Advertisement

Guest Lecturer; ಸೇವಾ ಖಾಯಮಾತಿಗೆ ಇನ್ನಷ್ಟು ತೀವ್ರ ಹೋರಾಟ

11:18 PM Feb 10, 2024 | Team Udayavani |

ಮಂಗಳೂರು: ರಾಜ್ಯದಲ್ಲಿ 45 ದಿನ ಸತತ ತರಗತಿ ಬಹಿಷ್ಕಾರ, ಹಾಗೂ ಬೆಂಗಳೂರಿನಲ್ಲಿ ನಡೆಸಿದ ಪಾದಯಾತ್ರೆ ಸಹಿತ ಹೋರಾಟದಿಂದ ಸರಕಾರವು ರಾಜ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಹಲವು ಬೇಡಿಕೆಗಳಿಗೆ ಅಸ್ತು ಎಂದಿದೆ. ನಮ್ಮ ಪ್ರಮುಖ ಬೇಡಿಕೆಯಾದ ಸೇವಾ ಖಾಯಮಾತಿಗಾಗಿ ಇನ್ನಷ್ಟು ಹೋರಾಟ ಮಾಡಬೇಕಾಗಿದೆ ಎಂದು ರಾಜ್ಯ ಸರಕಾರಿ ಪ್ರ. ದ. ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘ ರಾಜ್ಯ ಘಟಕದ ಅಧ್ಯಕ್ಷ ಡಾ| ಹನುಮಂತ ಗೌಡ ಕಲ್ಮನಿ ಹೇಳಿದ್ದಾರೆ.

Advertisement

ನಗರದಲ್ಲಿ ಶನಿವಾರ ಸಂಘದ ದ.ಕ. ಮತ್ತು ಉಡುಪಿ ಜಿಲ್ಲಾ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಮಾವೇಶದಲ್ಲಿ ಅತಿಥಿಯಾಗಿ ಅವರು ಮಾತನಾಡಿದರು.

ಸಂಘದ ಇತಿಹಾಸದಲ್ಲೇ ಮೊದಲ ಬಾರಿಗೆ ಅತಿಥಿ ಉಪನ್ಯಾಸಕರನ್ನು ಕರೆದು ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ನಡೆದಿದೆ. ಸೇವಾ ಖಾಯಮಾತಿ ಕುರಿತು ಮೌಖಿಕ ಭರವಸೆ ಸಿಕ್ಕಿದೆ, ಇದು ಕಾರ್ಯರೂಪಕ್ಕೆ ಬರಲು ಎಲ್ಲರ ಒಗ್ಗಟ್ಟು, ಎಲ್ಲರ ಭಾಗಿದಾರಿಕೆ ಅಗತ್ಯ ಎಂದರು.

ಈಗಾಗಲೇ ನಮ್ಮ ಬೇಡಿಕೆಗಳಾದ ಒಂದು ಕುಟುಂಬಕ್ಕೆ ವಾರ್ಷಿಕ 5 ಲಕ್ಷ ಜೀವ ವಿಮೆ, ಮಹಿಳಾ ಉಪನ್ಯಾಸಕರಿಗೆ 3 ತಿಂಗಳ ವೇತನ ಸಹಿತ ಹೆರಿಗೆ ರಜೆ, 60 ವರ್ಷದ ಅನಂತರ 5 ಲಕ್ಷ ರೂ. ಇಡುಗಂಟು ಸೌಲಭ್ಯಗಳು ದೊರಕಲಿವೆ. ವೇತನ ಏರಿಕೆ ಜನವರಿಯಿಂದಲೇ ಸಿಗಲಿದೆ ಎಂದರು.

15-20 ವರ್ಷಗಳಿಂದ ಜೀತದಾಳು ರೀತಿಯಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೇವೆ, ಅನೇಕ ರಾಜಕಾರಣಿಗಳು ನಮ್ಮನ್ನು ಬೇಕಾದಂತೆ ಬಳಸಿಕೊಳ್ಳುತ್ತಾರೆ. ಅಂತಹವರಿಗೆ ಮುಂಬರುವ ಶಿಕ್ಷಕರ, ಪದವೀಧರ ಕ್ಷೇತ್ರದ ವಿಧಾನಪರಿಷತ್‌ ಚುನಾವಣೆಯಲ್ಲಿ ಪಾಠ ಕಲಿಸೋಣ, ಎಲ್ಲಕ್ಕಿಂತಲೂ ಮುಖ್ಯ ಎಂದರೆ ಎಲ್ಲ ಅತಿಥಿ ಉಪನ್ಯಾಸಕರೂ ಒಗ್ಗಟ್ಟಾಗಿರಬೇಕಾಗಿದೆ ಎಂದರು.

Advertisement

ಕಾಲೇಜು ಶಿಕ್ಷಣ ಇಲಾಖೆ ನಿವೃತ್ತ ಹೆಚ್ಚುವರಿ ನಿರ್ದೇಶಕ ಪ್ರೊ| ರಾಜಶೇಖರ ಹೆಬ್ಬಾರ್‌ ಮಾತನಾಡಿ, ಅತಿಥಿ ಉಪನ್ಯಾಸಕರ ಹಿಂದಿನ ಹೋರಾಟಗಳು ನಡೆದಾಗ ಯಾವುದೇ ಆಶಾಭಾವನೆ ಇರಲಿಲ್ಲ, ಆದರೆ ಈ ಬಾರಿಯ ಪಾದಯಾತ್ರೆ ಒಂದು ಹಂತದಲ್ಲಿ ಹಲವು ಭರವಸೆ ಮೂಡಿಸಿದೆ, ಮುಂದೆ ಇನ್ನಷ್ಟು ಸೇವಾಭದ್ರತೆ ಬರಲಿದೆ ಎಂಬ ವಿಶ್ವಾಸ ಉಂಟಾಗಿದೆ ಎಂದರು.

ನಮ್ಮಲ್ಲಿ ಇನ್ನೂ ಅತಿಥಿ ಉಪನ್ಯಾಸಕರ ನೀತಿನಿಯಮ ರೂಪಿಸಲೇ ಇಲ್ಲ, ಸರಿಯದ ನಿಯಮಾವಳಿ ಆಗಬೇಕು, ವಯಸ್ಸು ಮೀರಿದವರಿಗೆ ಸೇವಾ ಭದ್ರತೆ ಕೊಡುವುದು ಆಗಬೇಕು, ಸದ್ಯ ಖಾಯಂ ಅಲ್ಲದ, ಗುತ್ತಿಗೆ ಆಧಾರಿತವೂ ಅಲ್ಲದೆ ತ್ರಿಶಂಕು ಸ್ಥಿತಿಯಲ್ಲಿ ಇರುವ ಅತಿಥಿ ಉಪನ್ಯಾಸಕರು ಗುಂಪುಗಾರಿಕೆಗೆ ಮುಂದಾಗದೆ ಸಂಘಟಿತ ಹೋರಾಟದಿಂದ ಇನ್ನಷ್ಟು ಸಾಧಿಸಬೇಕು ಎಂದರು.

ಸಂಘಟನೆಯ ದ.ಕ., ಉಡುಪಿ ಘಟಕ ಅಧ್ಯಕ್ಷ ಮಾಧವ ಕೊಜಪ್ಪೆ ಪ್ರಸ್ತಾವನೆಗೈದು, ಹಿಂದೆ ನಮಗೆ ಸರಿಯಾದ ಮುಂದಾಳತ್ವ ಇರಲಿಲ್ಲ. ನಾವು ಸಾಯುವ ವರೆಗೂ ಅತಿಥಿ ಉಪನ್ಯಾಸಕರಾಗಿಯೇ ಇರಲಾ ಗದು, ಯಾವುದೇ ಸಮಸ್ಯೆ ಇದ್ದರೂ ಸಂಘಟನೆಯನ್ನು ಬಿಡಬಾರದು, ಒಗ್ಗಟ್ಟಾಗಿ ಹೋರಾಡಿ ಸೇವಾ ಭದ್ರತೆಯನ್ನು ಸಾಧಿಸೋಣ ಎಂದರು.

ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಡಾ| ಹರೀಶ ಆಚಾರ್ಯ, ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ಡಾ|ಪೀಟರ್‌ ವಿನೋದ್‌ ಚಂದ, ಜಿಲ್ಲಾ ಘಟಕಗಳ ಮುಖಂಡರಾದ ಧೀರಜ್‌ ಕುಮಾರ್‌, ಮನಮೋಹನ್‌, ಡಾ|ಶಾಹಿದಾ ಜಹಾನ್‌, ಗೀತಾ, ಕೊಡಗಿನ ಸುನಿಲ್‌ ಮತ್ತಿತರರಿದ್ದರು. ಶಕುಂತಲಾ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next