ಅವನು ಯೂಸಾಕು ಮೇಝವಾ, ಜಪಾನಿನ 18ನೇ ಶ್ರೀಮಂತ. 2023ರ ಆದಿಭಾಗದಲ್ಲಿ ಸ್ಪೇಸ್ ಎಕ್ಸ್‌ನ ದೈತ್ಯಾಕಾರದ ರಾಕೆಟ್ ಆತನನ್ನು ಹೊತ್ತುಕೊಂಡು, ಚಂದ್ರನತ್ತ ಚಿಮ್ಮಲಿದೆ ಎನ್ನುವುದು ಸದ್ಯದ ಸುದ್ದಿ. ಜಗತ್ತಿನ ಮೊದಲ ಖಾಸಗಿ ವ್ಯಕ್ತಿಯಾಗಿ ಆತ ಚಂದ್ರನತ್ತ ಪ್ರವಾಸಕ್ಕೆ ತೆರಳುತ್ತಿದ್ದಾನೆ. ಆದರೆ, ಆತ ಒಬ್ಬಂಟಿಯಾಗಿ ಅಲ್ಲಿಗೆ ಹೋಗುತ್ತಿಲ್ಲ…
“ಪ್ಯಾಬ್ಲೋ ಪಿಕಾಸೋ ಬದುಕಿದ್ದರೆ, ಆ ಚಂದ್ರನನ್ನು ಹತ್ತಿರದಿಂದ ನೋಡಿ, ಎಂಥ ರಮ್ಯವಾದ ಚಿತ್ರ ಬಿಡಿಸುತ್ತಿದ್ದ? ಒಂದು ವೇಳೆ ಚಂದ್ರನ ಮೇಲೆ ಜಾನ್ ಲೆನನ್ ಬಂದಿಳಿದರೆ, ಅಲ್ಲಿನ ಕಲ್ಲುಬಂಡೆಗಳ ಮೇಲೆ ಕುಳಿತು, ಮೇಲಿನ ಭೂಮಿಯ ವಕ್ರತೆಯನ್ನು ನೋಡುತ್ತಾ, ಯಾವ ಹಾಡನ್ನು ಕಟ್ಟುತ್ತಿದ್ದ ? ಮೈಕೆಲ್ ಜಾಕ್ಸನ್ ಅಲ್ಲಿ ನಿಂತರೆ, ಅಲ್ಲೂ ಗಾಳಿಯಲ್ಲಿ ತೇಲುತ್ತಿದ್ದನೇ? ಪೌಲ್ ಕೊಯೆಲೋನ ಅಂತರಂಗದ ಕಿಟಕಿಗಳಿಗೆ ಚಂದ್ರ ಯಾವ ರೂಪಕದಲ್ಲಿ ಕಂಡು, ಕಾದಂಬರಿ ಆಗುತ್ತಾನೆ? ಅದರ ಮೇಲೂ ಕುರಿಗಾಹಿಯನ್ನೂ ಕಳಿಸುತ್ತಿದ್ದನೋ! ಇವೆಲ್ಲ ಕುತೂಹಲಗಳೇ ನನ್ನ ಹೆಜ್ಜೆಯನ್ನು ಭೂಮಿಯಿಂದ ಕದಲುವಂತೆ ಮಾಡುತ್ತಿವೆ. ಒಬ್ಬ ಬ್ಯುಸಿನೆಸ್‌ಮನ್ ಆಗಿ ಚಂದ್ರನ ಮೇಲೆ ನಾನೊಬ್ಬನೇ ಹೋಗಿಬಂದರೆ, ಅದೊಂದು ಕಮರ್ಷಿಯಲ್ ಟೂರ್ ಅಂತ ಜಗತ್ತು ವ್ಯಾಖ್ಯಾನಿಸಿ, ನನ್ನನ್ನೂ ದುಡ್ಡಿನ ಬೆಟ್ಟದ ಮೇಲೆ ನಿಲ್ಲಿಸಿ, ದಿಟ್ಟಿಸಬಹುದು. ಹೀಗಾಗಿ ನನ್ನೊಂದಿಗೆ 8 ಮಂದಿ ಆರ್ಟಿಸ್ಟ್‌ಗಳನ್ನು ಕರೆದೊಯ್ಯುತ್ತಿದ್ದೇನೆ. ಅವರ ಕಂಗಳಲ್ಲೂ ಚಂದ್ರ ಹೇಗೆ ಕಾಣುತ್ತಾನೆಂಬ ಕುತೂಹಲ ನನ್ನಂತೆ ಈ ಜಗತ್ತಿಗೂ ಇದೆ…’
ಬರೋಬ್ಬರಿ 3 ಶತಕೋಟಿ ಡಾಲರ್‌ನ ಒಡೆಯ ಮೊನ್ನೆ ಹೀಗೆ ಭಾವುಕನಾಗಿ ಉಲಿಯುತ್ತಿದ್ದ. ಹಣ, ಅಂತಸ್ತು, ಮ್ಯೂಸಿಕ್ ಬ್ಯಾಂಡ್ ಎನ್ನುವ ಮೂರು ಗುಂಗಿನಲ್ಲಿ ತನ್ನ ಅಸ್ತಿತ್ವ ಕಂಡುಕೊಂಡಿದ್ದ ಈ ಜಪಾನಿಗನ ಜಾತಕದಲ್ಲಿ ಅಂದು ಗೋಚರಿಸಿದ್ದು, ಚಂದ್ರದೆಸೆ ಇದ್ದಿರಬಹುದು! ಅವನು ಯೂಸಾಕು ಮೇಝವಾ, ಜಪಾನಿನ 18ನೇ ಶ್ರೀಮಂತ. 2023ರ ಆದಿಭಾಗದಲ್ಲಿ ಸ್ಪೇಸ್ ಎಕ್ಸ್‌ನ ದೈತ್ಯಾಕಾರದ ರಾಕೆಟ್ ಆತನನ್ನು ಹೊತ್ತುಕೊಂಡು, ಚಂದ್ರನತ್ತ ಚಿಮ್ಮಲಿದೆ ಎನ್ನುವುದು ಸದ್ಯದ ಸುದ್ದಿ. ಜಗತ್ತಿನ ಮೊದಲ ಖಾಸಗಿ ವ್ಯಕ್ತಿಯಾಗಿ ಚಂದ್ರನತ್ತ ಪ್ರವಾಸಕ್ಕೆ ತೆರಳಿ ಯುಸಾಕು ದಾಖಲೆ ಬರೆಯಲು ಹೊರಟಿದ್ದಾನೆ. ಆದರೆ, ಆತ ಒಬ್ಬಂಟಿಯಾಗಿ ಅಲ್ಲಿಗೆ ಹೋಗುತ್ತಿಲ್ಲ. ಅವನದ್ದೇ ಖರ್ಚಿನಲ್ಲಿ, ಈತನೊಂದಿಗೆ ಫಿಲ್ಮ್ ಡೈರೆಕ್ಟರ್ ಒಬ್ಬ ಹೋಗುತ್ತಿದ್ದಾನೆ! ಕುಂಚ ಹಿಡಿದ ಒಬ್ಬ ಚಿತ್ರಕಲಾವಿದ, ಒಬ್ಬ ಡ್ಯಾನ್ಸರ್, ಕಾದಂಬರಿಕಾರ, ಸಂಗೀತಕಾರ, ಫ್ಯಾಶನ್ ಡಿಸೈನರ್, ಶಿಲ್ಪರಚನೆಕಾರ, ವಾಸ್ತುಶಿಲ್ಪಿ ಮತ್ತು ಕ್ಯಾಮೆರಾ ಹಿಡಿದ ಒಬ್ಬ ಫೋಟೋಗ್ರಾಫರ್‌ರನ್ನೂ ಪುಟ್ಟ ಪಡೆ ಮಾಡಿಕೊಂಡು, ತನ್ನೊಂದಿಗೆ ಕರೆದೊಯ್ಯುತ್ತಿದ್ದಾನೆ. ಒಂದು ವಾರದ ಮಟ್ಟಿಗೆ ಇವರೆಲ್ಲರೂ ಯೂಸಾಕು ಜೊತೆ ಚಂದ್ರನ ವಾತಾವರಣದಲ್ಲಿ ಕಳೆಯಲಿದ್ದಾರಂತೆ.
ಸ್ಪೇಸ್ ಎಕ್ಸ್ ಪ್ರಕಟಿಸಿದ ಈ ಸುದ್ದಿಗೂ ಮುನ್ನ ಯೂಸಾಕುನ ಹೆಸರು ಜಪಾನ್- ಅಮೆರಿಕದ ಹೊರತಾಗಿ ಮೂರನೇ ದೇಶದ ಕಿವಿಗೆ ಬಿದ್ದಿರಲಿಲ್ಲ. ಇವನು ಜಪಾನ್‌ನ “ಇ- ಕಾಮರ್ಸ್’ ಲೋಕದಲ್ಲಿ ಹೊಸ ಅಧ್ಯಾಯ ಬರೆದವನು. ಬೇರೆ ಬ್ಯುಸಿನೆಸ್‌ಮನ್ನುಗಳಂತೆ ದುಡ್ಡು, ವ್ಯವಹಾರವಷ್ಟೇ ಈತನ ಜಪವಾಗಿದ್ದಿದ್ದರೆ, ಜಗತ್ತಿನ ಶ್ರೀಮಂತರ ಸಾಲಿನಲ್ಲಿ ಈತನೂ ಇಣುಕಿ, ಫೋರ್ಬ್ಸ್ ಸಂಪಾದಕರ ಟೇಬಲ್ಲಿನ ಮೇಲಿನ ಪಟ್ಟಿಯಲ್ಲಿ ಈತನ ಹೆಸರೂ ಸೇರಿಕೊಳ್ಳುತ್ತಿತ್ತು. ಆದರೆ, ಯುಸಾಕು ಹಾಗಲ್ಲ. ದುಡ್ಡಿನ ಹಾದಿಯಲ್ಲಿಯೇ ಸಾಗುತ್ತಾ, ಸದಭಿರುಚಿಯ ಕಲೆಗಳನ್ನೂ ಮೈಗೆ ಅಂಟಿಸಿಕೊಂಡು ಧ್ಯಾನಸ್ಥನಾಗುವವನು. ಇನ್ನೊಂದು ತಿಂಗಳಲ್ಲಿ ಅಮೆರಿಕದಲ್ಲೋ, ಲಂಡನ್ನಿನಲ್ಲೋ ಜಗತ್ತಿನ ಶ್ರೇಷ್ಠ ಬ್ಯಾಂಡ್ ವಾದಕ ಸದ್ದು ಮಾಡುತ್ತಾನೆಂಬ ವಿಚಾರ ಕಿವಿಗೆ ಬಿದ್ದರೆ, ತನ್ನೊಂದಿಗೆ ಸಮಾನ ಮನಸ್ಕ ಗೆಳೆಯರನ್ನೂ ಕರಕೊಂಡು ಹೋಗಿ, ಸಹಸ್ರಾರು ಡಾಲರುಗಳನ್ನು ವ್ಯಯಿಸಿ ಬರುವ ಕಲಾರಾಧಕ. ಬ್ಯುಸಿನೆಸ್‌ಮನ್ನುಗಳ ಕಣ್ಣಿಗೆ ಈತನೊಬ್ಬ ಔಟ್‌ಡೇಟೆಡ್ ಹುಡುಗ. ಪ್ರಯೋಜನಕ್ಕೆ ಬಾರದ ಕೆಲಸಗಳನ್ನೇ ಮಾಡುವ ಕಾರಣಕ್ಕಾಗಿ!
ಯೂಸಾಕು ತನ್ನನ್ನು ಬ್ಯುಸಿನೆಸ್‌ಮನ್ ಆಗಿ ಯಾವತ್ತೂ ಕಂಡುಕೊಂಡವನಲ್ಲ. ಎಂಬಿಎದಂಥ ವ್ಯಾವಹಾರಿಕ ಶಾರ್ಟ್‌ಕಟ್ ಸೂತ್ರ ಹೇಳಿಕೊಡುವ ಪದವಿ ಓದಿದವನೂ ಇವನಲ್ಲ. ಅಸಲಿಗೆ, ಈತ ಕಾಲೇಜಿನ ಮೆಟ್ಟಿಲನ್ನೇ ಏರಿಲ್ಲ. ತರಗತಿಗೆ ಹೋಗು ಎಂದರೆ, ಕ್ಯಾಲಿಫೋರ್ನಿಯಾಕ್ಕೆ ಓಡಿಹೋಗಿ, ಮ್ಯೂಸಿಕ್ ಬ್ಯಾಂಡ್‌ಗಳ ಹಿಂದೆ ಕುಣಿದಿದ್ದ. ಯೂಸಾಕು ಒಳಗೊಬ್ಬ ಪೆನ್ನು ಹಿಡಿದ ಜರ್ನಲಿಸ್ಟ್ ಕುಳಿತಿದ್ದಾನೆ. ಸ್ಕೇಟ್ ಬೋರ್ಡ್ ಸವಾರಿಯ ಶರವೇಗಿ ಇದ್ದಾನೆ. ಸಮುದ್ರದ ತಟದಲ್ಲಿ ರಾತ್ರಿಯಿಡೀ ಸ್ಟಿಕ್ ಹಿಡಿದು ಕುಳಿತು, ಅಲೆಗಳ ಸದ್ದಿಗೆ ಶ್ರುತಿ ಜೋಡಿಸುವ ಡ್ರಮ್ಮರ್ ಕಾಣಿಸುತ್ತಾನೆ. ಇವೆಲ್ಲಕ್ಕೂ ಮಿಗಿಲಾಗಿ, ಆತನೊಬ್ಬ ಆರ್ಟ್ ಕಲೆಕ್ಟರ್. ಕೆಲ ವರ್ಷಗಳ ಹಿಂದೆ ಆತ 110.5 ಮಿಲಿಯನ್ ಡಾಲರ್ ತೆತ್ತು, ಜೀನ್ ಮೈಕೆಲ್ ಎಂಬಾತನ ಚಿತ್ರ ಖರೀದಿಸಿ, ಸುದ್ದಿಯಾಗಿದ್ದ.
ಅಷ್ಟೆಲ್ಲ ಯೆನ್, ಡಾಲರ್‌ಗಳ ಕೋಟೆ ಕಟ್ಟಿಕೊಂಡಿರುವ ಯೂಸಾಕುಗೆ ಚಂದ್ರನ ಹುಚ್ಚು ಹೇಗೆ ಹಿಡಿಯಿತು ಅನ್ನೋದೂ ಒಂದು ಪ್ರಶ್ನೆ. ಇದಕ್ಕೆ ಆತ ಬೊಟ್ಟು ಮಾಡುವುದು ಚಿಕ್ಕಂದಿನಲ್ಲಿನ ಒಬ್ಬ ಗೆಳೆಯನ ಮೇಲೆ. ಕ್ಯಾಮಗಯಾ ಎಂಬ ಪುಟ್ಟ ಪಟ್ಟಣದಲ್ಲಿ ಈತನ ಮನೆಯಿತ್ತು. ಟೋಕಿಯೊದಲ್ಲಿ ಆ ಸಮಯದಲ್ಲಿ ಅದ್ಯಾವುದೋ ಫೆಸ್ಟಿವಲ್ ಇತ್ತು. ಅಲ್ಲಿಗೆ ಹೋಗಿದ್ದ ಪಕ್ಕದ ಮನೆಯ ಹುಡುಗನೊಬ್ಬ, ಚಂದ್ರನನ್ನು ಹೋಲುವ, ಬೆಳಕಿನ ಬಲೂನ್ ಮಾದರಿಯ ವಸ್ತುವೊಂದನ್ನು ತಂದು ಯೂಸಾಕುವಿನ ಮುಂದೆ ಹಿಡಿದಿದ್ದ. ಚಂದ್ರನೇ ಅಂಗೈಯಲ್ಲಿದ್ದಾನೆ ನೋಡು ಅಂತಲೂ ಆತ ಈತನನ್ನು ನಂಬಿಸಿಬಿಟ್ಟಿದ್ದನಂತೆ. ಆದರೆ, ಮನೆಗೆ ಬಂದು ಟೆರೇಸಿನ ಮೇಲೆ ಬಂದು ಆಗಸ ನೋಡಿದಾಗ, ಅಲ್ಲೂ ಚಂದ್ರ ನಗುತ್ತಿದ್ದ. ಅದೊಂದು ಸಿಹಿಮೋಸ, ಕನಸಾಗಿ ಚಿಗುರಿತು. ಬೆಳದಿಂಗಳನ್ನು ಸು#ರಿಸುವ ಆ ಚಂದ್ರನನ್ನು ಆಲಂಗಿಸುವ ಛಲ ಅಲ್ಲಿಂದಲೇ ಹುಟ್ಟಿತಂತೆ.
ವಿಜ್ಞಾನಿಗಳು ಆ ಚಂದ್ರನನ್ನು ಎಷ್ಟೇ ವೈಜ್ಞಾನಿಕವಾಗಿ ವಿಶ್ಲೇಷಿಸಿದರೂ, ನಾವು ಚಂದ್ರನನ್ನು ನೋಡುವುದು ಕಲೆಯ ತುಂಡಾಗಿಯೇ. ಅವನು ಚಿತ್ರವಾಗಿ, ಹಾಡಾಗಿ, ಕಲ್ಪನೆಗಳ ನಾನಾ ಕೂಸಾಗಿಯೇ ಸಾಮಾನ್ಯರ ಹೃದಯಕ್ಕೆ ಎಟುಕುವ ಚೋರನಾತ. ಕೈತುತ್ತು ಉಣ್ಣಿಸುವಾಗ ಪುಟ್ಟ ಮಗುವಿನೊಂದಿಗೆ, ತಾಯಿ ಕೈಗೊಳ್ಳುವ ನಿತ್ಯದ ಚಂದ್ರಯಾನವೂ ಅದೇ ಸಾಲಿಗೆ ಸೇರುವಂಥದ್ದೇ. ಈಗ ಅದನ್ನು ಮತ್ತೆ ಹೇಳಲು ಯಕಶ್ಚಿತ್ ಬ್ಯುಸಿನೆಸ್‌ಮನ್ ಬರಬೇಕಾಯಿತಷ್ಟೇ!