ಬೆಂಗಳೂರು: ಬಾಹ್ಯಾಕಾಶ ಕ್ಷೇತ್ರದಲ್ಲಿ ಇತಿಹಾಸ ನಿರ್ಮಿಸಲು ಇಸ್ರೋ ಸಜ್ಜಾಗಿದೆ. ಒಂದು ತಿಂಗಳ ಹಿಂದೆ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರನ ಅಂಗಳಕ್ಕೆ ಹಾರಿದ್ದ ಚಂದ್ರಯಾನ 2 ನೌಕೆ ಇದೀಗ ಚಂದರನ ಕಕ್ಷೆಯಲ್ಲಿ ಸುತ್ತುತ್ತಿದ್ದು ಚೌತಿಯ ದಿನವೇ ತನ್ನೊಳಗಿದ್ದ ವಿಕ್ರಂ ಲ್ಯಾಂಡರ್ ಹಾಗೂ ಆರು ಚಕ್ರಗಳ ಪ್ರಗ್ಯಾನ್ ರೋವರ್ ಗಳನ್ನು ಯಶಸ್ವಿಯಾಗಿ ಪ್ರತ್ಯೇಕಿಸಿದೆ.
ಇದೀಗ ವಿಕ್ರಂ ಮತ್ತು ಪ್ರಗ್ಯಾನ್ ಚಂದ್ರನತ್ತ ಮುಖಮಾಡಿ ಸಾಗುತ್ತಿವೆ. ಎಲ್ಲವೂ ನಿರ್ವಿಘ್ನವಾಗಿ ನೆರವೇರಿದರೆ ಇನ್ನು ಆರು ದಿನಗಳಲ್ಲಿ ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಂ ನೌಕೆ ಇಳಿಯುವ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಇತಿಹಾಸ ನಿರ್ಮಾಣವಾಗಲಿದೆ.
ಸೋವಮಾರ ಮಧ್ಯಾಹ್ನ 1.15ರ ಸುಮಾರಿಗೆ ಈ ಪ್ರತ್ಯೇಕಿಸುವಿಕೆ ಕಾರ್ಯ ಯಶಸ್ವಿಯಾಗಿ ನೆರವೇರಿದೆ. ಇದೀಗ ವಿಕ್ರಂ ನೌಕೆ ಚಂದ್ರನ ಕಕ್ಷೆಯ ಸುತ್ತ 119 ಕಿ.ಮೀ . 127 ಕಿ.ಮೀ. ಅಂತರದಲ್ಲಿ ಸುತ್ತುತ್ತಿದೆ. ವಿಕ್ರಂ ಮತ್ತು ಪ್ರಗ್ಯಾನ್ ಅನ್ನು ಹೊತ್ತು ತಂದಿದ್ದ ಆರ್ಬಿಟರ್ ನೌಕೆ ಸಹ ಇದೇ ಕಕ್ಷೆಯಲ್ಲಿ ಸುತ್ತುತ್ತಿದ್ದು ಮುಂದಿನ ಒಂದು ವರ್ಷಗಳವರೆಗೆ ಅದು ಅಲ್ಲೇ ಸುತ್ತುತ್ತಿರಲಿದೆ.
ಮುಂದಿನ ಕೆಲ ದಿನಗಳಲ್ಲಿ ಚಂದ್ರನ ಅಂಗಳಕ್ಕೆ ಇನ್ನಷ್ಟು ಹತ್ತಿರವಾಗುವ ನಿಟ್ಟಿನಲ್ಲಿ ವಿಕ್ರಂ ಲ್ಯಾಂಡರ್ ಗೆ ಎರಡು ಕಕ್ಷೆ ಏರಿಸುವಿಕೆ ಪ್ರಕ್ರಿಯೆಗಳು ನಡೆಯಲಿವೆ. ಸೆಪ್ಟಂಬರ 4 ರಂದು ಬೆಳಿಗ್ಗೆ ವಿಕ್ರಂ ಚಂದ್ರನ ಕಕ್ಷೆಯ ಅತೀ ಸನಿಹದಲ್ಲಿ ಅಂದರೆ 36 ಕಿಲೋಮೀಟರ್ ಗಳ ಅಂತರದಲ್ಲಿ ಸುತ್ತಲು ಪ್ರಾರಂಭಿಸಲಿದೆ. ಈ ಸಂದರ್ಭದಲ್ಲಿ ಕಕ್ಷಯಿಂದ ಈ ನೌಕೆಯ ಗರಿಷ್ಠ ಅಂತರ 110 ಕಿಲೋ ಮೀಟರ್ ಗಳಾಗಿರಲಿದೆ.
ಸೆಪ್ಟಂಬರ್ 7ರಂದು ವಿಕ್ರಂ ಲ್ಯಾಂಡರ್ 15 ನಿಮಿಷಗಳ ಶಕ್ತಿಯುತ ಅವತರಣ (ಇಳಿಯುವಿಕೆ) ಪ್ರಾರಂಭಿಸಲಿದೆ. ಈ 15 ನಿಮಿಷಗಳು ಇಸ್ರೋ ಪಾಲಿಗೆ ನಿರ್ಣಾಯಕವಾಗಿಲಿದೆ ಮತ್ತು ಇದು ಇಸ್ರೋ ಪಾಲಿನ ಅತ್ಯಂತ ಸವಾಲಿನ ನಿಮಿಷಗಳಲ್ಲಿ ಒಂದಾಗಲಿದೆ.
ಈ ಮೂಲಕ ವಿಕ್ರಂ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದ ಅಂಗಳದಲ್ಲಿ ಇಳಿದ ತಕ್ಷಣ ರೋವರ್ ಒಂದನ್ನು ಚಂದ್ರನಲ್ಲಿ ಇಳಿಸಿದ ವಿಶ್ವದ ನಾಲ್ಕನೇ ದೇಶವಾಗಿ ಭಾರತ ಮೂಡಿಬರಲಿದೆ ಮತ್ತು ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆ ಇಳಿಸಿದ ವಿಶ್ವದ ಪ್ರಪ್ರಥಮ ರಾಷ್ಟ್ರವೆಂಬ ಹೆಗ್ಗಳಿಕೆ ನಮ್ಮ ದೇಶದ ವಿಜ್ಞಾನಿಗಳದ್ದಾಗಲಿದೆ.