Advertisement

ದೇಶದಲ್ಲಿ ರೈತರಿಗಿಂತ ನಿರುದ್ಯೋಗಿಗಳ ಆತ್ಮಹತ್ಯೆ ಪ್ರಮಾಣವೇ ಹೆಚ್ಚು!: ಎನ್.ಸಿ.ಆರ್.ಬಿ. ವರದಿ

10:00 AM Jan 13, 2020 | Hari Prasad |

ನವದೆಹಲಿ: 2017-18ರ ಸಾಲಿನಲ್ಲಿ ಭಾರತದಲ್ಲಿ ಸುಮಾರು 12 ಸಾವಿರ ನಿರುದ್ಯೋಗಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದೆ. ಇನ್ನೊಂದು ಆಘಾತಕಾರಿ ಅಂಶವೆಂದರೆ ಈ ಆತ್ಯಹತ್ಯೆಯ ಸಂಖ್ಯೆ ಇದೇ ವರ್ಷ ದೇಶಾದ್ಯಂತ ಆತ್ಯಹತ್ಯೆಗೆ ಶರಣಾಗಿರುವ ರೈತರ ಸಂಖ್ಯೆಗಿಂತಲೂ ಅಧಿಕವಾಗಿದೆ. ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋ (NCRB) ಹೊರತಂದಿರುವ ‘2018ರಲ್ಲಿ ಭಾರತದಲ್ಲಿ ಆತ್ಮಹತ್ಯೆ’ ಎಂಬ ವರದಿಯಲ್ಲಿ ಈ ಅಂಕಿ ಅಂಶಗಳನ್ನು ವಿವರವಾಗಿ ಉಲ್ಲೇಖಿಸಲಾಗಿದೆ.

Advertisement

ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿ ಬರುವ ಎನ್.ಆರ್.ಸಿ.ಬಿ. ಬಿಡುಗಡೆಗೊಳಿಸಿರುವ ಈ ಮಾಹಿತಿಗಳ ಪ್ರಕಾರ 2018ರಲ್ಲಿ 12,936 ನಿರುದ್ಯೋಗಿಗಳು ದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮತ್ತಿದು ಆ ವರ್ಷ ದೇಶದಲ್ಲಿ ಸಂಭವಿಸಿರುವ ಒಟ್ಟು ಆತ್ಮಹತ್ಯಾ ಪ್ರಕರಣಗಳಲ್ಲಿ 9.6 ಪ್ರತಿಶತವಾಗಿದೆ. 2018ರಲ್ಲಿ ದೇಶಾದ್ಯಂತ ಒಟ್ಟು 1,34,516 ಆತ್ಮಹತ್ಯಾ ಪ್ರಕರಣಗಳು ದಾಖಲಾಗಿದ್ದವು.

ಇನ್ನು ಇದೇ ವರ್ಷ 10,349 ರೈತರು ದೇಶದ ವಿವಿಧ ಭಾಗಗಳಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು ಮತ್ತು ಇದು ಒಟ್ಟು ಆತ್ಮಹತ್ಯಾ ಪ್ರಕರಣಗಳ 7.7 ಪ್ರತಿಶದಷ್ಟಾಗುತ್ತದೆ. ಆತ್ಮಹತ್ಯೆಗೆ ಶರಣಾಗಿರುವ ನಿರುದ್ಯೋಗಿಗಳಲ್ಲಿ ಪುರುಷರ ಸಂಖ್ಯೆಯೇ ಅಧಿಕವಾಗಿದೆ ಒಟ್ಟು 10,687 ನಿರುದ್ಯೋಗಿ ಪುರುಷರು ಆತ್ಮಹತ್ಯೆಗೆ ಶರಣಾಗಿದ್ದರೆ, 2,249 ನಿರುದ್ಯೋಗಿ ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುತ್ತಿದೆ ಈ ವರದಿ.

ನಿರುದ್ಯೋಗಿಗಳ ಆತ್ಮಹತ್ಯೆಯಲ್ಲಿ ಕೇರಳ ರಾಜ್ಯ ಮೊದಲ ಸ್ಥಾನದಲ್ಲಿದೆ. ಇಲ್ಲಿ 1,585 ಜನ ನಿರುದ್ಯೋಗಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಉಳಿದಂತೆ ತಮಿಳುನಾಡಿನಲ್ಲಿ 1,579, ಮಹಾರಾಷ್ಟ್ರದಲ್ಲಿ 1,260, ಕರ್ನಾಟಕದಲ್ಲಿ 1,094 ಮತ್ತು ಉತ್ತರಪ್ರದೇಶದಲ್ಲಿ 902 ಜನ ನಿರುದ್ಯೋಗದ ಕಾರಣದಿಂದ 2018ರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

2017ರಲ್ಲೂ ಸಹ ನಿರುದ್ಯೋಗದ ಕಾರಣದಿಂದ ಆತ್ಮಹತ್ಯೆಗೆ ಶರಣಾಗಿರುವವರ ಸಂಖ್ಯೆ ಹೆಚ್ಚಿದೆ. ಈ ವರ್ಷ ಒಟ್ಟು 12,241 ನಿರುದ್ಯೋಗಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಆ ವರ್ಷ ಸಂಭವಿಸಿರುವ ಒಟ್ಟು ಆತ್ಮಹತ್ಯೆ ಪ್ರಮಾಣದ 9.4 ಪ್ರತಿಶದಷ್ಟಾಗುತ್ತದೆ. ಇದೇ ವರ್ಷ ದೇಶದಲ್ಲಿ ಒಟ್ಟು 10,655 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Advertisement

ಆದರೆ 2016ರಲ್ಲಿ ರೈತರ ಆತ್ಮಹತ್ಯೆ ಪ್ರಮಾಣವೇ ನಿರುದ್ಯೋಗಿಗಳ ಆತ್ಮಹತ್ಯೆಗಳಿಗಿಂತ ಅಧಿಕವಾಗಿತ್ತು. ಈ ವರ್ಷದಲ್ಲಿ ರೈತರ ಆತ್ಯಹತ್ಯೆ ಪ್ರಮಾಣ 11,379 ಇದ್ದರೆ ನಿರುದ್ಯೋಗಿಗಳ ಆತ್ಯಹತ್ಯೆ ಪ್ರಮಾಣ 11,173 ಆಗಿತ್ತು. ದೇಶದಲ್ಲಿ 2018ರಲ್ಲಿ ದಾಖಲುಗೊಂಡಿರುವ ಒಟ್ಟು 1,34,516 ಆತ್ಮಹತ್ಯಾ ಪ್ರಕರಣಗಳು 2017ಕ್ಕೆ ಹೋಲಿಸಿದಾಗ 3.6 ಪ್ರತಿಶತ ಹೆಚ್ಚಾಗಿರುವುದು ಕಳವಳಕಾರಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next