ಧಾರವಾಡ: ಮಹಿಳೆಯೊಬ್ಬಳು ಕೆರೆಗೆ ಹಾರಿ ಪ್ರಾಣ ಕಳೆದುಕೊಂಡ ಹಿನ್ನೆಲೆಯಲ್ಲಿ ಇಡೀ ಕೆರೆಯ ನೀರನ್ನೇ ಗ್ರಾಮ ಪಂಚಾಯಿತಿ ಹಾಗೂ ಊರಿನ ಹಿರಿಯರು ಸೇರಿಕೊಂಡು ಖಾಲಿ ಮಾಡುತ್ತಿರುವ ಘಟನೆ ನವಲಗುಂದ ತಾಲೂಕಿನ ಮೊರಬ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮಹಿಳೆಯೊಬ್ಬಳು ಭಯಾನಕ ಕಾಯಿಲೆಗೆ ತುತ್ತಾಗಿದ್ದು, ಈ ಕೆರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕೆರೆಯ ನೀರನ್ನು ಸಂಪೂರ್ಣ ಖಾಲಿ ಮಾಡುವಂತೆ ಸ್ಥಳೀಯರು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ 20 ಪಂಪ್‌ಸೆಟ್‌ಗಳನ್ನು ಬಳಸಿಕೊಂಡು ನೀರು ಹೊರ ಹಾಕಲಾಗುತ್ತಿದೆ. ಈ ನೀರೆಲ್ಲವೂ ತುಪರಿ ಹಳ್ಳಕ್ಕೆ ಬೀಳುತ್ತಿದ್ದು ಗ್ರಾಮದ ಗಟಾರು, ಗುಂಡಿಗಳು ಎಲ್ಲೆಂದರಲ್ಲಿ ನೀರು ಹರಿದು ಹೋಗುತ್ತಿದೆ.
36 ಎಕರೆ ವಿಸ್ತೀರ್ಣದ ಈ ಕೆರೆಯಲ್ಲಿ ಈ ರೀತಿಯ ಘಟನೆ ಆಗುತ್ತಿರುವುದು ಇದು ಎರಡನೇ ಬಾರಿ. ಈ ಹಿಂದೆ ಒಬ್ಬ ವ್ಯಕ್ತಿ ತೀರಿಕೊಂಡಿದ್ದಾಗ ಕೆರೆಯ ನೀರನ್ನು ತೆಗೆದಿರಲಿಲ್ಲ. ಆದರೆ ಈ ಬಾರಿ ಮೃತಪಟ್ಟ ಮಹಿಳೆಯ ಶವ ಅಲ್ಲಲ್ಲಿ ತುಂಡಾಗಿ ಮಾಂಸಖಂಡಗಳು ನೀರಿನಲ್ಲಿ ತೇಲುತ್ತಿದ್ದವು ಎನ್ನಲಾಗಿದೆ. ಇದನ್ನು ನೋಡಿದ ಗ್ರಾಮಸ್ತರು ಈ ನೀರನ್ನು ಕುಡಿಯುವುದು ಹೇಗೆ ? ಎಂದು ಪ್ರಶ್ನಿಸಿ ಗ್ರಾ.ಪಂ.ಗೆ ನೀರು ಸಂಪೂರ್ಣ ಖಾಲಿ ಮಾಡುವಂತೆ ಆಗ್ರಹಿಸಿ ನೀರು ಹೊರ ಹಾಕುತ್ತಿದ್ದಾರೆ.
3 ಲಕ್ಷ ರೂ. ಖರ್ಚು : ಕೆರೆಯನ್ನು ಸಂಪೂರ್ಣ ಖಾಲಿ ಮಾಡಿ ಮರಳಿ ಹೊಸ ನೀರನ್ನು ತುಂಬಿಸಲು ಕನಿಷ್ಠ 3 ಲಕ್ಷ ರೂ. ವೆಚ್ಚವಾಗುತ್ತದೆ ಎನ್ನುತ್ತಿದ್ದಾರೆ ಮೊರಬ ಗ್ರಾಪಂ ಸದಸ್ಯರು. ಅದೂ ಅಲ್ಲದೇ ಸದ್ಯಕ್ಕೆ ಮಲಪ್ರಭಾ ಕಾಲುವೆಯ ನೀರು ಡಿ. 6ಕ್ಕೆ ಸ್ಥಗಿತಗೊಳ್ಳಲಿದ್ದು, ನಂತರ ಕೆರೆಗೆ ನೀರು ಎಲ್ಲಿಂದ ತರುವುದು? ಎನ್ನುವ ಕುರಿತು ಗ್ರಾಪಂನವರು ತಲೆಕೆಡಿಸಿಕೊಳ್ಳುತ್ತಿದ್ದು, ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್ ಮೊರೆ ಹೋಗಲು ಸಜ್ಜಾಗಿದ್ದಾರೆ. ಇನ್ನು ನಾಲ್ಕು ದಿನಗಳ ವರೆಗೂ ನೀರು ಹೊರ ಹಾಕಲಾಗುತ್ತದೆ ಎಂದು ಗ್ರಾಪಂ ಸದಸ್ಯರೊಬ್ಬರು ‘ಉದಯವಾಣಿ’ಗೆ ತಿಳಿಸಿದ್ದಾರೆ.
ಅದು ಕುಡಿಯುವ ನೀರಾಗಿದ್ದರಿಂದ ಗ್ರಾಮಸ್ಥರಿಗೆ ನಾವು ಒತ್ತಾಯ ಮಾಡುವಂತಿಲ್ಲ. ಕೆರೆಯ ನೀರು ಖಾಲಿಯಾದ ಮೇಲೆ ಅದನ್ನು ಭರ್ತಿ ಮಾಡುವ ಕುರಿತು ಸ್ಥಳೀಯ ಶಾಸಕರು ಹಾಗೂ ಗ್ರಾಪಂ ಜೊತೆ ಮಾತನಾಡಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಮೊರಬ ಗ್ರಾಮಕ್ಕೆ ಯಾವುದೇ ರೀತಿಯ ಕುಡಿಯುವ ನೀರಿನ ತೊಂದರೆಯಾಗದಂತೆ ಕ್ರಮ ವಹಿಸುತ್ತೇವೆ.
.ದೀಪಾ ಚೋಳನ್, ಜಿಲ್ಲಾಧಿಕಾರಿ
ಕೆರೆಯಲ್ಲಿ ನೀರು ಇಟ್ಟುಕೊಂಡು ಬಳಕೆ ಮಾಡದಿದ್ದರೆ ಕಷ್ಟವಾಗುತ್ತದೆ. ಹೀಗಾಗಿ ಗ್ರಾಪಂ ಇಕ್ಕಟ್ಟಿನಲ್ಲಿದ್ದೆ. ಇದಕ್ಕೆ ಅಧಿಕಾರಿಗಳು ಪರಿಹಾರ ತೋರಿಸಬೇಕು.
. ಲಕ್ಷ್ಮಣ ಪಾಟೀಲ, ಗ್ರಾಪಂ ಸದಸ್ಯ, ಮೊರಬ