ಲಿಸ್ಮೋರ್ (ಆಸ್ಟ್ರೇಲಿಯಾ): ಆಧುನಿಕ ಖಗೋಳ ವಿಜ್ಞಾನವು, ಭೂಮಿಯ ಸುತ್ತಲೂ ಸುತ್ತುವ ಚಂದ್ರನ ಬಗ್ಗೆ ಎರಡು ಕುತೂಹಲಕರ ವಿಚಾರವನ್ನು ಪತ್ತೆ ಹಚ್ಚಿವೆ. ಮೊದಲನೆಯದಾಗಿ, ಚಂದ್ರನಲ್ಲಿರುವ ಆಮ್ಲಜನಕ, ಅಲ್ಲಿರುವ ಬಂಡೆಗಳು ಹಾಗೂ ಮಣ್ಣಿನ ಕಣಗಳಲ್ಲಿ ಘನರೂಪದಲ್ಲಿ ಅಡಕವಾಗಿದೆ ಎಂಬುದು ಹಾಗೂ ಕೋಟ್ಯಂತರ ವರ್ಷಗಳ ಹಿಂದೆ ಚಂದ್ರನಿಂದ ಸಿಡಿದಿದ್ದ ಚೂರೊಂದು ಈಗಲೂ ಸೂರ್ಯನ ಸುತ್ತಲೂ ಸುತ್ತುತ್ತಿದೆ. ಈ ಎರಡೂ ವಿಚಾರಗಳನ್ನು
ಮುಂದಿಟ್ಟುಕೊಂಡು ವಿಜ್ಞಾನಿಗಳು ಮತ್ತಷ್ಟು ಸಂಶೋಧನೆಗಳತ್ತ ಮುಂದಾಗಿದ್ದಾರೆ.
ಚಂದ್ರನಲ್ಲಿರುವ ಆಮ್ಲಜನಕವು ಬಂಡೆಗಳಲ್ಲಿ, ಮಣ್ಣಿನಲ್ಲಿ ಅಡಗಿರುವುದರಿಂದ ಅದನ್ನು ಅನಿಲ ರೂಪವಾಗಿ ಪರಿವರ್ತಿಸಲು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಲು ಅಮೆರಿಕ ಹಾಗೂ ಆಸ್ಟ್ರೇಲಿಯಾದ ಖಗೋಳ ವಿಜ್ಞಾನಿಗಳು ನಿರ್ಧರಿಸಿದ್ದಾರೆ. ಇದು ಸಾಧ್ಯವಾದರೆ, ಆ ಗ್ರಹದಲ್ಲಿ ಸುಮಾರು 800 ಕೋಟಿ ಜನರು, 1 ಲಕ್ಷ ವರ್ಷಗಳವರೆಗೆ ಜೀವಿಸುವಷ್ಟು ಆಮ್ಲಜನಕವು ಉಸಿರಾಟಕ್ಕೆ ಲಭ್ಯವಾಗಲಿದೆ ಎಂಬುದು ವಿಜ್ಞಾನಿಗಳ ಅಂದಾಜು.
ಈ ಬೃಹತ್ ಯೋಜನೆಗಾಗಿ ಅಮೆರಿಕ ಬಾಹ್ಯಾಕಾಶ ಸಂಸ್ಥೆ (ನಾಸಾ) ಹಾಗೂ ಆಸ್ಟ್ರೇಲಿಯಾ ಬಾಹ್ಯಾಕಾಶ ಸಂಸ್ಥೆ (ಎಎಸ್‌ಎ) ಪರಸ್ಪರ ಒಪ್ಪಂದ ಮಾಡಿಕೊಂಡಿದ್ದಾರೆ. ಇದು ಸಾಧ್ಯವಾದರೆ, ಕೆಲವು ದಶಕಗಳಲ್ಲಿ ಚಂದ್ರನು ವಾಸಯೋಗ್ಯವಾಗಬಹುದು.
ಸುತ್ತುತ್ತಿದೆ ಚಂದ್ರನ ಚೂರು!: ಕೋಟ್ಯಂತರ ವರ್ಷಗಳ ಹಿಂದೆ, ಮಂಗಳ ಗ್ರಹದಷ್ಟು ಬೃಹದಾಕಾರದ ಹೆಬ್ಬಂಡೆಯೊಂದು ಭೂಮಿಗೆ ಅಪ್ಪಳಿಸಿದ್ದರಿಂದಾಗಿ ಭೂಮಿಯ ಚೂರೊಂದು ಸಿಡಿದು ಚಂದ್ರನಾಗಿ ರೂಪುಗೊಂಡಿದೆ ಎಂಬ ಸಿದ್ಧಾಂತವನ್ನು ದಶಕಗಳ ಹಿಂದೆಯೇ ವಿಜ್ಞಾನಿಗಳು ಒಪ್ಪಿಕೊಂಡಿದ್ದಾರೆ. ಆಗ ಸಂಭವಿಸಿದ ಘರ್ಷಣೆಯ ವೇಳೆ ಚಂದ್ರನಿಂದಲೇ ಸಿಡಿದ ಸಣ್ಣ ಚೂರೊಂದು 150 ಅಡಿ ಉದ್ದ ಹಾಗೂ 190 ಅಡಿ ಅಗಲವಿರುವ ಬಂಡೆಯು, ಭೂಮಿಯಿಂದ 9 ಮಿಲಿಯನ್ ಮೈಲುಗಳ ದೂರದಲ್ಲಿ ಸೂರ್ಯನ ಸುತ್ತಲೂ ಈಗಲೂ ಸುತ್ತುತ್ತಿದೆ ಎಂಬುದನ್ನು ಆ್ಯರಿಝೋನಾ ವಿಶ್ವವಿದ್ಯಾಲಯದ ಖಗೋಳ ವಿಜ್ಞಾನ ವಿಭಾಗದ ಸಂಶೋಧಕರ ತಂಡವೊಂದು ಹೇಳಿದೆ.
ಅವರ ಸಂಶೋಧನಾ ಪ್ರಬಂಧ, “ನೇಚರ್ ಕಮ್ಯೂನಿಕೇಷನ್ಸ್’ ವೈಜ್ಞಾನಿಕ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ. 2016ರಲ್ಲೇ ಇದು ಪತ್ತೆಯಾಗಿತ್ತಾದರೂ, ಚಂದ್ರನಿಂದಲೇ ಸಿಡಿದಿರುವ ಚೂರು ಎಂಬುದು ತಮ್ಮ ಸಂಶೋಧನೆಯಿಂದ ತಿಳಿದುಬಂದಿದೆ ಎಂದು ಖಗೋಳ ವಿಜ್ಞಾನಿಗಳು ತಿಳಿಸಿದ್ದಾರೆ.