎಂದು ಮಾಹಿತಿ ನೀಡಿದರು. 

ಇದೇ ಚಾಮರಾಜನಗರ ಜಿಲ್ಲೆಯ ಜಿ.ಎನ್‌. ಸುಮ ಕೂಡ ಅತ್ಯುತ್ತಮ ರೈತ ಮಹಿಳೆ ಪ್ರಶಸ್ತಿಗೆ ಭಾಜನರಾಗಿದ್ದು, ತಮ್ಮ ಎಂಟು ಎಕರೆ ಜಮೀನಿನಲ್ಲಿ ಸಾಂಬಾರು ಸೌತೆ, ಮೆಣಸಿನಕಾಯಿ, ಅರಿಶಿಣ, ಬಾಳೆ, ತೆಂಗು ಬೆಳೆಗಳನ್ನು ಬೆಳೆಯುತ್ತಿದ್ದಾರೆ.

ಇದರಿಂದ ಪ್ರತಿ ತಿಂಗಳು ಎಲ್ಲ ನಿರ್ವಹಣೆ ಖರ್ಚು ಕಡಿತವಾಗಿ 40-50 ಸಾವಿರ ರೂ. ಬರುತ್ತಿದೆ. ನರ್ಸರಿ, ಹೈನುಗಾರಿಕೆ, ದ್ವಿದಳ ಧಾನ್ಯ, ರೇಷ್ಮೆ ಸಾಕಾಣಿಕೆ ಕೂಡ ಇದೆ ಮಾಡುತ್ತಿರುವುದಾಗಿ ಹೇಳಿದರು. ಮೈಸೂರಿನ ನಂಜನಗೂಡು ತಾಲ್ಲೂಕಿನ ಹದಿನಾರು ಗ್ರಾಮದ ಸೌಮ್ಯ ಕೂಡ ಅತ್ಯುತ್ತಮ ರೈತ ಮಹಿಳೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next