Advertisement

ಔದ್ಯೋಗಿಕರಣ-ಕೈಗಾರೀಕರಣಕ್ಕೆ ಹೆಚ್ಚು ಒತ್ತು

04:14 PM Apr 29, 2022 | Shwetha M |

ಮುದ್ದೇಬಿಹಾಳ: ತಾಲೂಕಿನ ಜನತೆಗೆ ಕಳೆದ 25-30 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಮೂಲ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದೇನೆ. ಇನ್ನು ಮುಂದಿನ 10 ವರ್ಷಗಳಲ್ಲಿ ನನ್ನ ಗುರಿ ಈ ತಾಲೂಕನ್ನು ಶ್ರೀಮಂತ ತಾಲೂಕನ್ನಾಗಿಸಲು ಔದ್ಯೋಗೀಕರಣ, ಕೈಗಾರೀಕರಣ ಮಾಡುವುದಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಪ್ರಯತ್ನಗಳು ಆರಂಭಗೊಂಡಿವೆ. ಜನತೆ ನನ್ನೊಂದಿಗೆ ಕೈ ಜೋಡಿಸಬೇಕು ಎಂದು ಶಾಸಕ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಎ.ಎಸ್‌.ಪಾಟೀಲ ನಡಹಳ್ಳಿ ಹೇಳಿದರು.

Advertisement

ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಕ್ರಾಸ್‌ ಬಳಿ ಬೆಂಗಳೂರಿನ ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಯ ವಿಶೇಷ ಅಭಿವೃದ್ಧಿ ಯೋಜನೆ 2021-22 ಅಡಿ ಬಿದರಕುಂದಿಯಿಂದ ಕುಂಟೋಜಿವರೆಗೆ 1.56 ಕೋಟಿ ವೆಚ್ಚದ 2 ಕಿ.ಮೀ. ರಸ್ತೆ ಸುಧಾರಣೆಗೆ ಗುರುವಾರ ಭೂಮಿಪೂಜೆ ನೆರವೇರಿಸಿ, ನಂತರ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

ಈ ತಾಲೂಕಲ್ಲಿ ನೀರಿದೆ, ಫಲವತ್ತಾದ ಭೂಮಿ ಇದೆ. ಮೊನ್ನೆ ಕೊಡಗಾನೂರ ಬಳಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಂದಿನ 3 ತಿಂಗಳಲ್ಲಿ ನೀರಾವರಿ ಯೋಜನೆಗಳಿಗೆ ವೇಗ ದೊರಕಿಸಿಕೊಡುವ ವಾಗ್ಧಾನ ಮಾಡಿದ್ದಾರೆ. ಮುಂದಿನ ವರ್ಷದಿಂದ ಪ್ರತಿಯೊಂದು ಹೊಲಕ್ಕೆ ನೀರು ಹರಿಸುವ ಯೋಜನೆ ಜಾರಿ ಬಗ್ಗೆ ಮಾತನಾಡಿದ್ದಾರೆ. ಆಲಮಟ್ಟಿ ಡ್ಯಾಂ ಗೇಟ್‌ಗಳ ಎತ್ತರ ಏರುತ್ತೋ ಬಿಡುತ್ತೋ ಗೊತ್ತಿಲ್ಲ. ಆದರೆ ಮುದ್ದೇಬಿಹಾಳ ತಾಲೂಕಿನ ರೈತರ ಹೊಲಕ್ಕೆ ನೀರು ಕೊಡುವ ತೀರ್ಮಾನವನ್ನು ನಾನು ಮಾಡಿದ್ದೇನೆ ಎಂದರು.

ರೈತರಿಗೆ ಅಗತ್ಯವಾಗಿರುವುದು ನೀರು. ಅದನ್ನು ಈಗಾಗಲೇ ಕೆರೆ ತುಂಬಿಸುವ ಮತ್ತಿತರ ಯೋಜನೆಗಳ ಮುಖಾಂತರ ತಲುಪಿಸಿದ್ದೇನೆ. ಇನ್ನು ಅಗತ್ಯವಾಗಿರುವುದು ವಿದ್ಯುತ್‌. ರೈತರಿಗೆ 10 ತಾಸು ವಿದ್ಯುತ್‌ ಕೊಡಲು, ಇದರಲ್ಲಿ ನಿರಂತರ 7 ತಾಸು ಗುಣಮಟ್ಟದ ವಿದ್ಯುತ್‌ ಕೊಡಲು ಈಗಾಗಲೇ ತಾಲೂಕಿನಲ್ಲಿ 110 ಕೆವಿಯ 5 ಸ್ಟೇಷನ್‌ಗಳು, 220 ಕೆವಿಯ 2 ಸ್ಟೇಷನ್‌ಗಳು ಪ್ರಗತಿಯಲ್ಲಿವೆ. ಹೊಸ ವಿದ್ಯುತ್‌ ಕಂಬ, ವೈರ್‌ ಹಾಕಿಸುವ ಕೆಲಸ ಮಾಡಿಸುತ್ತಿದ್ದೇನೆ. 25-30 ವರ್ಷದಿಂದ ಪೆಂಡಿಂಗ್‌ ಉಳಿದಿರುವ ರಸ್ತೆ, ಕ್ಯಾನಲ್‌ ಬಾಕಿ ಕೆಲಸ, ಮನೆ ಮನೆಗೆ ನಲ್ಲಿ ಮುಖಾಂತರ ಶುದ್ಧ ನೀರು ಕೊಡುವುದು, ಕಾಲೇಜು ನಿರ್ಮಾಣ, ಗ್ರಾಮೀಣ ಭಾಗದಲ್ಲಿ ಶಾಲೆಗಳ ಸುಧಾರಣೆ ಮುಂತಾದ ಅಭಿವೃದ್ಧಿ ಪರ ಚಟುವಟಿಕೆಗಳು ಪ್ರಗತಿಯಲ್ಲಿವೆ ಎಂದರು.

ಮುದ್ದೇಬಿಹಾಳ ಹೊರ ವಲಯದಲ್ಲಿ ಈಗಾಗಲೇ ರೆಸಿಡೆನ್ಸಿಯಲ್‌ ಡಿಗ್ರಿ ಕಾಲೇಜು ಆರಂಭಗೊಂಡಿದೆ. ನೀವೆಲ್ಲ ಜನ ನನ್ನ ಜೊತೆ ಇದ್ದುದರಿಂದಲೇ ಇಷ್ಟೊಂದು ಕೆಲಸ ಮಾಡಲು ಸಾಧ್ಯವಾಗಿದೆ. ಮುಂದಿನ 10 ವರ್ಷದಲ್ಲಿ ಈ ತಾಲೂಕನ್ನು ಶ್ರೀಮಂತ ತಾಲೂಕು ಮಾಡಲು ಸಾಧ್ಯವಿದ್ದು ಜನರ ಸಹಕಾರ ಬೇಕು. ದುಡಿಮೆ ಮಾಡಲು ಯಾವ ರೀತಿ ಸಾಧ್ಯ ಅನ್ನೋದನ್ನ ತಿಳಿದುಕೊಳ್ಳಲು ಉತ್ಸಾಹಿಗಳು ಪ್ರವಾಸ ಕೈಗೊಳ್ಳಬೇಕು. ಇದರಿಂದ ದುಡಿಮೆಯ ದಾರಿಗಳು ಹೆಚ್ಚುತ್ತವೆ ಎಂದರು.

Advertisement

ಬಿದರಕುಂದಿ ವ್ಯಾಪ್ತಿಯಲ್ಲಿ ಬರುವ ಆದರ್ಶ ವಿದ್ಯಾಲಯ ಮುಂಭಾಗದಲ್ಲಿ 2.70 ಕೋಟಿ ರೂ ವೆಚ್ಚದ ರಾಷ್ಟ್ರ ಮಟ್ಟದ ಕ್ರೀಡಾಂಗಣ ನಿರ್ಮಾಣಗೊಳ್ಳಲಿದೆ. ಈಗ ಭೂಮಿಪೂಜೆ ಮಾಡಿರುವ 2 ಕಿ.ಮೀ. ರಸ್ತೆ ಮುಂದೆ ಕುಂಟೋಜಿ-ಕವಡಿಮಟ್ಟಿ ಬೈಪಾಸ್‌ ರಸ್ತೆಯಾಗಲಿದೆ. ಬಿದರಕುಂದಿ, ತಾರನಾಳ, ಬಳವಾಟ, ಮಡಿಕೇಶ್ವರ, ನಡಹಳ್ಳಿ, ಲಿಂಗದಳ್ಳಿ ಸಂಪರ್ಕಿಸುವ ಬೈಪಾಸ್‌ ರಸ್ತೆ ನಿರ್ಮಾಣ ಆಗುತ್ತವೆ ಎಂದರು.

ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆ ಅಧಿಕಾರಿ ವಿನಯ ಹಳ್ಳೂರ ಮಾತನಾಡಿ, ಬಿದರಕುಂದಿಯಿಂದ ಕುಂಟೋಜಿ ಗ್ರಾಮ ಸಂಪರ್ಕಿಸುವ 2 ಕಿ.ಮೀ. ಡಾಂಬರೀಕಣ ರಸ್ತೆಯುದ್ದಕ್ಕೂ ರೈತರಿಗೆ ಹೊಲಕ್ಕೆ ಹೋಗಿ ಬರಲು ಅನುಕೂಲವಾಗುವಂತೆ ಒಟ್ಟು 19 ಅಡ್ಡ ಚರಂಡಿ ನಿರ್ಮಾಣ ಮಾಡಲಾಗುತ್ತದೆ ಎಂದು ತಿಳಿಸಿದರು.

ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸೋಮಗೌಡ ಬಿರಾದಾರ ಕವಡಿಮಟ್ಟಿ, ಬಿದರಕುಂದಿ ಗ್ರಾಪಂ ಅಧ್ಯಕ್ಷೆ ನೀಲಮ್ಮ ಕೋಳೂರ, ಕುಂಟೋಜಿ ಗ್ರಾಪಂ ಅಧ್ಯಕ್ಷ ಶಿವಬಸು ಸಜ್ಜನ, ಗಣ್ಯರಾದ ಸಿ.ಬಿ. ಪಾಟೀಲ, ಸಂಗಮೇಶ ಹತ್ತಿ, ಗುಂಡಪ್ಪ ಕೊಟಗಿ, ಸಿದ್ದು ಚಲವಾದಿ, ಲಕ್ಷ್ಮಣ ವಡ್ಡರ, ಸಂತೋಷ ಬಾದರಬಂಡಿ, ರವೀಂದ್ರ ಬಿರಾದಾರ, ಈರಣ್ಣ ಭಜಂತ್ರಿ, ಬಸವರಾಜ ಕೂಂಡಗೂಳಿ, ಮಡಿವಾಳಯ್ಯ ಹಿರೇಮಠ, ಸಂಜು ಹೂಗಾರ, ರಜಾಕ್‌ ದೊಡಮನಿ, ಮಲ್ಲಣ್ಣ ದೊಡಮನಿ, ಕೆ.ವೈ. ಮುಲ್ಲಾ, ಧನಶೆಟ್ಟಿ ಕೋರಿ, ರುದ್ರಪ್ಪ ಬಿಜೂjರ, ಶ್ರೀಕಾಂತ ಹಿರೇಮಠ ಸೇರಿದಂತೆ ಬಿದರಕುಂದಿ, ಢವಳಗಿ, ಕುಂಟೋಜಿ ಭಾಗದ ಹಲವರು ಇದ್ದರು.

ಮುದ್ದೇಬಿಹಾಳ ಎಪಿಎಂಸಿಯ 23 ಎಕರೆ ಜಾಗೆಯಲ್ಲಿ ಒಟ್ಟು 300 ಮಳಿಗೆಗಳು ನಿರ್ಮಾಣಗೊಳ್ಳಲಿದ್ದು ಮುಂದಿನ 5 ವರ್ಷಗಳಲ್ಲಿ ಪ್ರತಿಯೊಬ್ಬರಿಗೆ ಉದ್ಯೋಗ ಸಿಗಬೇಕು ಅನ್ನೋದು ನನ್ನ ಸಂಕಲ್ಪ. ಜನತೆಯ ಪರ ಅಭಿವೃದ್ಧಿ ಕಾರ್ಯಗಳಿಗೆ ನನ್ನ ಜನತೆ, ಕಾರ್ಯಕರ್ತರು ಬೆನ್ನೆಲುಬಾಗಿ ನಿಂತಿದ್ದಾರೆ. ಮುದ್ದೇಬಿಹಾಳ ಮತ್ತು ತಾಳಿಕೋಟೆ ತಾಲೂಕುಗಳ ಸಮಗ್ರ ಅಭಿವೃದ್ಧಿಗೆ ಬದ್ಧನಾಗಿದ್ದೇನೆ. -ಎ.ಎಸ್‌. ಪಾಟೀಲ ನಡಹಳ್ಳಿ, ಶಾಸಕರು, ಮುದ್ದೇಬಿಹಾಳ

Advertisement

Udayavani is now on Telegram. Click here to join our channel and stay updated with the latest news.

Next