ರಾಮನಗರ: ಅಸ್ತಿತ್ವ ಕಳೆದುಕೊಂಡಿರುವ ಕನಕಪುರ ಲೋಕಸಭಾ ಕ್ಷೇತ್ರ ಮತ್ತು ಹಾಲಿ ಇರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಠೇವಣಿ ಕಳೆದುಕೊಂಡಿರುವವರ ಪೈಕಿ ಪಕ್ಷೇತರರೇ ಹೆಚ್ಚು. ಈ ಹಿಂದೆ ಇದ್ದ ಕನಕಪುರ ಲೋಕಸಭಾ ಕ್ಷೇತ್ರ ಮತ್ತು ಹಾಲಿ ಬೆಂ.ಗ್ರಾಮಾಂತರ ಲೋಕಸಭಾ ಕ್ಷೇತ್ರಗಳಲ್ಲಿ ಇದು ವರೆಗೆ 13 ಸಾರ್ವತ್ರಿಕ ಚುನಾವಣೆಗಳು ನಡೆದಿವೆ. 2 ಬಾರಿ ಉಪ ಚುನಾವಣೆಗಳು ನಡೆದಿವೆ.
ಕಾನೂನು ಏನನ್ನುತ್ತೆ?: ಪ್ರತಿ ಬಾರಿ ನಡೆಯುವ ಚುನಾವಣೆಯಲ್ಲೂ ಚಲಾವಣೆಯಾದ ಒಟ್ಟು ಮತದಾನದಲ್ಲಿ ಮಾನ್ಯವಾಗಿರುವ ಮತಗಳ ಪೈಕಿ ಆರನೇ ಒಂದು ಭಾಗದಷ್ಟು ಮತಗಳನ್ನು ಅಭ್ಯರ್ಥಿಗಳು ಪಡೆಯಬೇಕು. ಹಾಗೊಮ್ಮೆ ಪಡೆಯದಿದ್ದರೆ ಅವರ ಠೇವಣಿ ನಷ್ಟವಾಗುತ್ತದೆ. ಕನಕಪುರ ಲೋಕಸಭಾ ಕ್ಷೇತ್ರಕ್ಕೆ ನಡೆದ ಪ್ರಥಮ ಚುನಾವಣೆಯಲ್ಲಿ 2.66 ಮತಗಳು ಮಾನ್ಯವಾಗಿದ್ದವು. ಠೇವಣಿ ಉಳಿಸಿಕೊಳ್ಳಲು ಅಭ್ಯರ್ಥಿಗಳು 44,396 ಮತಗಳನ್ನು ಪಡೆಯಬೇಕಾಗಿತ್ತು. ಪಕ್ಷೇತರ ಎಂ.ಬಿ.ದಾಸ್ 73,198 ಮತ ಪಡೆದು ಠೇವಣಿ ಉಳಿಸಿಕೊಂಡಿದ್ದರು. ಇತರ ನಾಲ್ವರು ಅಭ್ಯರ್ಥಿಗಳು ಠೇವಣಿ ನಷ್ಟ ಮಾಡಿಕೊಂಡಿದ್ದರು.
1971ರಲ್ಲಿ 3.05 ಲಕ್ಷ ಮತಗಳು ಮಾನ್ಯಗೊಂಡಿದ್ದವು. ಕಾಂಗ್ರೆಸ್ ಅಭ್ಯರ್ಥಿ ಸಿ.ಕೆ.ಜಾಫರ್ ಷರೀಫ್ಯಶಸ್ಸು ಸಾಧಿಸಿದ್ದರು. ಎನ್‌ಸಿಒ ಅಭ್ಯರ್ಥಿ ಎಂ.ವಿ.ರಾಜಶೇಖರನ್ ಠೇವಣಿ ಉಳಿಸಿಕೊಂಡರು ಉಳಿದವರು ಠೇವಣಿ ನಷ್ಟ ಅನುಭವಿಸಿದ್ದರು. 1977ರ ಚುನಾವಣೆಯಲ್ಲಿ 4.07 ಲಕ್ಷ ಮತಗಳು ಮಾನ್ಯ ಗೊಂಡಿದ್ದವು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎಂ.ವಿ.ಚಂದ್ರಶೇಖರ ಮೂರ್ತಿ ವಿಜೇತರಾದರು. ಬಿಎಲ್‌ಡಿ ಅಭ್ಯರ್ಥಿ ಎಂ.ವಿ.ರಾಜಶೇಖರನ್ ಈ ಚುನಾವಣೆಯಲ್ಲೂ ಠೇವಣಿ ಉಳಿಸಿ ಕೊಂಡರು. ಪಕ್ಷೇತರ ಅಭ್ಯರ್ಥಿಗಳು ಠೇವಣಿ ನಷ್ಟವಾಗಿತ್ತು.
ಎಚ್‌ಡಿಕೆಗೂ ಠೇವಣಿ ಲಾಸ್: 1999ರ ಚುನಾವಣೆಯಲ್ಲಿ 12.33 ಲಕ್ಷ ಮತಗಳು ಮಾನ್ಯವಾಗಿದ್ದವು. ಆಗ ಸ್ಪರ್ಧಿಸಿದ್ದ ಎಚ್.ಡಿ.ಕುಮಾರಸ್ವಾಮಿ, 1.62 ಲಕ್ಷ ಮತಗಳನ್ನು ಪಡೆದುಕೊಂಡಿದ್ದರು. ಠೇವಣಿ ಉಳಿಸಿಕೊಳ್ಳಲು 2.05 ಲಕ್ಷ
ಮತಗಳನ್ನು ಪಡೆಯಬೇಕಿತ್ತು. ಹೀಗಾಗಿ ಅವರು ಠೇವಣಿ ನಷ್ಟ ಮಾಡಿಕೊಂಡರು.
ತೇಜಸ್ವಿನಿಗೆ ಠೇವಣಿ ನಷ್ಟ: 2008ರಲ್ಲಿ ಅಸ್ತಿತ್ವಕ್ಕೆ ಬಂದ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಪ್ರಥಮ ಬಾರಿಗೆ 2009ರಲ್ಲಿ ಚುನಾವಣೆ ನಡೆಯಿತು. ಜೆಡಿಎಸ್ ಅಭ್ಯರ್ಥಿ ಎಚ್.ಡಿ.ಕುಮಾಸ್ವಾಮಿ, ಬಿಜೆಪಿಯಿಂದ ಸಿ.ಪಿ.ಯೋಗೇಶ್ವರ್ ಮತ್ತು ಕಾಂಗ್ರೆಸ್‌ನಿಂದ ತೇಜಸ್ವಿನಿ ಗೌಡ ಕಣದಲ್ಲಿದ್ದರು. ಠೇವಣಿ ಉಳಿವಿಗೆ 3.17 ಲಕ್ಷ ಮತ ಪಡೆಯಬೇಕಿತ್ತು. ಎಚ್.ಡಿ.ಕುಮಾರಸ್ವಾಮಿ 4.93 ಲಕ್ಷ ಮತಗಳನ್ನು ಪಡೆದು ಯಶಸ್ವಿಯಾದರು. ಬಿಜೆಪಿಯ ಸಿ.ಪಿ.ಯೋಗೇಶ್ವರ 3.63 ಲಕ್ಷ ಮತಗಳನ್ನು ಗಳಿಸಿದರು. ಆದರೆ, ಕಾಂಗ್ರೆಸ್‌ನ ತೇಜಸ್ವಿನಿ ಗೌಡ ಅವರು 1.92 ಲಕ್ಷ ಮತ ಪಡೆದುಕೊಂಡು, ಠೇವಣಿ ನಷ್ಟ ಅನುಭವಿಸಿದ್ದರು.