ಅರೆಭಾಷೆಯಲ್ಲಿ ನಿರ್ಮಾಣವಾದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ “ಮೂಗಜ್ಜನ ಕೋಳಿ’ ತೆರೆಗೆ ಬರಲು ಸಿದ್ಧವಾಗುತ್ತಿದೆ.
ಈ ಹಿಂದೆ “ಜೀಟಿಗೆ’, ತುಳುವಿನಲ್ಲಿ “ಲಕ್ಕಿಬಾಬು’ ಸಿನಿಮಾಗಳನ್ನು ನಿರ್ದೇಶಿಸಿದ್ದ ಸಂತೋಷ್ ಮಾಡ “ಮೂಗಜ್ಜನ ಕೋಳಿ’ ಅರೆಭಾಷೆ ಸಿನಿಮಾವನ್ನು ನಿರ್ದೇಶಿಸಿದ್ದು, “ಕನಸು ಪ್ರೊಡಕ್ಷನ್ಸ್’ ಬ್ಯಾನರಿನಲ್ಲಿ ಕೆ. ಸುರೇಶ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಇತ್ತೀಚೆಗೆ “ಮೂಗಜ್ಜನ ಕೋಳಿ’ಯ ಬಗ್ಗೆ ಮಾಹಿತಿ ನೀಡಲು ಮಾಧ್ಯಮಗಳ ಮುಂದೆ ಬಂದಿದ್ದ ಚಿತ್ರತಂಡ, ಸಿನಿಮಾದ ಒಂದಷ್ಟು ವಿಶೇಷತೆಗಳನ್ನು ಹಂಚಿಕೊಂಡಿತು. “ಇಲ್ಲಿಯವರೆಗೆ ಕನ್ನಡದ ಇತರೆ ಪ್ರಾದೇಶಿಕ ಭಾಷೆಗಳಾದ ತುಳು, ಕೊಂಕಣಿ, ಕೊಡವ, ಬ್ಯಾರಿ, ಬಂಜಾರ ಭಾಷೆಗಳಲ್ಲಿ ಸಿನಿಮಾಗಳು ಬಂದಿವೆ. ಆದರೆ ಇದೇ ಮೊದಲ ಬಾರಿಗೆ ಸುಳ್ಯ, ಪುತ್ತೂರು ಭಾಗಗಳಲ್ಲಿ ಪ್ರಚಲಿತದಲ್ಲಿರುವ ಅರೆಭಾಷೆಯಲ್ಲಿ “ಮೂಗಜ್ಜನ ಕೋಳಿ’ ಸಿನಿಮಾ ನಿರ್ಮಾಣವಾಗಿದೆ.
ದಕ್ಷಿಣ ಕನ್ನಡದ ಸುಳ್ಯ, ಪುತ್ತೂರು ಭಾಗದ ಪ್ರಾದೇಶಿಕತೆಯನ್ನು ಸಿನಿಮಾದಲ್ಲಿ ಚಿತ್ರಿಸಿದ್ದೇವೆ. ಇದೊಂದು ಮಕ್ಕಳ ಚಿತ್ರ. ಒಬ್ಬ ಮುದುಕ (ಅಜ್ಜ) ಮತ್ತು ಬಾಲಕಿಯೊಬ್ಬಳ ಸುತ್ತ ಇಡೀ ಚಿತ್ರದ ಕಥೆ ಸಾಗುತ್ತದೆ’ ಎಂಬುದು ಚಿತ್ರತಂಡದ ವಿವರಣೆ.
“ಗಲ್ಫಿನ ಮರಳುಗಾಡಿನಲ್ಲಿ ಬೆಳೆದ ಬಾಲಕಿ ಕನಸು ಮೊದಲ ಬಾರಿಗೆ ತನ್ನ ಹೆತ್ತವರ ಊರು ಸುಳ್ಯಕ್ಕೆ ಬರುತ್ತಾಳೆ. ಅವಳಿಗೆ ಅಲ್ಲಿನ ಸುಂದರ ಹಸಿರು ಪರಿಸರ ಎಲ್ಲವೂ ಹೊಸದಾಗಿರುತ್ತದೆ. ಎಲ್ಲವನ್ನೂ ತನ್ನದೇ ದೃಷ್ಟಿಕೋನದಲ್ಲಿ ನೋಡುವ ಬಾಲಕಿ ಮುಗ್ಧಳಾಗಿ ಅನೇಕ ಪ್ರಶ್ನೆಗಳನ್ನು ಕೇಳುತ್ತಾಳೆ. ಅವಳ ನೆರೆಮನೆಯಲ್ಲಿ ಗೋವಿಂದ (ಮೂಕಜ್ಜ) ಯಾರಲ್ಲೂ ಮಾತನಾಡದ ಒರಟು ಸ್ವಭಾವದ ಮುದುಕ. ಮುಗ್ಧ ಹುಡುಗಿ ಮತ್ತು ಕೋಳಿ ಸಾಕಿಕೊಂಡಿರುವ ಮೂಗಜ್ಜನ ನಡುವೆ ನಡೆಯುವ ಸಂಘರ್ಷ ಮತ್ತು ಸಂಬಂಧದ ಕಥೆಯೇ “ಮೂಗಜ್ಜನ ಕೋಳಿ’ ಸಿನಿಮಾ’ ಎಂದು ಸಿನಿಮಾದ ಕಥಾಹಂದರ ಬಿಚ್ಚಿಟ್ಟರು ನಿರ್ದೇಶಕ ಸಂತೋಷ್ ಮಾಡ.
ಇನ್ನು “ಮೂಗಜ್ಜನ ಕೋಳಿ’ ಸಿನಿಮಾದಲ್ಲಿ ನವೀನ್ ಪಡೀಲ್, ಗೌರಿಕಾ ದೀಪುಲಾಲ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಪ್ರಕಾಶ್ ತುಮ್ಮಿನಾಡು, ದೀಪಕ್ ರೈ ಪಾಣಾಜೆ, ರೂಪಶ್ರೀ ವರ್ಕಾಡಿ, ಸುಕನ್ಯಾ, ರಾಘವೇಂದ್ರ ಭಟ್, ಡಾ. ಜೀವನ ರಾಮ್ ಸುಳ್ಯ, ಕುಮಾರಿ ಸಾನಿಧ್ಯ ಮೊದಲಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸುರೇಶ್ ಅರಸ್ ಸಂಕಲನ, ಸುಬ್ರಾಯ ಚೊಕ್ಕಾಡಿ ಸಾಹಿತ್ಯ, ವಿನೀತ್ ಕಥೆ, ರಮೇಶ್ ಶೆಟ್ಟಿಗಾರ್ ಚಿತ್ರಕಥೆ, ಸಂಭಾಷಣೆ “ಮೂಕಜ್ಜನ ಕೋಳಿ’ ಚಿತ್ರಕ್ಕಿದೆ.