ಚಂಡೀಗಢ: ಪಂಜಾಬ್ ಗಾಯಕ ಸಿಧು ಮೂಸೆವಾಲ ಹತ್ಯೆ ಪ್ರಕರಣದ ಆರೋಪಿಯಾಗಿರುವ ಲಾರೆನ್ಸ್ ಬಿಷ್ಣೋಯ್‌ಗೆ ಪಾಕಿಸ್ತಾನದೊಂದಿಗೆ ಸಂಪರ್ಕವಿರುವ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಹತ್ಯೆಯ ಬಗ್ಗೆ ತನಿಖೆ ನಡೆಸಿದಾಗ, ಲಾರೆನ್ಸ್‌ಗೆ ಉಗ್ರ ಹರ್ವಿಂದರ್ ಸಿಂಗ್ ಜತೆ ಸ್ನೇಹವಿರುವುದು ತಿಳಿದುಬಂದಿದೆ. ಮಹಾರಾಷ್ಟ್ರದ ಮೂಲದವನಾಗಿರುವ ಹರ್ವಿಂದರ್ 2016-17ರಲ್ಲಿ ಪಂಜಾಬ್‌ನ ಜೈಲಿನಲ್ಲಿದ್ದಾಗ ಕೈದಿ ಲಾರೆನ್ಸ್ ಜತೆ ಸ್ನೇಹ ಬೆಳೆಸಿದ್ದ.
ಸದ್ಯ ಹರ್ವಿಂದರ್ ತಲೆಮರೆಸಿಕೊಂಡಿದ್ದು, ಪಾಕ್‌ನಲ್ಲಿ ಅಡಗಿರುವ ಶಂಕೆಯಿದೆ. ಹಾಗೆಯೇ ಆತ ಕೆಲ ಸಮಯದ ಹಿಂದೆ ಶಿವಸೇನೆಯ ನಾಯಕರೊಬ್ಬರನ್ನು ಕೊಲೆ ಮಾಡುವುದಕ್ಕೆಂದು ಲಾರೆನ್ಸ್ ಗ್ಯಾಂಗ್‌ನಿಂದ ಓರ್ವ ಹುಡುಗನನ್ನು ನೇಮಿಸಿಕೊಂಡಿದ್ದ ಎಂದೂ ತಿಳಿಸಲಾಗಿದೆ.
ಮಹಾರಾಷ್ಟ್ರದ ನಂದೇದ್‌ನಲ್ಲಿ ಏ.5ರಂದು ನಡೆದ ಬಿಲ್ಡರ್ ಸಂಜಯ್ ಬಿಯಾನಿ ಹತ್ಯೆಯಲ್ಲೂ ಬಿಷ್ಣೋಯ್ ಗ್ಯಾಂಗ್‌ನ ಹುಡುಗರ ಕೈವಾಡವಿದೆ.
ಮಹಾರಾಷ್ಟ್ರ, ಮೊಹಾಲಿ ಮತ್ತು ದೆಹಲಿಯ ಪೊಲೀಸರು ಒಟ್ಟಾಗಿ ನಡೆಸಿದ ತನಿಖೆಯಲ್ಲಿ ಈ ಅಂಶಗಳು ಬೆಳಕಿಗೆ ಬಂದಿವೆ.