ಮಹಾನಗರ: ಮಳೆಗಾಲ ಎದುರಿಸುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಸನ್ನದ್ಧವಾಗಿದೆ ಎಂದು ಹೇಳುತ್ತಿದ್ದರೂ, ನಗರದ ಬಹುತೇಕ ಭಾಗದಲ್ಲಿ ಮೋರಿ, ಚರಂಡಿ ಸ್ವಚ್ಛಗೊಳಿಸುವ ಕಾರ್ಯ ಪೂರ್ಣ ಮಟ್ಟದಲ್ಲಿ ನಡೆದಿಲ್ಲ. ನಗರದ ಕುಳಾಯಿಯ ಮೋರಿಯನ್ನು ಸ್ವಚ್ಛಗೊಳಿಸದ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನದ ಹಿಂದೆ ಸುರಿದ ಮಳೆಗೆ ರಸ್ತೆಯೆಲ್ಲ ಬ್ಲಾಕ್ ಆಗಿ ಹತ್ತಿರದ ಅಂಗಡಿಗೆ ಮಳೆ ನೀರು ನುಗ್ಗುವ ಪರಿಸ್ಥಿತಿ ನಿರ್ಮಾಣವಾಗಿದೆ.
‘ಸುದಿನ’ದ ‘ಮುಂಗಾರು ಮುಂಜಾಗ್ರತೆ’ ಅಭಿಯಾನಕ್ಕೆ ಸ್ಪಂದಿಸಿ, ಸ್ಥಳೀಯ ನಾಗರಿಕರು, ಈ ಸಮಸ್ಯೆ ಬಗ್ಗೆ ಉಲ್ಲೇಖಿಸಿದ್ದಾರೆ. ಕುಳಾಯಿಯ ಹೊಟೇಲೊಂದರ ಮುಂಭಾಗದ ಮೋರಿಯಲ್ಲಿ ಕಸಕಡ್ಡಿ-ಮಣ್ಣು ತುಂಬಿ ಮಳೆ ನೀರು ಸರಾಗವಾಗಿ ಹರಿಯಲು ಆಗುತ್ತಿಲ್ಲ.
ರಾಷ್ಟ್ರೀಯ ಹೆದ್ದಾರಿಯ ಪೂರ್ವ ಭಾಗದಿಂದ ಪಶ್ಚಿಮ ಭಾಗಕ್ಕೆ ಮಳೆ ನೀರು ಸಮರ್ಪಕವಾಗಿ ಹರಿಯದೆ ಹೊಟೇಲ್ ಸಮೀಪದಲ್ಲಿಯೇ ಮಳೆ ನೀರು ನಿಲ್ಲುವ ಪರಿಸ್ಥಿತಿ ಉಂಟಾಗಿದೆ. ಹೆದ್ದಾರಿಯ ಅಡಿಯಲ್ಲಿ ನೀರು ಬ್ಲಾಕ್ ಆಗಿ ಮಳೆಗೆ ಇನ್ನಷ್ಟು ಅಪಾಯ ಸೃಷ್ಟಿಸಿದೆ.
ಇತ್ತೀಚೆಗೆ ಸುರಿದ ಮಳೆಯ ಹಿನ್ನೆಲೆಯಲ್ಲಿ ಮೋರಿಯ ಆವಾಂತರದಿಂದಾಗಿ ಸಮೀಪದ ಸುಮಾರು 5-6 ಅಂಗಡಿಗಳಿಗೆ ಮಳೆ ನೀರು ನುಗ್ಗಿ ತಾಪತ್ರಯ ಉಂಟಾಗಿತ್ತು. ಈ ಬಗ್ಗೆ ಪಾಲಿಕೆ ಅಧಿಕಾರಿ/ಕಾರ್ಪೊರೇಟರ್‌ಗಳನ್ನು ಸಂಬಂಧಪಟ್ಟವರು ಸಂಪರ್ಕಿಸಿದರೂ ಮೋರಿ ಬ್ಲಾಕ್ ಇನ್ನೂ ತೆರವಾಗಿಲ್ಲ.
ಹೆದ್ದಾರಿ ಅವರು ಮಾಡಬೇಕಾದ ಕೆಲಸ
ಈ ಬಗ್ಗೆ ಪಾಲಿಕೆಯನ್ನು ಸಂಪರ್ಕಿಸಿದರೆ ಅದು ಹೆದ್ದಾರಿ ಅವರು ಮಾಡಬೇಕಾದ ಕೆಲಸ ಎನ್ನುತ್ತಾರೆ. ಹೆದ್ದಾರಿಯವರನ್ನು ಕೇಳಿದರೆ ಪಾಲಿಕೆಯತ್ತ ಬೆರಳು ತೋರಿಸುತ್ತಾರೆ. ಇವರ ನೀತಿಗಳಿಂದ ಕುಳಾಯಿ ಪರಿಸರದ ಜನರು ಇಂದು ಸಮಸ್ಯೆ ಎದುರಿಸುತ್ತಾರೆ. ಮುಂದೆ ಮಳೆಗೆ ಇನ್ನಷ್ಟು ಸಮಸ್ಯೆಯ ಆತಂಕ ನಮಗೆ ಉಂಟಾಗಿದೆ. ಇನ್ನಾದರೂ ಸಂಬಂಧಪಟ್ಟವರು ಈ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಲಿ ಎನ್ನುತ್ತಾರೆ ಸುನೀಲ್ ಕುಳಾಯಿ.