ಆಗ ತಾನೇ ದ್ವಿತೀಯ ಪಿಯುಸಿ ಪರೀಕ್ಷೆ ಮುಗಿಸಿದ್ದೆ. ಡಿಗ್ರಿಗೆ ಹೋಗುವ ಮೊದಲು ಮೂರು ತಿಂಗಳು ವಿರಾಮ ಸಿಕ್ಕಿತ್ತು. ಆ ಬಿಡುವಿನಲ್ಲಿ ಏನು ಮಾಡುವುದು ಎಂದು ತಲೆ ಕೆಡಿಸಿಕೊಂಡು ಕುಳಿತಿದ್ದೆ. ಅಷ್ಟರಲ್ಲೇ ನನ್ನ ಸ್ನೇಹಿತ ಬಂದು “ಮಗಾ… ಒಂದು ಕೆಲಸ ಇದೆ. ನೀನೂ ಬರ್ತೀಯಾ?’ ಎಂದು ಕೇಳಿದ. ಹೂಂ ಎಂದು ಒಪ್ಪಿಗೆ ನೀಡಿ, ಅಮ್ಮನ ಬಳಿ ಅನುಮತಿ ಕೇಳಿದೆ. ಮೊದಲು ನಿರಾಕರಣೆಯ ಮಾತಾಡಿದ ಅಮ್ಮ, ನಂತರ ಹಸಿರು ನಿಶಾನೆ ತೋರಿದರು.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಒಂದು ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿದೆ. ಆ ಕೆಲಸ ಬೇಸರ ಎನಿಸಿದರೂ, ಸಂಬಳಕ್ಕಾಗಿ ದುಡಿಯುವುದು ಅನಿವಾರ್ಯವೇ ಆಗಿತ್ತು. ಅಪ್ಪ ಕುಟುಂಬ ತೊರೆದಿದ್ದರಿಂದ, ಅಮ್ಮನ ಮೇಲೆ ಸಂಸಾರದ ಹೊರೆ ಬಿದ್ದಿತ್ತು. ಅಮ್ಮನಿಗೆ ಭಾರವಾಗದೇ, ನನ್ನ ಶಿಕ್ಷಣದ ಹೊರೆಯನ್ನು ನಾನೇ ಹೊರಬೇಕು ಎಂಬ ದೃಢ ನಿರ್ಣಯದಿಂದ ಕೆಲಸ ಮಾಡಿದೆ. ಮೊದಲ ತಿಂಗಳ ಸಂಬಳವೆಂದು 6 ಸಾವಿರ ರೂ. ಕೈ ಸೇರಿತು. ಅಷ್ಟನ್ನೂ ಅಮ್ಮನಿಗೆ ಕೊಟ್ಟಾಗ, ಅವರ ಮೊಗದಲ್ಲಿ ಕಿರುನಗುವೊಂದು ಮೂಡಿದ್ದನ್ನು ನೋಡಿ ನನ್ನ ಕಂಗಳಲ್ಲಿ ಆನಂದಬಾಷ್ಪ ಉಕ್ಕಿತ್ತು. ಆ ದೃಶ್ಯ ನನ್ನ ಜೀವನದ ಕೊನೆಯ ತನಕವೂ ಜೀವಂತವಾಗಿ ದಾಖಲಾಗಿರುತ್ತದೆ.
ಎರಡು ತಿಂಗಳು ಚೆನ್ನಾಗಿ ದುಡಿದ ಮೇಲೆ, ನಾನು ನೀಡಿದ್ದ ಮೊದಲ ತಿಂಗಳ ಸಂಬಳವನ್ನೂ ಅಮ್ಮ ನನ್ನ ಕೈಗಿಟ್ಟು ಹೇಳಿದಳು: “ಈ ಹಣದಲ್ಲಿ ಮೊದಲು ಪದವಿಗೆ ಸೇರು. ಒಂದು ಸೈಕಲ್ ತೆಗೆದುಕೋ. ಅಗತ್ಯವಿದ್ದರೆ, ಮೊಬೈಲ್ ಕೊಂಡುಕೋ’.
ಪದವಿ ಪೂರೈಸಿ, ಇಂದು ಸ್ನಾತಕೋತ್ತರ ಪದವಿಯನ್ನು ಮುಗಿಸುವ ಹಂತದಲ್ಲಿದ್ದೇನೆ. ಆ ಮೊದಲ ಸಂಬಳ, ಮೊದಲ ದುಡಿಮೆಯ ಸಂತೃಪ್ತಿ ಮತ್ತು ಅಮ್ಮನ ಹಾರೈಕೆಯ ಮಾತುಗಳು ಸದಾ ನೆನಪಾಗುತ್ತಲೇ ಇರುತ್ತವೆ.
ಮನೋಹರ್ ಎಂ., ದೇವನಹಳ್ಳಿ