ಹೊಸದಿಲ್ಲಿ: ಕೋವಿಡ್ ಲಾಕ್ ಡೌನ್ ವಿಸ್ತರಿಸುವ ಕುರಿತು ಪ್ರಧಾನಿ ನರೇಂದ್ರ ಮೋದಿ ಎ.14ರಂದು ದೇಶವನ್ನುದ್ದೇಶಿಸಿ 25 ನಿಮಿಷಗಳ ಮಾತನಾಡಿದ್ದನ್ನು 199 ಟಿ.ವಿ ಚಾನೆಲ್‌ಗಳ ಮೂಲಕ, ಸುಮಾರು 20.3 ಕೋಟಿ ಮಂದಿ ವೀಕ್ಷಿಸಿದ್ದಾರೆ ಎಂದು ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (ಬಿಎಆರ್‌ಸಿ) ತಿಳಿಸಿದೆ.
ಲಾಕ್ ಡೌನ್ ಅನ್ನು ಮೇ.3 ರವರೆಗೆ ವಿಸ್ತರಿಸುವುದಾಗಿ ಹೇಳಿದ ಮೋದಿ ಅವರ ಈ ಲಾಕ್ ಡೌನ್ 2.0 ಭಾಷಣ, ಅವರ ಮಾರ್ಚ್ ತಿಂಗಳ ಭಾಷಣದ ವೀಕ್ಷಕರ ಸಂಖ್ಯೆಯನ್ನೂ ಮೀರಿಸಿದೆ.
ಆಗ 201 ವಾಹಿನಿಗಳಲ್ಲಿ ಪ್ರಸಾರವಾದ ಕಾರ್ಯಕ್ರಮವನ್ನು 19.7 ಕೋಟಿ ಮಂದಿ ವೀಕ್ಷಿಸಿದ್ದರು. ಇದಕ್ಕೂ ಮೊದಲು ಅವರ ಜನತಾ ಕರ್ಫ್ಯೂ ಘೋಷಣೆಯ ವಿಡಿಯೋವನ್ನು 8.3 ಕೋಟಿ ಪ್ರೇಕ್ಷಕರು ವೀಕ್ಷಿಸಿದ್ದರು.
ದೂರದರ್ಶನ ನಂ.1
ಲಾಕ್ ಡೌನ್ ಅವಧಿಯಲ್ಲಿ ರಾಮಾಯಣ, ಮಹಾಭಾರತ ಮರು ಪ್ರಸಾರ ಆದ ಬಳಿಕ ದೇಶದಲ್ಲೇ ಟಿಆರ್‌ಪಿಯಲ್ಲಿ ದೂರದರ್ಶನ ನಂಬರ್ ಒನ್ ಚಾನೆಲ್ ಆಗಿ ಹೊರಹೊಮ್ಮಿದೆ. ಸತತ 2 ವಾರ ಭಾರೀ ಜನಪ್ರಿಯತೆ ಪಡೆದಿದ್ದ ದೂರದರ್ಶನ 3ನೇ ವಾರದಲ್ಲಿ (ಮಾ.28-ಏ.3) 150 ಕೋಟಿ ವೀಕ್ಷಕರನ್ನು ಹೊಂದಿತ್ತು.
ಇದೀಗ 4ನೇ ವಾರದಲ್ಲಿ (ಏ.4-10) ಈ ಸಂಖ್ಯೆ 190 ಕೋಟಿ ದಾಟಿದೆ ಎಂದು ಪ್ರಸಾರ ಭಾರತಿ ಹೇಳಿದೆ. ರಾಮಾಯಣ ಮೊದಲ ಬಾರಿಗೆ ಪ್ರಸಾರವಾದಾಗ 30.4 ಲಕ್ಷ ವೀಕ್ಷಕರನ್ನು ಹೊಂದಿತ್ತು. ಇದೀಗ ಮರು ಪ್ರಸಾರದ ಅವಧಿಯಲ್ಲಿ ಈ ಸಂಖ್ಯೆ 40.5 ಲಕ್ಷ ದಾಟಿದೆ.