Advertisement
ಮಳೆ ಬಂದಾಗ ತಗ್ಗು ಪ್ರದೇಶಕ್ಕೆ ನೀರು ನುಗ್ಗೊದು, ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗೋದು ಇತ್ಯಾದಿ ಅನಾಹುತಗಳಿಗೂ ಮಳೆ ಕಾರಣವಾಗಿದೆ. ಇಂಥ ಸಮಯದಲ್ಲಿ ಅಪಾಯದಲ್ಲಿರುವವರನ್ನು ರಕ್ಷಿಸುತ್ತಿರುವವರಾರು? ಒಳ ಚರಂಡಿಗಳಲ್ಲಿ ಈಜುತ್ತಿರುವವರಾರು? ಟಿವಿ ನೇರಪ್ರಸಾರಗಳಲ್ಲಿ ಕುಸಿದ ಮನೆಯಡಿ ಸಿಲುಕಿದವರನ್ನು ಕೈಹಿಡಿದು ಎತ್ತುತ್ತಿರುವವರಾರು? ಅವರೆಲ್ಲಿಂದ ಬಂದರು? ಇದನ್ನೆಲ್ಲ ಯಾವತ್ತಾದರೂ ಯೋಚಿಸಿದ್ದೀರಾ?
ಮೋರಿಗಳಲ್ಲಿ ಮೊಣಕಾಲು ಉದ್ದದ ಬೂಟು, ಕೈಗವಸು ಹಾಕಿಕೊಂಡು, ಕೈಯಲ್ಲಿ ಸಪೂರ ಉದ್ದನೆಯ ಕಡ್ಡಿ ಹಿಡಿದುಕೊಂಡು ನೆಲದ ಮೇಲೆ ಹರಿಯುತ್ತಿದ್ದ ಚರಂಡಿ ಪ್ರವಾಹಕ್ಕೆದುರಾಗಿ ಕಡ್ಡಿ ಚುಚ್ಚುತ್ತಾ ಹೋಗುವವರನ್ನು ನೋಡಿರುತ್ತೀರಾ. ಅವರೇನನ್ನು ಹುಡುಕುತ್ತಿದ್ದಾರೆ ಗೊತ್ತಾಯಿತಾ? ನೀರಲ್ಲಿ ಕೊಚ್ಚಿಕೊಂಡು ಹೋದವರನ್ನು! ಅದಕ್ಕಾಗಿ ಅವರು ಕಿ.ಮೀ.ಗಟ್ಟಲೆ ನಡೆಯಬೇಕಾಗುತ್ತದೆ.
Related Articles
Advertisement
ವಿಷಪೂರಿತ ಹಾವುಗಳು ಸಿಕ್ಕಿದ್ದಿದೆ!ಸಿಬ್ಬಂದಿ, ಮೋರಿಗಳಲ್ಲಿ ಇಳಿಯುವ ಮುನ್ನ ಟೆಟ್‌ಬ್ಯಾಕ್ ಚುಚ್ಚುಮದ್ದು, ಆ್ಯಂಟಿಬಯೋಟಿಕ್ ಔಷಧ ತೆಗೆದುಕೊಂಡೇ ಇಳಿಯುತ್ತಾರೆ. ಏಕೆಂದರೆ ಒಮ್ಮೆ ಇಳಿದಾಗ ಏನು ಚುಚ್ಚಿತೋ ಗೊತ್ತಾಗೋದಿಲ್ಲ. ಎಷ್ಟೋ ಸಲ ಕಾರ್ಯಾಚರಣೆ ಮುಗಿದು ಮನೆಗೆ ಹೋದ ನಂತರ ಕಾಲುಗಳಲ್ಲಿ ಗಾಯವಾಗಿರೋದು ಗೊತ್ತಾಗಿದ್ದಿದೆ. ಅಲ್ಲದೆ ನಗರದ ತ್ಯಾಜ್ಯಗಳೆಲ್ಲ ಮೋರಿಗಳಲ್ಲಿ ಹರಿಯುವುದರಿಂದ ಚರ್ಮದ ಸೋಂಕು ತಗುಲುವ ಅಪಾಯವೂ ಇಲ್ಲದೇ ಏನಿಲ್ಲ. ವಿಷಪೂರಿತ ಹಾವುಗಳು ಕೂಡಾ ಮೋರಿಗಳ ಸಂದುಗೊಂದುಗಳಲ್ಲಿ ಮನೆ ಮಾಡಿರುತ್ತೆ. ಅದರ ಬಗ್ಗೆಯೂ ಎಚ್ಚರ ವಹಿಸಿಯೇ ಮುಂದುವರಿಯಬೇಕು. ಕೊಚ್ಚಿಹೋದವರ ಶೋಧ
ಮೋರಿಯಲ್ಲಿ ವ್ಯಕ್ತಿ ಕೊಚ್ಚಿಹೋದಾಗ ಮೊದಲು ಆ ಜಾಗದ ಹತ್ತಿರದಲ್ಲಿರುವ ಗಿಡ, ಬಳ್ಳಿ, ಟೊಂಗೆಗಳು, ಬ್ರಿಡ್ಜ್, ಬಂಡೆಯ ಮಧ್ಯೆ ಹುಡುಕಾಟ ನಡೆಸುತ್ತೇವೆ. ಸಾಮಾನ್ಯವಾಗಿ ವ್ಯಕ್ತಿ ನೀರಿನಲ್ಲಿ ಕೊಚ್ಚಿಹೋಗುವಾಗ ಯಾವುದಾದರೂ ಆಸರೆಯನ್ನು ಹುಡುಕುತ್ತಾನೆ. ಈ ಹಿನ್ನೆಲೆಯಲ್ಲಿ ನಮ್ಮ ಕಾರ್ಯಾಚರಣೆ ಮುಖ್ಯವಾಗಿ ಈ ಜಾಗಗಳಲ್ಲಿ ನಡೆಯುತ್ತದೆ. ಅಲ್ಲದೆ, ಸ್ಥಳೀಯರಿಂದ ಎಲ್ಲೆಲ್ಲಿ ಏನೇನಿದೆ ಎಂಬುದರ ಮಾಹಿತಿ ಸಂಗ್ರಹಿಸುತ್ತೇವೆ. ಅದನ್ನು ಆಧರಿಸಿಯೂ ಕಾರ್ಯಾಚರಣೆ ನಡೆಸಲಾಗುವುದು. ವ್ಯಕ್ತಿಯೊಬ್ಬ ಏಕಾಏಕಿ ನೀರಿನಲ್ಲಿ ಕೊಚ್ಚಿಹೋದಾಗ, ಬಹುತೇಕ ಸಂದರ್ಭಗಳಲ್ಲಿ “ಶಾಕ್’ನಿಂದಲೇ ಸಾವನ್ನಪ್ಪಿರುತ್ತಾನೆ. ಹೀಗಾಗಿ ಕೊಚ್ಚಿಹೋದವರು ಜೀವಂತವಾಗಿ ಪತ್ತೆಯಾದ ಘಟನೆಗಳು ತುಂಬಾ ಕಡಿಮೆ ಎನ್ನುವುದು ಸಿಬ್ಬಂದಿ ವರ್ಗದ ಅನುಭವದ ಮಾತು. ಅತ್ಯಾಧುನಿಕ ಉಪಕರಣಗಳು
ವಿಕ್ಟಿಮ್ ಲೊಕೇಷನ್ ಕ್ಯಾಮೆರಾ ಎಂಬುದೊಂದಿದೆ. ಇದರಿಂದ ನೀರಿನೊಳಗೆ 25ರಿಂದ 30 ಮೀಟರ್ ದೂರದಲ್ಲಿದ್ದ ಯಾವುದೇ ವಸ್ತುವನ್ನು ಸೆರೆಹಿಡಿಯಬಹುದು. ಆದರೆ, ರಾಜಕಾಲುವೆ ಹಾಗೂ ಮೋರಿಗಳಲ್ಲಿನ ನೀರು ಸಂಪೂರ್ಣ ಕಲುಷಿತಗೊಂಡಿರುತ್ತದೆ. ಹೀಗಾಗಿ ಈ ಕ್ಯಾಮೆರಾ ನೆರವಿಗೆ ಬರುವುದಿಲ್ಲ. ಬರೀ ಅದೊಂದೇ ಅಲ್ಲ, ಇನ್ನೂ ಹಲವು ಅತ್ಯಾಧುನಿಕ ಉಪಕರಣಗಳನ್ನು ಅಗ್ನಿ ಮತ್ತು ತುರ್ತು ಸೇವೆಗಳ ತಂಡ ಹೊಂದಿದೆ. ಅದರಲ್ಲಿ 20 ವಿವಿಧ ಪ್ರಕಾರದ ವಾಹನಗಳು, 9 ಬೋಟುಗಳು, 50 ಪೋಟೇಬಲ್ ಪಂಪ್‌ಗ್ಳು, ಪವರ್‌ಟೂಲ್‌ಗಳು, ಲೈಫ್ ಜಾಕೆಟ್‌ಗಳು ಇವೆ. ಅಗತ್ಯಕ್ಕೆ ತಕ್ಕಂತೆ ಅವುಗಳನ್ನು ಬಳಸಿಕೊಳ್ಳಲಾಗುತ್ತದೆ. ಸಾವಿರಕ್ಕೂ ಅಧಿಕ ಕರೆಗಳು!
ಮಳೆಗಾಲದಲ್ಲಿ, ಅದರಲ್ಲೂ ಮುಖ್ಯವಾಗಿ ಆಗಸ್ಟ್ 15ರಿಂದ ಅಕ್ಟೋಬರ್ 15ರ ಅವಧಿಯಲ್ಲಿ ಮಳೆ ನೀರಿನ ಹಾವಳಿಯಿಂದ ಕಾಪಾಡುವಂತೆ ಸುಮಾರು ಸಾವಿರಕ್ಕೂ ಅಧಿಕ ಕರೆಗಳು ಬಂದಿದ್ದವಂತೆ. ಅವುಗಳಲ್ಲಿ ಬಹುತೇಕ ಪ್ರಕರಣಗಳನ್ನು ಅಟೆಂಡ್ ಮಾಡಿರುವುದು ಅಗ್ನಿ ಮತ್ತು ತುರ್ತು ಸೇವ ಸಿಬ್ಬಂದಿ ವರ್ಗದ ಹೆಗ್ಗಳಿಕೆ. ಅದೊಂದು ಹುಚ್ಚುಸಾಹಸ
“ನಾವೇನೂ ದೊಡ್ಡ ಸಾಹಸ ಮಾಡುತ್ತಿದ್ದೇವೆ ಎಂದಲ್ಲ; ನಮ್ಮ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಆದರೆ, ಯಾವ ಮೋರಿ ಎಷ್ಟು ಉದ್ದ ಇದೆ? ಎಲ್ಲಿ ಏನಿದೆ? ಎಲ್ಲಿ ಸುಳಿಗಳಿವೆ? ಹೂಳು ತುಂಬಿರುತ್ತದೆ ಎಂದು ನಮಗೂ ಗೊತ್ತಿರುವುದಿಲ್ಲ. ಇದೆಲ್ಲದರ ನಡುವೆಯೇ ಕೈಯಲ್ಲಿದ್ದ ಕಡ್ಡಿಯಿಂದ ಚುಚ್ಚುತ್ತಾ ಮೋರಿಯಲ್ಲಿ ಮುನ್ನುಗ್ಗುವುದೊಂದೇ ಗುರಿಯಾಗಿರುತ್ತದೆ. ಕರ್ತವ್ಯದಲ್ಲಿ ನಿರತವಾಗಿದ್ದಾಗ ಇದಾವುದರ ಪರಿವೂ ಇರುವುದಿಲ್ಲ. ಆದರೆ ಅಲ್ಲಿಂದ ಹೊರಬಂದು, ಘಟನೆ ನೆನೆಸಿಕೊಂಡರೆ ದಂಗು ಬಡಿಯುತ್ತದೆ. ಅದೊಂದು ಹುಚ್ಚುಸಾಹಸ ಎನಿಸುತ್ತದೆ’ ಎನ್ನುತ್ತಾರೆ ಕರ್ನಾಟಕ ರಾಜ್ಯ ಅಗ್ನಿ ಮತ್ತು ತುರ್ತು ಸೇವೆಗಳ ಉಪ ನಿರ್ದೇಶಕ ಮಾರ್ಕಂಡೇಯ. ರಕ್ಷಿಸಿದ ಸಾರ್ಥಕತೆ
ನಾಯಂಡಹಳ್ಳಿಯಲ್ಲಿ ಬಸ್ 5 ಅಡಿ ಮುಳುಗಿತ್ತು. ಅದರಲ್ಲಿದ್ದ 40 ಜನ ಪ್ರಯಾಣಿಕರನ್ನು ರಕ್ಷಿಸಿದ್ದು, ಕೋರಮಂಗದಲ್ಲಿ ನೂರಕ್ಕೂ ಅಧಿಕ ಹಿರಿಯ ನಾಗರಿಕರನ್ನು ಬೋಟಿನಲ್ಲಿ ಕರೆತಂದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದು, ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಹಾಲು, ಔಷಧ, ಕುಡಿಯುವ ನೀರನ್ನು ಬೋಟಿನಲ್ಲಿ ತೆರಳಿ ನಮ್ಮ ಸಿಬ್ಬಂದಿ ಪೂರೈಕೆ ಮಾಡಿದ್ದು ಇವೆಲ್ಲವೂ ಸಮಾಧಾನ ತಂದಿದೆ.
– ಪಿ.ಆರ್.ಎಸ್. ಚೇತನ್, ಸಿವಿಲ್ ಡಿಫೆನ್ಸ್ ಕಮಾಂಡಿಂಗ್ ಆಫೀಸರ್ * ವಿಜಯಕುಮಾರ್ ಚಂದರಗಿ