Advertisement

ಮಾನವೀಯ ಮೌಲ್ಯವುಳ್ಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು: ಸಿಎ ಐ. ಆರ್‌. ಶೆಟ್ಟಿ

02:04 PM Sep 22, 2021 | Team Udayavani |

ಮುಂಬಯಿ: ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ತರವಾದುದು ಎಂಬುದನ್ನು ನಮ್ಮ ಹಿರಿಯ, ಆದರ್ಶ ಶಿಕ್ಷಕರಾಗಿದ್ದ ಡಾ| ಸರ್ವಪಲ್ಲಿ ರಾಧಾಕೃಷ್ಣನ್‌ ಅವರು ಈ ಹಿಂದೆಯೇ ತೋರಿಸಿಕೊಟ್ಟಿದ್ದಾರೆ. ಇಂದಿನ ನಮ್ಮ ಶಿಕ್ಷಕರು ಸರ್ವಪಲ್ಲಿ ರಾಧಾಕೃಷ್ಣನ್‌ ಅವರ ಹಾದಿಯಲ್ಲೇ ನಡೆಯಬೇಕು. ವಿದ್ಯಾರ್ಥಿಗಳು ರಾಷ್ಟ್ರದ ಸಂಪನ್ಮೂಲ ವ್ಯಕ್ತಿಗಳಾಗಿ ಬೆಳೆಯಲು ಮಾನವೀಯ ಮೌಲ್ಯವುಳ್ಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಬಂಟರ ಸಂಘ ಮುಂಬಯಿ ಇದರ ಉನ್ನತ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಸಿಎ ಐ. ಆರ್‌. ಶೆಟ್ಟಿ ತಿಳಿಸಿದರು.

Advertisement

ಸೆ. 17ರಂದು ಬೆಳಗ್ಗೆ ಬಂಟರ ಸಂಘದ ಶಶಿಕಿರಣ್‌ ಶೆಟ್ಟಿ ಉನ್ನತ ಶಿಕ್ಷಣ ಸಂಕೀರ್ಣದ ರಮಾನಾಥ ಪಯ್ಯಡೆ ಆದರಾತಿಥ್ಯ ಕಾಲೇಜಿನ ಕೆಫೆಟೇರಿಯಾದಲ್ಲಿ ಸಂಘದ ಉನ್ನತ ಶಿಕ್ಷಣ ಸಮಿತಿಯ ಸಹಕಾರದೊಂದಿಗೆ, ಉನ್ನತ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಜರಗಿದ ಶಿಕ್ಷಕರ ದಿನಾಚರಣೆ ಸಮಾರಂಭವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಿಕ್ಷಕರು ತಾವು ವಿದ್ಯಾರ್ಥಿಗಳಿಗೆ ಬೋಧಿಸುವುದಕ್ಕಿಂತಲೂ ಅಧಿಕ ಜ್ಞಾನ ಪಡೆದು ಪರಿಪೂರ್ಣರಾಗಿರಬೇಕು. ಪೂರ್ಣರೂಪದ ಶಿಕ್ಷಣವಿಲ್ಲದೆ ನಮ್ಮ ಸಂವಿಧಾನದ ಆಶಯಗಳಾದ ಸ್ವಾತಂತ್ರ್ಯಸಮಾನತೆ, ಸೋದರತೆ ನೆರವೇರದು. ದೇಶಾದ್ಯಂತ ಇಂದು ಶಿಕ್ಷಣದ ಬಗ್ಗೆ ಜಾಗೃತಿ ಹೆಚ್ಚುತ್ತಿರುವುದು ದೇಶದ ಸರ್ವತೋಮುಖ ಅಭಿವೃದ್ಧಿಯ ಶುಭ ಸಂಗತಿಯಾಗಿದೆ. ಪ್ರಾಕೃತಿಕ ಸಂಪನ್ಮೂಲಗಳಿಲ್ಲದೆ ನಾವೇನೂ ಮಾಡುವಂತಿಲ್ಲ. ಇವೆಲ್ಲದರ ತಾಳ-ಮೇಳ ಪೂರ್ಣ ವಾದಾಗಲೇ ನಮ್ಮ ಇಚ್ಛೆ ಕೈಗೂಡಲು ಸಾಧ್ಯ. ವಿದ್ಯೆ ಎಂಬುವುದು ಕೆಲವೇ ಮಂದಿಯ ಸೊತ್ತಲ್ಲ. ಇದು ಪ್ರತಿಯೋರ್ವ ಪ್ರಜೆಗೂ ಅಗತ್ಯವಿದೆ. ಈ ಬೆಳಕಿನಿಂದಲೇ ಸರ್ವರ ಉದ್ಧಾರ ಸಾಧ್ಯ ಎಂದು ತಿಳಿಸಿ ಉನ್ನತ ಶಿಕ್ಷಣ ಸಂಸ್ಥೆಯ ಎಲ್ಲ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯ ಸಲ್ಲಿಸಿದರು.

ಇದನ್ನೂ ಓದಿ:ಒಂದೇ ಗಿಡದಲ್ಲಿ 100ಕ್ಕೂಹೆಚ್ಚು ಶೇಂಗಾ ಕಾಯಿ!

ಶೈಕ್ಷಣಿಕ ಸಮಿತಿಯ ಸಹ ಸಂಚಾಲಕ ರಂಜಿತ್‌ ಶೆಟ್ಟಿ ಮಾತನಾಡಿ, ಗುರು-ಶಿಷ್ಯ ಪರಂಪರೆ, ವೇದವ್ಯಾಸ-ಗಣೇಶ ಇವರ ಬಗ್ಗೆಗಿನ ಸಂಬಂಧ, ಶಿಕ್ಷಣದ ದೃಷ್ಟಿಕೋನ, ಶಿಕ್ಷಕರ ಪಾತ್ರ ಇತ್ಯಾದಿ ವಿಷಯಗಳ ಬಗ್ಗೆ ವಿಶ್ಲೇಷಿಸಿದರು. ಶೈಕ್ಷಣಿಕ ಸಮಿತಿಯ ಪುಷ್ಪರಾಜ್‌ ಶೆಟ್ಟಿ ಅವರು, ಶಿಕ್ಷಕ ವೃತ್ತಿ ಎಂಬುವುದು ಶ್ರೇಷ್ಟ ವೃತ್ತಿ ಎಂದು ತಿಳಿಸಿ ಬೋಧಕನ ಗುಣಲಕ್ಷಣಗಳನ್ನು ವಿವರಿಸಿದರು. ಸಂಘದ ರಮಾನಾಥ ಪಯ್ಯಡೆ ಆದರಾತಿಥ್ಯ ಕಾಲೇಜಿನ ಪ್ರಾಂಶುಪಾಲೆ ಸಂಯೋಗಿತಾ ಕೆ. ಮೊರಾರ್ಜಿ, ಉಮಾಕೃಷ್ಣ ಶೆಟ್ಟಿ ಮ್ಯಾನೇಜ್‌ಮೆಂಟ್‌ ಸ್ಟಡೀಸ್‌ನ ನಿರ್ದೇಶಕ ಡಾ| ಕೃಷ್ಣ ಶೆಟ್ಟಿ, ಆರತಿ ಶಶಿಕಿರಣ್‌ ಶೆಟ್ಟಿ ಜೂನಿಯರ್‌ ಕಾಲೇಜಿನ ಉಪ ಪ್ರಾಂಶುಪಾಲೆ ಶೈಲಾ ಎನ್‌. ಶೆಟ್ಟಿ, ಸುಧಾಕರ ಮಲ್ಲಪ್ಪ ಶೆಟ್ಟಿ, ಸ್ನಾತಕೋತ್ತರ ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಡಾ| ಪ್ರಶಾಂತ್‌ ಶಿಂಧೆ ಅವರು ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸಂಬಂಧದ ಬಗ್ಗೆ ವಿವರಿಸಿದರು.

ಆರಂಭದಲ್ಲಿ ಸಂಸ್ಥೆಯ ಪ್ರಾರ್ಥನೆ ನಡೆಯಿತು. ಉನ್ನತ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಸಿಎ ಐ. ಆರ್‌. ಶೆಟ್ಟಿ, ಸಂಘದ ಉಪಾಧ್ಯಕ್ಷ ಉಳೂ¤ರು ಮೋಹನ್‌ದಾಸ್‌ ಶೆಟ್ಟಿ, ಪೊವಾಯಿ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ಬಿ. ಆರ್‌. ಶೆಟ್ಟಿ ಅವರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉನ್ನತ ಶಿಕ್ಷಣ ಸಮಿತಿಯ ಉಪಕಾರ್ಯಾಧ್ಯಕ್ಷ ಕಿಶೋರ್‌ ಕುಮಾರ್‌ ಕುತ್ಯಾರ್‌ ಸ್ವಾಗತಿಸಿ, ಉನ್ನತ ಶಿಕ್ಷಣ ಸಮಿತಿಯ ಆಶ್ರಯದಲ್ಲಿ ನಡೆಯುತ್ತಿರುವ ವಿವಿಧ ಕಾಲೇಜುಗಳ ಸೌಲಭ್ಯಗಳ ಬಗ್ಗೆ ವಿವರಿಸಿದರು. ಶಿಕ್ಷಣ ಸಂಸ್ಥೆಯು ದೇವ ಮಂದಿರವೆಂಬ ಪೂಜ್ಯ ಭಾವನೆ ಶಿಕ್ಷಕರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಇರಬೇಕು ಎಂದರು.

Advertisement

ಇದೇ ಸಂದರ್ಭದಲ್ಲಿ 2021-2022ರ ಅವಧಿಗೆ ನೂತನ ಶಿಕ್ಷಕರಾಗಿ ಸೇರಿದ ಆಯೇಷಾ ಮತ್ತು ಕಿರಣ್‌ ಶೆಟ್ಟಿ ಅವರನ್ನು ಸಂಸ್ಥೆಯ ಸಿಇಒ ಪ್ರಕಾಶ್‌ ಮೋರೆ ಪರಿಚಯಿಸಿದರು. ಉನ್ನತ ಶಿಕ್ಷಣ ಸಂಸ್ಥೆಗಳ ಪ್ರಗತಿ ಬಗ್ಗೆ ವಿಶೇಷ ಕ್ಲಿಪ್ಪಿಂಗ್‌ ಪ್ರದರ್ಶಿಸಲಾಯಿತು. ವಿವಿಧ ಕಾಲೇಜುಗಳ ಶಿಕ್ಷಕರನ್ನು ಅತಿಥಿ-ಗಣ್ಯರು ಗೌರವಿಸಿದರು. ಉನ್ನತ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಸಿಎ ವಿಶ್ವನಾಥ ಶೆಟ್ಟಿ ವಂದಿಸಿದರು. ಕಾರ್ಯಕ್ರಮದಲ್ಲಿ ಭೋಜನ ವ್ಯವಸ್ಥೆಯನ್ನು ಆಯೋಜಿಸಲಾಯಿತು. ಕಾಲೇಜಿನ ಸಹ ಗ್ರಂಥಪಾಲಕಿ ಸತ್ಯ ಪಿ. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.ಸಮಾರಂಭದಲ್ಲಿ ಉನ್ನತ ಶಿಕ್ಷಣ ಸಮಿತಿಯ ಉಪ ಕಾರ್ಯಾಧ್ಯಕ್ಷರಾದ ಆದರ್ಶ್‌ ಬಿ. ಶೆಟ್ಟಿ, ಕಾರ್ಯದರ್ಶಿ ಸಿಎ ವಿಶ್ವನಾಥ ಶೆಟ್ಟಿ,ಕೋಶಾಧಿಕಾರಿ ಪ್ರದೀಪ್‌ ಜೆ. ಶೆಟ್ಟಿ, ಸಮಿತಿಯ ಸಮನ್ವಯಕ ಭಾಸ್ಕರ್‌ ಶೆಟ್ಟಿ ಕಾರ್ನಾಡ್‌, ಸಮಿತಿಯ ಸದಸ್ಯರಾದ ರಂಜಿತ್‌ ಶೆಟ್ಟಿ, ಪ್ರಸನ್ನ ಜೆ. ಶೆಟ್ಟಿ, ಪುಷ್ಪರಾಜ್‌ ಸಿ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿ, ಡಾ| ಸುನೀತಾ ಎಂ. ಶೆಟ್ಟಿ, ಮಹಿಳಾ ವಿಭಾಗದ ಕೋಶಾಧಿಕಾರಿ ಸುಜಾತಾ ಗುಣಪಾಲ್‌ ಶೆಟ್ಟಿ, ಮಾಜಿ ಕಾರ್ಯದರ್ಶಿ ಕವಿತಾ ಐ. ಆರ್‌. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಪರಿಶ್ರಮ ಅಭಿನಂದನೀಯ
ಸಂಘದ ಉನ್ನತ ಶಿಕ್ಷಣ ಸಮಿತಿಯ ಆಶ್ರಯದಲ್ಲಿ 2008ರಿಂದ ಶಿಕ್ಷಕರ ದಿನಾಚರಣೆ ನಡೆಯುತ್ತಿದೆ. ಶಿಕ್ಷಕರ ವೃತ್ತಿ ಎಂಬುವುದು ಎಲ್ಲ ವೃತ್ತಿಗಿಂತಲೂ ಮಿಗಿಲಾಗಿದ್ದು, ತಾಯಿಗೆ ಸಮಾನವಾಗಿದೆ. ಬಡತನ, ಅಜ್ಞಾನ ಮತ್ತು ಅನಾರೋಗ್ಯ ಇವು ಸ್ವತಂತ್ರ ಭಾರತದ ಸಮಸ್ಯೆಗಳ ಕೋನಗಳಾಗಿವೆ. ನಮ್ಮ ದೇಶದ ಪರಂಪರೆಗಳ ಬಗ್ಗೆ ದೇವರು, ಧರ್ಮ, ಸಂಸ್ಕೃತಿ ಹೀಗೆ ವಿವಿಧ ಸ್ವರೂಪಗಳ ಬಗ್ಗೆ ಅಭಿಮಾನಪಡುವ ನಾವು ಬಡತನ, ಅಜ್ಞಾನದ ಬಗ್ಗೆಯೂ ಚಿಂತನೆ ನಡೆಸಬೇಕು. ಇವುಗಳಿಗೆ ಪರಿಹಾರ ಕಂಡುಕೊಳ್ಳುವ ಮೂಲಕವೇ ದೇಶ ಪ್ರಗತಿ ಸಾಧಿಸಲು ಸಾಧ್ಯ. ಕಾರ್ಯಾಧ್ಯಕ್ಷ ಸಿಎ ಐ. ಆರ್‌. ಶೆಟ್ಟಿ ಅವರ ತಂಡದ ಪರಿಶ್ರಮ ಅಭಿನಂದನೀಯ.
-ಬಿ. ಆರ್‌. ಶೆಟ್ಟಿ, ಕಾರ್ಯಾಧ್ಯಕ್ಷರು, ಬಂಟರ ಸಂಘ ಪೊವಾಯಿ ಶಿಕ್ಷಣ ಸಮಿತಿ

ಸಾಧನೆ ಶ್ಲಾಘನೀಯ
ಶಿಕ್ಷಕರು ರಾಷ್ಟ್ರದ ಆಧಾರಸ್ತಂಭ. ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕರು ಹೃದಯದಂತೆ ಕಾರ್ಯನಿರ್ವಹಿಸಬಲ್ಲರು. ವಿದ್ಯಾರ್ಜನೆಯಿಲ್ಲದೆ ದೇಶ, ಸಮಾಜ ಎಂದಿಗೂ ಮುಂದುವರಿಯಲಾರದು. ಬದುಕನ್ನು ರೂಪಿಸುವ ಶಿಕ್ಷಣದ ಬಗ್ಗೆ ಮರುಚಿಂತನೆಯಾಗಬೇಕು. ಸಂಘದ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ದಾನಿಗಳು ನೀಡಿದ ಪ್ರೋತ್ಸಾಹ, ಸಹಕಾರ ಅಪಾರವಾಗಿದೆ. ಬೊರಿವಲಿಯಲ್ಲಿ ಆರಂಭಗೊಳ್ಳಲಿರುವ ಹೊಸ ಶಿಕ್ಷಣ ಯೋಜನೆಯು ಮುಂದಿನ ಎರಡೂವರೆ ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ. ಬಂಟರ ಸಂಘವು ಶಿಕ್ಷಣ ಕ್ರಾಂತಿಯನ್ನೇ ಮಾಡಿದ್ದು, ಇತರರಿಗೆ ಮಾದರಿಯಾಗಿದೆ. ಎಲ್ಲ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬೇಕು. ಉನ್ನತ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಸಿಎ ಐ. ಆರ್‌. ಶೆಟ್ಟಿ ಮತ್ತು ಪೊವಾಯಿ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಬಿ. ಆರ್‌. ಶೆಟ್ಟಿ ಅವರ ನೇತೃತ್ವದಲ್ಲಿ ಎರಡೂ ಸಂಸ್ಥೆಗಳ ಸಾಧನೆ ಶ್ಲಾಘನೀಯ.
-ಉಳ್ತೂರು ಮೋಹನ್‌ದಾಸ್‌ ಶೆಟ್ಟಿ ಉಪಾಧ್ಯಕ್ಷರು, ಬಂಟರ ಸಂಘ ಮುಂಬಯಿ

ಚಿತ್ರ-ವರದಿ: ಪ್ರೇಮ್‌ನಾಥ್‌ ಮುಂಡ್ಕೂರು

Advertisement

Udayavani is now on Telegram. Click here to join our channel and stay updated with the latest news.

Next