Advertisement
ತುರ್ತು ಪರಿಸ್ಥಿತಿ ಬಳಿಕ ದೇಶವ್ಯಾಪಿ ಲೋಕಸಭಾ ಕ್ಷೇತ್ರಗಳ ಮರು ವಿಂಗಡಣೆಯಾದ ವೇಳೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರವೂ ರಚನೆಯಾಯಿತು. 1977ರಲ್ಲಿ ಈ ಕ್ಷೇತ್ರ ಮೊದಲ ಲೋಕಸಭಾ ಚುನಾವಣೆ ಎದುರಿಸಿದೆ. ಅಲ್ಲಿಂದ 2019ರ ವರೆಗೆ 12 ಚುನಾವಣೆಗಳನ್ನು ಕಂಡಿದೆ. ಈ ಕ್ಷೇತ್ರಕ್ಕೆ ಒಂದು ದೊಡ್ಡ ಇತಿಹಾಸವೇ ಇದೆ. ಸ್ವಾತಂತ್ರ್ಯದ ಬಳಿಕ ಬೆಂಗಳೂರು ದಕ್ಷಿಣ ಕ್ಷೇತ್ರವು ಮೈಸೂರು ರಾಜ್ಯದ ಅಧೀನದಲ್ಲಿತ್ತು. ಆಗ ಸ್ವಾತಂತ್ರ್ಯ ಹೋರಾಟಗಾರ ಹಾಗೂ ವಕೀಲ ಟಿ. ಮಾದಯ್ಯಗೌಡ ಅವರು ಮೊದಲ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕ್ಷೇತ್ರದಿಂದ ಗೆದ್ದು ಸಂಸತ್ ಪ್ರವೇಶಿಸಿದ್ದರು.
Related Articles
Advertisement
1991ರಿಂದ ಇಲ್ಲಿ ಕೆ. ವೆಂಕಟಗಿರಿ ಗೌಡರಿಂದ ಆರಂಭವಾದ ಬಿಜೆಪಿ ಖಾತೆ ನಾಗಾಲೋಟದಲ್ಲಿ ಮುಂದುವರಿದಿದೆ. 1996ರಿಂದ 2014ರ ವರೆಗೆ ಸತತ 6 ಸಲ ಅನಂತಕುಮಾರ್ ಗೆದ್ದು ಈ ಕ್ಷೇತ್ರವನ್ನು ಬಿಜೆಪಿಯ ಭದ್ರನೆಲೆಯಾಗಿಸಿದರು. 2014ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಐಟಿ ದಿಗ್ಗಜ ನಂದನ್ ನಿಲೇಕಣಿ ಅವರನ್ನೇ ಸೋಲಿಸಿದ ಕ್ಷೇತ್ರವಿದು.
ಅನಂತಕುಮಾರ್ ನಿಧನದ ಬಳಿಕ ನಡೆದ 2019ರ ಚುನಾವಣೆಯಲ್ಲಿ ಬಿಜೆಪಿಯ ತೇಜಸ್ವಿ ಸೂರ್ಯ ಗೆಲ್ಲುವ ಮೂಲಕ ಇದು ವ್ಯಕ್ತಿಗೆ ಮಣೆ ಹಾಕುವ ಕ್ಷೇತ್ರವಲ್ಲ, ಪಕ್ಷಕ್ಕೆ ಮನ್ನಣೆ ನೀಡುವ ಕ್ಷೇತ್ರ ಎಂಬುದನ್ನು ಸಾಬೀತುಪಡಿಸಿದೆ. 3 ದಶಕ ಗಳಿಗೂ ಹೆಚ್ಚು ಕಾಲದಿಂದ ಈ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿದೆ. ಕಾಂಗ್ರೆಸ್ ಅಭ್ಯರ್ಥಿಗಳ ಸೋಲಿಗೆಹೊಂದಾಣಿಕೆ ರಾಜಕಾರಣವೂ ಕಾರಣ ಎಂಬ ಒಳಸುಳಿಗಳ ಮಾತುಗಳು ಕ್ಷೇತ್ರದಲ್ಲಿ ಜನಜನಿತವಾಗಿವೆ.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರವು ಗೋವಿಂದರಾಜನಗರ, ವಿಜಯನಗರ, ಚಿಕ್ಕಪೇಟೆ, ಬಸವನಗುಡಿ, ಪದ್ಮನಾಭ ನಗರ, ಬಿ.ಟಿ.ಎಂ.ಲೇಔಟ್, ಜಯನಗರ ಹಾಗೂ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡು 22.88 ಲಕ್ಷ ಮತದಾರರನ್ನು ಹೊಂದಿದೆ. ಇಲ್ಲಿ ಸದ್ಯ ಕಾಂಗ್ರೆಸ್‌ನಿಂದ ಮೂವರು ಹಾಗೂ ಬಿಜೆಪಿಯಿಂದ ಐವರು ಶಾಸಕರಿದ್ದಾರೆ. ಶಾಸಕರ ಲೆಕ್ಕಾಚಾರದಲ್ಲಿ ಬಿಜೆಪಿಯೇ ಪ್ರಬಲವಾಗಿದೆ. ವಿಶೇಷವೆಂದರೆ ವಿಪಕ್ಷ ನಾಯಕ ಆರ್.ಅಶೋಕ್ ಹಾಗೂ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಕೂಡ ಈ ಕ್ಷೇತ್ರದವರೇ ಆಗಿದ್ದಾರೆ. ಹಿಂದಿನ ಚುನಾವಣೆಗಳ ಫಲಿತಾಂಶ ಹಾಗೂ ಸ್ಪರ್ಧಾಳುಗಳ ಚಿತ್ರಣವನ್ನು ಅವಲೋಕಿಸಿದರೆ ಈ ಕ್ಷೇತ್ರದಲ್ಲಿ ಸದಾ ಬಿಜೆಪಿ- ಕಾಂಗ್ರೆಸ್ ನಡುವೆಯೇ ನೇರ ಪೈಪೋಟಿ ನಡೆಯುತ್ತಿದೆ. ಜೆಡಿಎಸ್ ಸಹಿತ ಇತರ ಯಾವುದೇ ಪಕ್ಷಗಳು ಇಲ್ಲಿ ಲೆಕ್ಕಕ್ಕಿಲ್ಲ.
ಜಾತಿ ಲೆಕ್ಕಾಚಾರದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಹಿಂದುಳಿದ ವರ್ಗ, ದಲಿತರು, ಮುಸ್ಲಿಮರು, ಭಾಷಾ ಅಲ್ಪ ಸಂಖ್ಯಾಕರಾದ ತಮಿಳು, ತೆಲುಗು ಭಾಷಿಕ ಮತದಾ ರರೇ ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಬ್ರಾಹ್ಮಣರು ಹಾಗೂ ಒಕ್ಕಲಿಗರೇ ನಿರ್ಣಾಯಕರಾಗಿದ್ದಾರೆ. -ಎಂ .ಎನ್.ಗುರುಮೂರ್ತಿ