Advertisement

2500 ಕೋಟಿಗೂ ಹೆಚ್ಚು ಅನುದಾನ

06:30 AM Jul 19, 2018 | Team Udayavani |

ಬೆಂಗಳೂರು: ಕಳೆದೆರಡು ದಿನಗಳಿಂದ ಕೇಂದ್ರದ ವಿವಿಧ ಸಚಿವರೊಂದಿಗೆ ನಡೆಸಿದ ಮಾತುಕತೆ ಫ‌ಲವಾಗಿ ರಾಜ್ಯಕ್ಕೆ ಸುಮಾರು 2,500 ಕೋಟಿ ರೂಪಾಯಿಗೂ ಹೆಚ್ಚು ಅನುದಾನ ಪಡೆದುಕೊಳ್ಳುವುದರ ಜತೆಗೆ ವಿವಿಧ ಯೋಜನೆಗಳಿಗೆ ಅನುಮತಿ
ದೊರಕಿಸಿಕೊಳ್ಳುವಲ್ಲಿ ತಾವು ಯಶಸ್ವಿಯಾಗಿರುವುದಾಗಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

Advertisement

ಮುಂಗಾರು ಅಧಿವೇಶನದ ಹಿನ್ನೆಲೆಯಲ್ಲಿ ರಾಜ್ಯದ ಸಂಸದರೊಂದಿಗೆ ಚರ್ಚಿಸುವ ಸಲುವಾಗಿ ದೆಹಲಿಗೆ ಭೇಟಿ ನೀಡಿರುವ ಮುಖ್ಯಮಂತ್ರಿ, ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳು, ಭೂಸಾರಿಗೆ, ರಕ್ಷಣೆ, ಕೃಷಿ ಹಾಗೂ ರೈಲ್ವೆ ಮತ್ತು ಕಲ್ಲಿದ್ದಲು ಸಚಿವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ.

ದೆಹಲಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವರ ಭೇಟಿ ಫ‌ಲಪ್ರದವಾಗಿದೆ. ರಾಜ್ಯದ ಕೋರಿಕೆಗಳಿಗೆ ಎಲ್ಲ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ರಾಜ್ಯಕ್ಕೆ 2014ರಿಂದ ಇದುವರೆಗೆ ಕೇಂದ್ರದಿಂದ ಬರಬೇಕಾಗಿದ್ದ ಬೆಂಬಲ ಬೆಲೆ ಬಾಕಿ ಮೊತ್ತ 954 ಕೋಟಿ ರೂ.ಬಿಡುಗಡೆ ಮಾಡಲು ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ರಾಮ್‌ವಿಲಾಸ್‌ ಪಾಸ್ವಾನ್‌ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದರು.

ಹೆದ್ದಾರಿಗೆ ನೆರವು, ನೀರಾವರಿ ಸಮಸ್ಯೆಗೆ ಸ್ಪಂದನೆ: ಕೇಂದ್ರ ಹೆದ್ದಾರಿ, ಭೂಸಾರಿಗೆ ಮತ್ತು ಜಲ ಸಂಪನ್ಮೂಲ ಸಚಿವ ನಿತಿನ್‌ ಗಡ್ಕರಿ ಅವರನ್ನು ಭೇಟಿಯಾಗಿ ಹೆದ್ದಾರಿ ಮಂತ್ರಾಲಯದಿಂದ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ  ಸೇರಿದಂತೆ ರಾಜ್ಯದಲ್ಲಿರುವ ಪ್ರಮುಖ ಹೆದ್ದಾರಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿಕೊಡುವಂತೆ ಮಾಡಿದ ಮನವಿಗೆ ಸ್ಪಂದಿಸಿದ್ದಾರೆ. ಜತೆಗೆ, ಕಾವೇರಿ ನದಿ ನೀರು ಹಂಚಿಕೆ ಪ್ರಾಧಿಕಾರ ರಚನೆ ವೇಳೆ ಆಗಿರುವ ಗೊಂದಲ ಮತ್ತು ಮೇಕೆದಾಟು ವಿಷಯಗಳ ಬಗ್ಗೆ ರಾಜ್ಯಕ್ಕೆ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದರು.

ಮೆಟ್ರೋಗೆ ರಕ್ಷಣಾ ಇಲಾಖೆ ಜಮೀನು: ಮೆಟ್ರೋ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ
ಸೀತಾರಾಮನ್‌ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದು, ಮೆಟ್ರೋ ವಿಸ್ತರಣೆ ಸಂದರ್ಭದಲ್ಲಿ ನಿಲ್ದಾಣ ಕಾಮಗಾರಿಗಳಿಗೆ
ನಿಗದಿಪಡಿಸಿರುವ ಭೂಮಿಯಲ್ಲಿ ಕೆಲವೊಂದು ಕಡೆ ರಕ್ಷಣಾ ಇಲಾಖೆ ಜಮೀನು ಸೇರಿರುವುದರಿಂದ ಅದನ್ನು ರಾಜ್ಯ ಸರ್ಕಾರಕ್ಕೆ
ಬಿಟ್ಟು ಕೊಡುವಂತೆ ಮನವಿ ಮಾಡಲಾಗಿದೆ.ಇದಕ್ಕೆ ಸ್ಪಂದಿಸಿದ ಸಚಿವರು, ರಕ್ಷಣಾ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ನೆರವು ಕೊಡುವ ಭರವಸೆ ನೀಡಿರುವುದಾಗಿ ತಿಳಿಸಿದರು ಎಂದರು.

Advertisement

ರೈಲ್ವೆ ಯೋಜನೆಗಳಿಗೆ ನೆರವು: ಕೇಂದ್ರ ರೈಲ್ವೆ ಮತ್ತು ಕಲ್ಲಿದ್ದಲು ಸಚಿವ ಪಿಯೂಷ್‌ ಗೋಯೆಲ್‌ ಅವರನ್ನು ಭೇಟಿಯಾಗಿ, ಕೊಂಕಣ ರೈಲ್ವೆಯಲ್ಲಿರುವ ಪೊಲೀಸ್‌ ಬಲದ ಕಾರ್ಯಕ್ಷಮತೆ ಹೆಚ್ಚಿಸುವ ದೃಷ್ಟಿಯಿಂದ ಹಾಲಿ ಇರುವ 900 ಹುದ್ದೆಗಳ ಜತೆಗೆ ಸರ್ಕಾರಿ ರೈಲ್ವೆ ಪೊಲೀಸ್‌ ದಳದ (ಜಿಆರ್‌ಪಿ) ಸಂಖ್ಯಾಬಲಕ್ಕೆ ಹೆಚ್ಚುವರಿಯಾಗಿ 919ಕ್ಕೆ ಏರಿಕೆ ಮಾಡುವಂತೆ ಮತ್ತು ರಾಜ್ಯದಲ್ಲಿ ಹೊಸ ರೈಲು ಮಾರ್ಗಗಳನ್ನು ನಿರ್ಮಿಸಲು ಆದ್ಯತೆ ನೀಡುವಂತೆ ಮನವಿ ಮಾಡಿದ್ದು, ಅವರಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ ಎಂದು ತಿಳಿಸಿದರು.

ಮೆಗಾ ಡೈರಿಗಳಿಗೆ 900 ಕೋಟಿ ರಾಜ್ಯದ ಬೇಡಿಕೆಗಳಿಗೆ ಕೃಷಿ ಸಚಿವ ರಾಧಾಮೋಹನ್‌ ಸಿಂಗ್‌ ಅವರೂ ಪೂರಕವಾಗಿ ಸ್ಪಂದಿಸಿದ್ದಾರೆ. ರಾಜ್ಯದಲ್ಲಿ ಪ್ರತಿನಿತ್ಯ 85 ಲಕ್ಷ ಲೀಟರ್‌ ಹಾಲು ಉತ್ಪಾದನೆಯಾಗುತ್ತಿರುವುದರಿಂದ ಹಲವು ಜಿಲ್ಲೆಗಳ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಮೆಗಾ ಡೈರಿ ಸ್ಥಾಪಿಸಬೇಕೆಂಬ ರಾಜ್ಯದ ಉದ್ದೇಶವನ್ನು ಅವರ ಗಮನಕ್ಕೆ ತಂದಾಗ, ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದಕ್ಕಾಗಿ ಕೇಂದ್ರದಿಂದ 900 ಕೋಟಿ ರೂ. ಅನುದಾನ ಬಿಡುಗಡೆ ಮಾಡಲು ಸಮ್ಮತಿಸಿದ್ದಾರೆ. ಈ ಅನುದಾನದಲ್ಲಿ ಹಾಸನ, ಕೋಲಾರ ಮತ್ತು ದಕ್ಷಿಣ ಕನ್ನಡ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮೆಗಾ ಡೈರಿಗಳನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದರು.

ಇದರ ಜತೆಗೆ, ರಾಜ್ಯದಲ್ಲಿ ಮಾರುಕಟ್ಟೆಗಳನ್ನು ಉನ್ನತೀಕರಿಸಲು ಅಗತ್ಯವಿರುವ ಅನುದಾನ, ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಮಣ್ಣು ಪರೀಕ್ಷಾ ಕೇಂದ್ರಗಳ ಸ್ಥಾಪನೆ, ಆವರ್ತ ನಿಧಿ, ಬೆಂಬಲ ಬೆಲೆ ಹಾಗೂ ಅಡಕೆ ಮತ್ತು ತೆಂಗು ಬೆಳೆಗಾರರ ರಕ್ಷಣೆಗಾಗಿ ಅಗತ್ಯ ಕ್ರಮ ಕೈಗೊಳ್ಳಲು ಅನುದಾನ ಒದಗಿಸುವಂತೆ ಮಾಡಿದ ಮನವಿಗೂ ಕೇಂದ್ರ ಕೃಷಿ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿರುವುದಾಗಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next