Advertisement
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಅಸ್ಥಿಮಜ್ಜೆ ಕಸಿ ಚಿಕಿತ್ಸಾ ಘಟಕದ ಕಟ್ಟಡ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಜನರಿಗೆ ಉತ್ತಮ ವೈದ್ಯಕೀಯ ಸೇವೆ ನೀಡಲು ಸ್ವಾಯತ್ತ ಸಂಸ್ಥೆಗಳಿಗೆ ಇನ್ನಷ್ಟು ಬಲ ತುಂಬುವ ನಿಟ್ಟಿನಲ್ಲಿ ಹೆಚ್ಚಿನ ಅನುದಾನ ಒದಗಿಸಲಾಗುವುದು ಎಂದು ಹೇಳಿದರು.
Related Articles
Advertisement
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಿರ್ದೇಶಕ ಸಿ.ರಾಮಚಂದ್ರ ಮಾತನಾಡಿ, 15 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಆಸ್ಪತ್ರೆಯ ಜಿಂದಾಲ್ ಬ್ಲಾಕ್‌ನ ಮೂರನೇ ಮಹಡಿ ಮೇಲಿರುವ ಸ್ಥಳದಲ್ಲಿ ನೂತನ ಘಟಕ ನಿರ್ಮಾಣ ಮಾಡಲಾಗುತ್ತಿದೆ. ಘಟಕವು 20 ಪ್ರತ್ಯೇಕ ಸುಸಜ್ಜಿತ ಕೊಠಡಿಗಳು, ಮೂರು ಕಿರು ಶಸ್ತ್ರಚಿಕಿತ್ಸಾ ಘಟಕಗಳು, ವೈದ್ಯರ ವಿಶ್ರಾಂತಿ ಕೊಠಡಿ ಹೊಂದಿರಲಿದ್ದು,
2.3 ಕೋಟಿ ರೂ. ಮೌಲ್ಯದ ಯಂತ್ರೋಪಕರಣಗಳನ್ನು ಇಲ್ಲಿ ಅಳವಡಿಸಲಾಗುವುದು. ಆರು ತಿಂಗಳೊಳಗೆ ಕೇಂದ್ರ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು. ವೈದ್ಯಕೀಯ ಶಿಕ್ಷಣ ಸಚಿವ ಇ.ತುಕಾರಾಂ, ಮೇಯರ್ ಗಂಗಾಂಬಿಕೆ, ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್, ಡಾ.ಕೆ.ಬಿ.ಲಿಂಗೇಗೌಡ ಉಪಸ್ಥಿತರಿದ್ದರು.
ಏನಿದು ಅಸ್ಥಿಮಜ್ಜೆ ಕಸಿ ಚಿಕಿತ್ಸೆ?: ಮೂಳೆಗಳ ಮಧ್ಯದಲ್ಲಿನ ಸ್ಪಂಜಿನಂತಹ ಭಾಗದಲ್ಲಿರುವ ಅಂಗಾಂಶವೇ ಅಸ್ಥಿಮಜ್ಜೆ. ಇದರಲ್ಲಿ ನಿತ್ಯ ಸುಮಾರು 200 ಕೋಟಿಯಷ್ಟು ಕೆಂಪು, ಬಿಳಿ ರಕ್ತ ಕಣಗಳು ಉತ್ಪಾದನೆಯಾಗುತ್ತವೆ. ಕೆಂಪು ರಕ್ತ ಕಣಗಳು ಜೀವಕೋಶಗಳಿಗೆ ಆಮ್ಲಜನಕ ಸರಬರಾಜು ಮಾಡಿದರೆ, ಬಿಳಿ ರಕ್ತ ಕಣಗಳು ರೋಗಾಣುಗಳನ್ನು ಸೆದೆಬಡಿಯುತ್ತವೆ. ಇವುಗಳನ್ನು ದೇಹದ ಒಂದು ಭಾಗದಿಂದ ಮತ್ತೂಂದು ಭಾಗಕ್ಕೆ ಅಥವಾ ವ್ಯಕ್ತಿಯಿಂದ ವ್ಯಕ್ತಿಗೆ ಕಸಿ ಮಾಡುವುದೇ ಅಸ್ಥಿಮಜ್ಜೆ ಕಸಿ ಚಿಕಿತ್ಸೆ.
ಈಗ ನಿರ್ಮಾಣವಾಗುತ್ತಿರುವ ಚಿಕಿತ್ಸಾ ಘಟಕದಲ್ಲಿ ವೈದ್ಯರು ಆರೋಗ್ಯವಂತ ವ್ಯಕ್ತಿಯ ದೇಹದಿಂದ ಅಸ್ಥಿಮಜ್ಜೆಯನ್ನು ತೆಗೆದು, ಲ್ಯುಕೇಮಿಯಾ, ಲಿಂಫೋಮೊ ಮತ್ತು ಅನೀಮಿಯಾದಂತಹ ರಕ್ತದ ಕ್ಯಾನ್ಸರ್ ಹೊಂದಿರುವ ವ್ಯಕ್ತಿಯ ದೇಹದ ಮೂಳೆಗಳ ನಾಳಗಳಲ್ಲಿ ತುಂಬುತ್ತಾರೆ. ವಿಕಿರಣ ಚಿಕಿತ್ಸೆ ಬಳಿಕವೂ ಕ್ಯಾನ್ಸರ್ ಅಂಶ ಉಳಿದಿದ್ದರೆ, ಹೊಸ ಮಜ್ಜೆ ತುಂಬಿದ ಬಳಿಕ ಅದು ವಾಸಿಯಾಗುತ್ತದೆ.
ಅಸ್ಥಿಮಜ್ಜೆ ಕಸಿ ಚಿಕಿತ್ಸೆಯಲ್ಲಿ ಎರಡು ವಿಧಗಳಿವೆ. ರೋಗಿಯಿಂದಲೇ ಮಜ್ಜೆ ತೆಗೆದು ಕಸಿ ಮಾಡುವುದನ್ನು ಅಟೊಲೊಗೊಸ್‌ಎಂದು, ಆರೋಗ್ಯವಂತ ವ್ಯಕ್ತಿಯಿಂದ ಮಜ್ಜೆ ತೆಗೆದು ರೋಗಿಗೆ ಕಸಿ ಮಾಡುವ ವಿಧಾನವನ್ನು ಅಲೋಜಿನಿಕ್ ಎಂದು ಕರೆಯಲಾಗುತ್ತದೆ. ಈ ಎರಡೂ ಕಸಿ ಚಿಕಿತ್ಸೆಗಳು ನೀತನ ಘಟಕದಲ್ಲಿ ಲಭ್ಯವಾಗಲಿವೆ. ಈ ಮೂಲಕ ಖಾಸಗಿ ಆಸ್ಪತ್ರೆಗಳಲ್ಲಿ 35 ಲಕ್ಷ ರೂ. ಶುಲ್ಕ ವಿಧಿಸಲಾಗುವ ಅಸ್ಥಿಮಜ್ಜೆ ಕಸಿ ಚಿಕಿತ್ಸೆ, ಕಿದ್ವಾಯಿಯಲ್ಲಿ ಬಿಪಿಎಲ್ ಕುಟುಂಬದ ರೋಗಿಗಳಿಗೆ ಉಚಿತವಾಗಿ ಹಾಗೂ ಇತರರಿಗೆ ಖಾಸಗಿ ಆಸ್ಪತ್ರೆ ಶುಲ್ಕದ ಅರ್ಧ ವೆಚ್ಚದಲ್ಲಿ ದೊರೆಯಲಿದೆ.
ಕಸಿ ಚಿಕಿತ್ಸಾ ಕೇಂದ್ರ ನಿರ್ಮಾಣವಾದ ಬಳಿಕ ನುರಿತ ತಜ್ಞರ ಅಗತ್ಯವಿರುತ್ತದೆ. ಇದಕ್ಕಾಗಿ ಇಬ್ಬರು ನುರಿತ ತಜ್ಞರು, ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರು, ಇಬ್ಬರು ಹಿರಿಯ ಸ್ಥಾನೀಯ ವೈದ್ಯಾಧಿಕಾರಿಗಳು, ತಂತ್ರಜ್ಞರು ಹಾಗೂ ರೋಗಶಾಸ್ತ್ರಜ್ಞರನ್ನು ನೇಮಕ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಸಿ.ರಾಮಚಂದ್ರ ತಿಳಿಸಿದರು.
ಸಿದ್ಧಗಂಗಾ ಶ್ರೀಗಳಿಗೆ “ಭಾರತರತ್ನ’ ನೀಡಲು ಪ್ರಧಾನಿಗೆ ಮನವಿ: ಸದ್ಯದ ಮಾಹಿತಿ ಪ್ರಕಾರ ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ತುಮಕೂರಿನ ವೈದ್ಯರ ಜತೆಗೆ ಬೆಂಗಳೂರಿನ ತಜ್ಞ ವೈದ್ಯರ ತಂಡ ಕೂಡ ಪರೀಕ್ಷೆ ನಡೆಸಿದೆ. ಶ್ರೀಗಳು ಪವಾಡ ಪುರುಷರು. ಶಿವಭಕ್ತರಾದ ಅವರಿಗೆ ಇಚ್ಛಾ ಮರಣ ಹೊಂದುವ ಶಕ್ತಿ ಇದೆ. ಅವರ ಆರೋಗ್ಯ ಚೇತರಿಕೆಗಾಗಿ ಭಗವಂತನಲ್ಲಿ ಬೇಡಿಕೊಳ್ಳುವೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
2007ರಲ್ಲಿ ಎಪಿಜೆ ಅಬ್ದುಲ್ ಕಲಾಂ ಅವರು ರಾಷ್ಟ್ರಪತಿಯಾಗಿದ್ದಾಗ ಶ್ರೀಗಳಿಗೆ ಭಾರತರತ್ನ ನೀಡಬೇಕೆಂದು ಮನವಿ ಮಾಡಿದ್ದೆ. ಆ ನಂತರವೂ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿ ಪತ್ರ ಬರೆದಿದ್ದೇನೆ. ಈಗ ಮತ್ತೂಮ್ಮೆ ಕೇಂದ್ರಕ್ಕೆ ಪತ್ರ ಬರೆಯುವೆ. ಅಗತ್ಯ ಬಿದ್ದರೆ, ನೇರವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮನವಿ ಮಾಡುತ್ತೇನೆ ಎಂದು ತಿಳಿಸಿದರು.