ಹುಮನಾಬಾದ: ಅತ್ಯಾಧುನಿಕ ಬೇಸಾಯ ಪದ್ಧತಿಯಿಂದ ಅಧಿಕ ಆದಾಯ ಗಳಿಸಲು ಸಾಧ್ಯ ಎಂದು ಗಣಿ ಮತ್ತು ಭೂವಿಜ್ಞಾನ ಖಾತೆ ಸಚಿವ ರಾಜಶೇಖರ ಪಾಟೀಲ ಸಲಹೆ ನೀಡಿದರು.
ಮುಸ್ತರಿ ಗ್ರಾಮದಲ್ಲಿ ಗುರುವಾರ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟೆ, ತೋಟಗಾರಿಕೆ ಮಹಾವಿದ್ಯಾಲಯ ಬೀದರ್ ಹಾಗೂ ಜಿಲ್ಲಾ ಪಂಚಾಯಿತಿ ಬೀದರ್ ಸಂಯುಕ್ತ ಆಶ್ರಯದಲ್ಲಿ ತೋಟಗಾರಿಗೆ ಬಿಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿಗಳ ಗ್ರಾಮೀಣ ತೋಟಗಾರಿಕೆ ಕಾರ್ಯಾನುಭವ ಶಿಬಿರ ನಿಮಿತ್ತ ಆಯೋಜಿಸಿದ್ದ ಉದ್ಯಾನೋತ್ಸವ ಹಾಗೂ ತೋಟಗಾರಿಕೆ ವಸ್ತು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದಿನಂತೆ ಈಗ ನೇರವಾಗಿ ಬಿತ್ತನೆ ಕೈಗೊಂಡರೆ ನಿರೀಕ್ಷಿತ ಆದಾಯ ಪಡೆಯುವುದು ಕಷ್ಟಸಾಧ್ಯ. ಈ ನಿಟ್ಟಿನಲ್ಲಿ ಕೃಷಿ ವಿಜ್ಞಾನಿಗಳ ಮಾರ್ಗದರ್ಶನದಂತೆ ಕಡ್ಡಾಯವಾಗಿ ಮಣ್ಣು ಪರೀಕ್ಷೆ, ಬೀಜ ಪರೀಕ್ಷೆ ನಂತರವಷ್ಟೇ ಅವರ ಸಲಹೆ ಮೇರೆಗೆ ಬಿತ್ತನೆ ಕೈಗೊಳ್ಳಬೇಕು. ಜಲ ಅಮೂಲ್ಯವಾಗಿರುವ ಇತ್ತೀಚಿನ ದಿನಗಳಲ್ಲಿ ನೀರಿಲ್ಲ ಎಂದು ಕೈ ಕಟ್ಟಿ ಕುಳಿತುಕೊಳ್ಳದೇ, ಹನಿ ನೀರಾವರಿ ಪದ್ಧತಿ ಅನುಸರಿಸಬೇಕು. ಇನ್ನೂ ಹಿಂದಿನಂತೆ ನಿರಂತರ ಒಂದೇ ಬೆಳೆ ಬೇಸಾಯ ಮಾಡದೇ ವಿಭಿನ್ನ ಬೆಳೆ ತೆಗೆಯಲು ಯತ್ನಿಸಬೇಕು. ಹಿಂದಿನಂತೆ ಬರೀ ಕಬ್ಬು, ಗೋಧಿ, ತೊಗರಿ, ಕಡಲೆ ಇತರೆ ಧಾನ್ಯ ಉತ್ಪನ್ನಕ್ಕೆ ಕೈ ಹಾಕದೇ ತೋಟಗಾರಿಕೆ ಬೇಸಾಯಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ರೈತ ಈ ದೇಶದ ಬೆನ್ನಲುಬು. ಅವರ ಸಂಕಷ್ಟ ತನ್ನ ಸಂಕಷ್ಟವೆಂದು ಭಾವಿಸಿರುವ ರಾಜ್ಯ ಸರ್ಕಾರ ಸಾಲ ಮನ್ನಾದಂತಹ ಜನಪರ ಯೋಜನೆ ಮೂಲಕ ಅವರ ಬೆನ್ನುಲುಬಾಗಿ ನಿಂತಿದೆ. ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ರೈತರು ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು ಎಂದರು. ಇತ್ತೀಚೆಗೆ ವಿದ್ಯಾರ್ಥಿಗಳು ಶೋಕಿ ಜೀವನ ಶೈಲಿಗೆ ಮಾರುಹೋಗುತ್ತಿರುವ ಈ ಸಂದರ್ಭದಲ್ಲಿ ತೋಟಗಾರಿಗೆ ಪದವಿ ಪಡೆಯುತ್ತಿರುವ ಇಲ್ಲಿನ ವಿದ್ಯಾರ್ಥಿಗಳ ಶ್ರಮ, ಹೊಸ ಆಲೋಚನೆ ಇತರರಿಗೆ ಮಾದರಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಬೀದರ್ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ| ಚಂದ್ರಶೇಖರ ಮಲಗೆ ಮಾತನಾಡಿ, ನೀರಿನ ಅಭಾವ ಎದುರಿಸುತ್ತಿರುವ ರೈತರು ಇಸ್ರೇಲ್ ಮಾದರಿ ಬೇಸಾಯ ಪದ್ಧತಿ ಅನುಸರಿಸಬೇಕು. ಇಡೀ ದೇಶಕ್ಕೆ ಅನ್ನ ಕೊಡುವ ರೈತ ಸಾಲಕ್ಕಾಗಿ ಇನ್ನೊಬ್ಬರ ಎದುರು ಕೈ ಚಾಚುವ ಕೆಟ್ಟ ಪರಿಸ್ಥಿತಿ ಭವಿಷದ್ಯಲ್ಲಿ ಯಾವೊಬ್ಬ ರೈತರಿಗೂ ಬರಬಾರದು. ಆಹಾರ ಉತ್ಪನ್ನ ಅತ್ಯಂತ ಶ್ರೇಷ್ಟ ವೃತ್ತಿ. ಜಿಗುಪ್ಸೆಗೊಂಡು ಆತ್ಮಹತ್ಯೆಯಂತಹ ಕೀಳು ಕೃತ್ಯಕ್ಕೆ ಕೈಹಾಕದೇ ಅನ್ಯರಿಗೆ ಕೈ ಎತ್ತಿ ಸಾಲ ನೀಡುವಂತಾಗಬೇಕು ಎಂದು ಸಲಹೆ ನೀಡಿದರು.
ಸಹಾಯಕ ಕೃಷಿ ನಿರ್ದೇಶಕ ಡಾ| ಪಿ.ಎಂ.ಮಲ್ಲಿಕಾರ್ಜುನ ಮಾತನಾಡಿ, ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ಡಾ| ಶಂಕರ ಪಟವಾರಿ, ಡಾ| ಅಶೋಖ ಸೂರ್ಯವಂಶಿ ವಿಶೇಷ ಉಪನ್ಯಾಸ ನೀಡಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತೀಬಾಯಿ ಶೇರಿಕಾರ್, ಉಪಾಧ್ಯಕ್ಷ ಡಾ| ಪ್ರಕಾಶ ಪಾಟೀಲ, ಸದಸ್ಯ ಲಕ್ಷ್ಮಣರಾವ್ ಬುಳ್ಳಾ, ತಾಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕಂಟೆಪ ದಾನಾ, ಸದಸ್ಯ ಬೀರಪ್ಪ, ಮನೋಜ ಕೋಟೆ, ನಿರ್ಮಲಾ ಮಳ್ಳಿ, ಮುುಸ್ತರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೈನೋದ್ದಿನ್, ಕೊಡಂಬಲ್ ಗ್ರಾಪಂ ಅಧ್ಯಕ್ಷೆ ರಂಗಮ್ಮ ಕೂಟಗಿ, ಉಡಬಾಳ ಗ್ರಾಪಂ ಅಧ್ಯಕ್ಷ ರುಕ್ಕಮ್ಮ ಗೋವಿಂದಪ್ಪ, ಪಿಕೆಪಿಎಸ್ ಅಧ್ಯಕ್ಷ ಸೋಮಶೇಖರ ಪಾಟೀಲ, ಡಾ| ಪ್ರಶಾಂತ ಹೊಸಮನಿ, ಗುಂಡೇರಾವ್ ಕುಲಕರ್ಣಿ, ನಾರಾಯಣರಾವ್ ಭಂಗಿ, ರಮೇಶ ಪಾಟೀಲ, ಚಂದ್ರಶೇಖರ ತಂಗಾ, ರಮೇಶ ಸಲಗರ್ ಇನ್ನಿತರರು ಇದ್ದರು.
ರೇಣುಕಾ ಪ್ರಾರ್ಥಿಸಿದರು. ಪ್ರವೀಣ ಸ್ವಾಗತಿಸಿದರು. ಮಲ್ಲಿಕಾರ್ಜುನ ಪ್ರಾಸ್ತಾವಿಕ ಮಾತನಾಡಿದರು. ರವೀಂದ್ರ ನಿರೂಪಿಸಿದರು. ಶಾರದಾ ವಂದಿಸಿದರು.