Advertisement

ಸರ್ಕಾರದಿಂದ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು

01:34 PM Mar 14, 2022 | Team Udayavani |

ಹೊನ್ನಾಳಿ: ಶಾಲಾ ಶತಮಾನೋತ್ಸವ ಸ್ಮರಣಾರ್ಥವಾಗಿ ರಕ್ತದಾನ, ನೇತ್ರದಾನ ಹಾಗೂ ಅನ್ನ ದಾಸೋಹದಂತಹ ಪುಣ್ಯದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.

Advertisement

ನ್ಯಾಮತಿ ತಾಲೂಕಿನ ದೊಡ್ಡೆತ್ತಿನಹಳ್ಳಿ ಗ್ರಾಮದಲ್ಲಿ ಭಾನುವಾರ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 111 ವರ್ಷಗಳ ಶಾಲಾ ಶತಮಾನೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬ ಮನುಷ್ಯನಿಗೆ ಶಿಕ್ಷಣ ಮುಖ್ಯ. ಶಿಕ್ಷಣ ಪಡೆಯದಿದ್ದಲ್ಲಿ ಬದುಕಿನಲ್ಲಿ ಅಂಧಕಾರ ಕವಿಯುವುದು ಇದನ್ನರಿತು ಎಲ್ಲರು ಶಿಕ್ಷಣವಂತರಾಗಬೇಕು. ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿ ಸಾವಿರಾರು ಕೋಟಿ ಅನುದಾನ ಖರ್ಚು ಮಾಡುತ್ತಿದೆ. ಅನುದಾನ ಸಾರ್ಥಕತೆ ಪಡೆಯಬೇಕು ಎಂದು ಹೇಳಿದರು.

ಒಂದು ಕಾಲದಲ್ಲಿ ಶಿಕ್ಷಣ ಪಡೆಯುವುದು ಕಷ್ಟದ ಕೆಲಸವಾಗಿತ್ತು ಹಾಗೂ ಶಿಕ್ಷಣ ಎನ್ನುವುದು ಉಳ್ಳವರ ಸ್ವತ್ತಾಗಿತ್ತು. ಪ್ರಸ್ತುತ ದಿನಗಳಲ್ಲಿ ಕಡ್ಡಾಯ ಶಿಕ್ಷಣ ಜಾರಿಗೆ ಬಂದಿದೆ. ಪೋಷಕರು ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಎಚ್ಚೆತ್ತುಕೊಂಡು ತಪ್ಪದೇ ತಮ್ಮ ಮಕ್ಕಳನ್ನು ಶಾಲಾ ಕಾಲೇಜುಗಳಿಗೆ ಕಳಿಸುತ್ತಿದ್ದಾರೆ. ಇದು ಆರೋಗ್ಯಕರ ಬೆಳವಣಿಗೆ ಎಂದು ಹೇಳಿದರು.

ತಾಲೂಕಿನ ಎಲ್ಲ ಸರ್ಕಾರಿ ಶಾಲೆಗಳ ದುರಸ್ತಿ ಹಾಗೂ ಹೊಸ ಕೊಠಡಿಗಳ ನಿರ್ಮಾಣಕ್ಕೆ ನಾನು ಸತತ ಪ್ರಯತ್ನ ಮಾಡಿ ಅವಳಿ ತಾಲೂಕಿನಲ್ಲಿ 127 ಹೊಸ ಕೊಠಡಿಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿಸಿದ್ದೇನೆ. ದೊಡ್ಡೆತ್ಯತಿನಹಳ್ಳಿ ಗ್ರಾಮಕ್ಕೆ ಈಗಾಗಲೇ 1 ಕೋಟಿ ರೂ.ಅನುದಾನದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಲಾಗಿದೆ. ಹೆಚ್ಚುವರಿಯಾಗಿ ಸಿಸಿ ರಸ್ತೆಗೆ 50 ಲಕ್ಷ ರೂ. ಮಂಜೂರು ಮಾಡಿಸಲಾಗಿದೆ ಎಂದು ಹೇಳಿದರು.

Advertisement

ಮಾಜಿ ಶಾಸಕ ಡಿ.ಜಿ. ಶಾಂತನಗೌಡ, ಜಿಪಂ ಮಾಜಿ ಸದಸ್ಯ ಡಿ.ಜಿ. ವಿಶ್ವನಾಥ್‌, ಡಿಡಿಪಿಐ ತಿಪ್ಪೇಶಪ್ಪ ಮಾತನಾಡಿದರು. ಸ್ಮಾರ್ಟ್‌ ಕ್ಲಾಸ್‌ ಕೊಠಡಿ ಶಾಸಕ ಎಂ.ಪಿ. ರೇಣುಕಾಚಾರ್ಯ ಉದ್ಘಾಟಿಸಿದರು. ಶಾಲಾ ಶುದ್ಧ ನೀರಿನ ಘಟಕವನ್ನು ಮಾಜಿ ಶಾಸಕ ಡಿ.ಜಿ.ಶಾಂತನಗೌಡ ಉದ್ಘಾಟಿಸಿದರು. ಶಾಶ್ವತ ಕನ್ನಡ ಧ್ವಜ ಸ್ತಂಭವನ್ನು ಕಸಾಪ ತಾಲೂಕು ಅಧ್ಯಕ್ಷ ಡಿ.ಎಂ. ಹಾಲಾರಾಧ್ಯ ಉದ್ಘಾಟಿಸಿದರು.

ಗ್ರಾಪಂ ಅಧ್ಯಕ್ಷೆ ತಿಮ್ಮಮ್ಮ, ಉಪಾಧ್ಯಕ್ಷ ಜೆ.ಪಿ.ಚಂದನ್‌, ಸದಸ್ಯರಾದ ಮಂಜೇಸ್‌, ಚಂದ್ರಮ್ಮ, ಸಾಧು ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಎಸ್‌.ಬಿ.ಶಿವಪ್ಪ, ಬಿಇಒ ಜಿಇ ರಾಜೀವ್‌ ಇತರ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರಭಾರ ಮುಖ್ಯ ಶಿಕ್ಷಕ ಕಿರಣ್‌ಕುಮಾರ್‌ ಪ್ರಾಸ್ತಾವಿಕ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next