Advertisement

ಮೋರ್ಚಾ, ಜಿಲ್ಲಾ ಘಟಕಗಳಿಂದ ವರದಿ ಕೇಳಿದ ಬಿಜೆಪಿ

06:45 AM Jul 31, 2017 | |

ಬೆಂಗಳೂರು: ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಬಿಜೆಪಿ
ರಾಜ್ಯಾದ್ಯಂತ ತನ್ನ ಸಂಘಟನಾ ಚಟುವಟಿಕೆಗಳನ್ನು ಚುರುಕುಗೊಳಿಸಿದ್ದು, ತನ್ನ ಎಲ್ಲಾ ಮೋರ್ಚಾ ಮತ್ತು ಜಿಲ್ಲಾ
ಘಟಕಗಳಿಗೆ ಸಂಘಟನೆ ದೃಷ್ಟಿಯಿಂದ ಕೈಗೊಂಡಿರುವ ಚಟುವಟಿಕೆಗಳ ಬಗ್ಗೆ ವರದಿ ಕೇಳಿದೆ.

Advertisement

ಆಗಸ್ಟ್‌ 12ರಿಂದ ಮೂರು ದಿನಗಳ ಕಾಲ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ರಾಜ್ಯಕ್ಕೆ ಭೇಟಿ ನೀಡಲಿದ್ದು, ಮೂರೂ ದಿನ ಬೆಂಗಳೂರಿನಲ್ಲೇ ಇರಲಿದ್ದಾರೆ. ಈ ಸಂದರ್ಭದಲ್ಲಿ ಪಕ್ಷದ ಚಟುವಟಿಕೆಗಳ ಕುರಿತು ಅವರಿಗೆ ವರದಿ ಸಲ್ಲಿಸಬೇಕಾಗಿದೆ. ವರದಿ ಸಲ್ಲಿಕೆಗೂ ಮುನ್ನಾ ಅದನ್ನು ಆ.6 ಮತ್ತು 7ರಂದು ನಡೆಯಲಿರುವ ಬಿಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲಿ ಮಂಡಿಸಿ ಅನುಮೋದನೆ ಪಡೆಯಬೇಕು. ಆದ್ದರಿಂದ ಆ.6ರೊಳಗೆ ಎಲ್ಲರೂ ತಮ್ಮ ವರದಿಯನ್ನು ರಾಜ್ಯ ಘಟಕಕ್ಕೆ ಸಲ್ಲಿಸಬೇಕು ಎಂದು ನಿರ್ದೇಶನ ನೀಡಲಾಗಿದೆ.

ಮುಂಬರುವ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬೂತ್‌ ಮಟ್ಟದಲ್ಲಿ ಪಕ್ಷ ಬಲವರ್ಧನೆಗಾಗಿ ಈಗಾಗಲೇ ವಿಸ್ತಾರಕ ಯೋಜನೆ ಹಮ್ಮಿಕೊಂಡಿದ್ದು, ರಾಜ್ಯಾಧ್ಯಕ್ಷರು ಸೇರಿ ಎಲ್ಲಾ ನಾಯಕರು, ಮುಖಂಡರು,
ವಿಧಾನಸಭೆ ಚುನಾವಣೆ ಟಿಕೆಟ್‌ ಆಕಾಂಕ್ಷಿಗಳು ತಮ್ಮ ಬೆಂಬಲಿಗರೊಂದಿಗೆ ವಿಸ್ತಾರಕರಾಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ, ವಿವಿಧ ಮೋರ್ಚಾಗಳು, ಜಿಲ್ಲಾ ಘಟಕಗಳು ತನ್ನದೇ ಆದ ಕಾರ್ಯಕ್ರಮಗಳನ್ನು ರೂಪಿಸುತ್ತಿವೆ. ಈ ಎಲ್ಲಾ
ವಿಚಾರಗಳ ಬಗ್ಗೆ ವರದಿ ಕೇಳಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್‌ ಇದೀಗ ನಾಡ ಧ್ವಜ ಮತ್ತು ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ ಮುಂದಿಟ್ಟುಕೊಂಡು ಜನರನ್ನು ಭಾವನಾತ್ಮಕವಾಗಿ ಸೆಳೆಯಲಮಾಡುತ್ತಿರುವ ಪ್ರಯತ್ನಕ್ಕೆ ಸೂಕ್ತ ತಿರುಗೇಟು ನೀಡಲು
ಸ್ಥಳೀಯವಾಗಿ ಕಾರ್ಯಕ್ರಮಗಳನ್ನು ರೂಪಿಸುವ ಜವಾಬ್ದಾರಿಯನ್ನು ಬೂತ್‌ ಮಟ್ಟದ ಕಮಿಟಿಗಳಿಗೆ ಈಗಾಗಲೇ ವಹಿಸಲಾಗಿದೆ. ಕಾರ್ಯಕಾರಿಣಿ ನಂತರ ಪ್ರತಿ ಗ್ರಾಮದಲ್ಲಿ ಈ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸುವ ಬಗ್ಗೆಯೂ
ಚರ್ಚಿಸಲಾಗುತ್ತಿದೆ.

ಬೂತ್‌ ಕಮಿಟಿಗಳಿಗೆ ನೇಮಕ ಮನೆ ಮನೆಗಳಿಗೆ ಹೋಗಿ ಜನರನ್ನು ಬಿಜೆಪಿಯತ್ತ ಕರೆತರಲು ಬೂತ್‌ ಮಟ್ಟದ ಕಮಿಟಿಗಳಿಗೆ ಪಕ್ಷದಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಈ ಹಿನ್ನೆಲೆಯಲ್ಲಿ 224 ವಿಧಾನಸಭಾ ಕ್ಷೇತ್ರಗಳ ಪೈಕಿ 200 ಕ್ಷೇತ್ರಗಳಲ್ಲಿ ಈಗಾಗಲೇ ಬೂತ್‌ ಮಟ್ಟದ ಕಮಿಟಿಗಳು ರಚನೆಯಾಗಿದ್ದು, ಉಳಿದ ಕಡೆ ಇನ್ನು ಒಂದು ವಾರದಲ್ಲಿ ಕಮಿಟಿ ರಚನೆ ಪೂರ್ಣಗೊಳ್ಳಲಿದೆ. ಕಾರ್ಯಕಾರಿಣಿಯಲ್ಲಿ ಬೂತ್‌ ಮಟ್ಟದ ಕಮಿಟಿಗಳು ಕೈಗೊಳ್ಳಬೇಕಾದ ಚಟುವಟಿಕೆಗಳನ್ನು ಅಂತಿಮಗೊಳಿಸಿ ಎಲ್ಲಾ ಬೂತ್‌ಗಳಿಗೂ ಕಳುಹಿಸಿಕೊಡಲಾಗುವುದು. ಆಗಸ್ಟ್‌ ಅಂತ್ಯದಿಂದ ಈ ಕಮಿಟಿಗಳು ಅಖಾಡಕ್ಕೆ ಇಳಿಯಲಿವೆ ಎಂದು ಮೂಲಗಳು ಹೇಳಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next