Advertisement

ಮಹತ್ವ ಪಡೆದುಕೊಂಡಿದೆ ಮೂಡೀಸ್‌ ವರದಿ: ಸಾಧನೆಗೆ ಸಮರ್ಥನೆ

10:40 AM Nov 18, 2017 | |

ನಮ್ಮಲ್ಲಿ ಸಂಘಟಿತ ವಲಯಕ್ಕಿಂತಲೂ ಅಸಂಘಟಿತ ವಲಯವೇ ದೊಡ್ಡದಾಗಿದೆ. ಜಿಎಸ್‌ಟಿ ಮತ್ತು ನೋಟು ರದ್ದು ನಿರ್ಧಾರಗಳಿಂದ ದೊಡ್ಡ ಹೊಡೆತ ಬಿದ್ದಿರುವುದು ಕೂಡ ಈ ವಲಯಕ್ಕೆ..

Advertisement

ಅಮೆರಿಕದ ಮೂಡೀಸ್‌ ಇನ್ವೆಸ್ಟರ್ ಸರ್ವಿಸಸ್‌ ಸಂಸ್ಥೆ ಬಿಡುಗಡೆಗೊಳಿಸಿರುವ ವರದಿ ಕೇಂದ್ರದ ನರೇಂದ್ರ ಮೋದಿ ಸರಕಾರದ ಸಾಧನೆಗೆ ನೀಡಿದ ಸಮರ್ಥನೆಯಂತಿದೆ. ಸುಮಾರು ಒಂದು ದಶಕದ ಬಳಿಕ ಭಾರತದ ಸೊವರಿನ್‌ ಕ್ರೆಡಿಟ್‌ ರೇಟನ್ನು ಮೂಡೀಸ್‌ ಬಿಎಎ3 ಹಂತದಿಂದ ಬಿಎಎ2ಗೆ ಏರಿಸಿದೆ. ನೋಟು ರದ್ದು, ಸರಕು ಮತ್ತು ಸೇವಾ ತೆರಿಗೆ ಸೇರಿ ಹಲವು ಆರ್ಥಿಕ ಸುಧಾರಣಾ ಕ್ರಮಗಳಿಗೆ ವಿಪಕ್ಷಗಳಿಂದ ತೀವ್ರ ವಾಗ್ಧಾಳಿ ಎದುರಿಸುತ್ತಿರುವ ಸಂದರ್ಭದಲ್ಲೇ ಸರಕಾರಕ್ಕೆ ಮೂಡೀಸ್‌ ವರದಿ ಆನೆಬಲ ನೀಡಿರುವುದರಲ್ಲಿ ಅನುಮಾನವಿಲ್ಲ. ವರದಿ ಬಹಿರಂಗವಾಗುತ್ತಿದ್ದಂತೆಯೇ ಮೋದಿ, ಹಣಕಾಸು ಸಚಿವ ಅರುಣ್‌ ಜೇತ್ಲೀ ಸೇರಿದಂತೆ ಹಲವು ಸಚಿವರು ಈ ಕುರಿತು ಹೇಳಿಕೆ ನೀಡಿರುವುದೇ ಇದಕ್ಕೆ ಸಾಕ್ಷಿ. ಈ ತಿಂಗಳಲ್ಲಿ ಮೋದಿ ಸರಕಾರದ ನೈತಿಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಬಂದಿರುವ ಮೂರನೇ ವರದಿಯಿದು. ಕೆಲ ದಿನಗಳ ಹಿಂದೆಯಷ್ಟೇ ವಿಶ್ವಬ್ಯಾಂಕ್‌ನ ಉದ್ಯಮ ಸ್ನೇಹಿ ದೇಶಗಳ ಪಟ್ಟಿಯಲ್ಲಿ ಭಾರತದ ಸ್ಥಾನ 139ರಿಂದ 100ಕ್ಕೆ ಜಿಗಿದಿತ್ತು. ಬರೀ ಒಂದು ವರ್ಷದಲ್ಲಾಗಿರುವ ಈ ಸಾಧನೆಗೆ ಸರ್ವತ್ರ ಪ್ರಶಂಸೆ ವ್ಯಕ್ತವಾಗಿದೆ. ಇದರ ಬೆನ್ನಿಗೆ ಅಮೆರಿಕದ ಪ್ಯೂ ರೀಸರ್ಚ್‌ ಸೆಂಟರ್‌ ಎಂಬ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಈಗಲೂ ಮೋದಿಯೇ ಭಾರತೀಯರ ನೆಚ್ಚಿನ ನಾಯಕ ಎಂಬ ಅಂಶ ತಿಳಿದು ಬಂದಿದೆ. ಮೂರು ವರ್ಷದ ಆಳ್ವಿಕೆಯಲ್ಲಿ ಮೋದಿಯ ವರ್ಚಸ್ಸು ಮುಕ್ಕಾಗಿಲ್ಲ ಎನ್ನುವುದನ್ನು ಈ ಸಮೀಕ್ಷೆ ದೃಢಪಡಿಸಿದೆ. ಇದೀಗ ಮೂಡೀಸ್‌ ಮೋದಿ ಕೈಗೊಂಡಿರುವ ಆರ್ಥಿಕ ಮತ್ತು ರಾಜಕೀಯ ನಿರ್ಧಾರಗಳು ಸಕಾರಾತ್ಮಕ ಪರಿಣಾಮಗಳನ್ನು ಬೀರುತ್ತಿವೆ ಎನ್ನುತ್ತಿರುವುದು ಮುಂದಿನ ದಿನಗಳಲ್ಲಿ ದೇಶದ ಆರ್ಥಿಕತೆ ಇನ್ನಷ್ಟು ದೃಢವಾಗುವ ಮುನ್ಸೂಚನೆಯನ್ನು ನೀಡಿದೆ. 

ಮೂಡೀಸ್‌ ವರದಿ ಹಲವು ಕಾರಣಕ್ಕೆ ಮಹತ್ವ ಪಡೆದುಕೊಂಡಿದೆ. ನೋಟು ರದ್ದು ಮತ್ತು ಜಿಎಸ್‌ಟಿಯಿಂದ ದೇಶದ ಆರ್ಥಿಕತೆಗೆ ಹೊಡೆತ ಬಿದ್ದಿದೆ ಎಂದು ಕೂಗಾಡುತ್ತಿರುವ ವಿಪಕ್ಷಗಳಿಗೆ ಈ ವರದಿ ತಕ್ಕ ಉತ್ತರ ನೀಡಿದೆ. ಜತೆಗೆ ಆರ್ಥಿಕತೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ, ಈ ಕುರಿತು ಯಾರೂ ಭಯಪಡಬೇಕಾದ ಅಗತ್ಯವಿಲ್ಲ ಎಂಬ ಸಂದೇಶವನ್ನು ರವಾನಿಸಿದೆ. 2004ರಲ್ಲಿ ಮೂಡೀಸ್‌ ಭಾರತದ ಶ್ರೇಯಾಂಕವನ್ನು ಬಿಎಎ 3ಕ್ಕೇರಿಸಿತ್ತು. ಆ ಬಳಿಕ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರಕಾರದ ಸತತ ಹತ್ತು ವರ್ಷಗಳ ಆಳ್ವಿಕೆಯಲ್ಲಿ ಮೂಡೀಸ್‌ ರೇಟಿಂಗ್‌ನಲ್ಲಿ ಯಾವುದೇ ಬದಲಾವಣೆಯಾಗಿರಲಿಲ್ಲ. ಬಿಎಎ3 ಎಂದರೆ ಹೂಡಿಕೆ ಮಾಡಲು ಕನಿಷ್ಠ ಸಾಧ್ಯತೆಯಿರುವ ದೇಶ ಎಂದು ಅರ್ಥ. ಮೂಡೀಸ್‌ ರೇಟಿಂಗ್‌ ದೇಶದ ಆರ್ಥಿಕ ಮತ್ತು ರಾಜಕೀಯ ಸ್ಥಿರತೆಯನ್ನು ಪ್ರತಿಬಿಂಬಿಸುತ್ತದೆ. ಬಿಎಎ2ಕ್ಕೇರುವುದರಿಂದ ಸ್ಥಿರ ಆರ್ಥಿಕತೆಯಿಂದ ಸುಸ್ಥಿರ ಆರ್ಥಿಕ ಅಭಿವೃದ್ಧಿಗೆ ಬಡ್ತಿ ಪಡೆದುಕೊಂಡಂತೆ. ಪ್ರಸ್ತುತ ಭಾರತ ಮೂಡೀಸ್‌ ಪಟ್ಟಿಯಲ್ಲಿ ಸ್ಪೈನ್‌, ಇಟಲಿ, ಒಮಾನ್‌, ಫಿಲಿಪ್ಪೆ„ನ್ಸ್‌, ಪನಾಮ, ಬಲ್ಗೇರಿಯ, ಉರುಗ್ವೇ, ಕೊಲಂಬಿಯಾ ಮತ್ತಿತರ ಮುಂದುವರಿದ ದೇಶಗಳ ಸಾಲಿನಲ್ಲಿದೆ. ಮೋದಿ ಸರಕಾರದ ಸುಧಾರಣಾ ಕಾರ್ಯಸೂಚಿಯನ್ನು ಮೂಡೀಸ್‌ ಮೆಚ್ಚಿಕೊಂಡಿದೆ. ನೋಟು ರದ್ದು, ಜಿಎಸ್‌ಟಿ ಮತ್ತು ಆಧಾರ್‌ ಆಧಾರಿತ ನಗದುರಹಿತ ವಹಿವಾಟುಗಳಿಗೆ ಸರಕಾರ ನೀಡುತ್ತಿರುವ ಉತ್ತೇಜನವನ್ನು ಮೂಡೀಸ್‌ ಶ್ಲಾ ಸಿದ್ದು, ಸದ್ಯ ಕುಸಿತ ಕಂಡಿರುವ ಜಿಡಿಪಿ ಮುಂದಿನ ವರ್ಷಗಳಲ್ಲಿ ಚೇತರಿಸಿಕೊಳ್ಳುವ ಭರವಸೆ ವ್ಯಕ್ತಪಡಿಸಿದೆ. 

ಮೂಡೀಸ್‌ ಶ್ರೇಯಾಂಕ ನಿಗದಿಪಡಿಸುವುದು ಸಾಲದ ಜಿಡಿಪಿ ಅನುಪಾತದ ಮೇಲೆ. ಈ ದರ ಹೆಚ್ಚಾದರೆ ದೇಶದ ಬ್ಯಾಂಕಿಂಗ್‌ ಕ್ಷೇತ್ರದ ಆರೋಗ್ಯ ಚೆನ್ನಾಗಿದೆ ಎಂದು ಅರ್ಥ. ಆದರೆ ಸಾಲಗಳು ವಸೂಲಾಗದ ಸಾಲವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಮಾತ್ರ ಬ್ಯಾಂಕುಗಳ ಮೇಲಿರುತ್ತದೆ. ಸ್ಪೈನ್‌, ಇಟಲಿ ಮತ್ತಿತರ ಐರೋಪ್ಯ ದೇಶಗಳು ಭಾರೀ ಸಾಲದ ಸುಳಿಯ ವಿರುದ್ಧ ಹೋರಾಡಿ ಬಿಎಎ2 ರೇಟಿಂಗ್‌ ಪಡೆದುಕೊಂಡಿವೆ. ಸದ್ಯಕ್ಕೆ ಸಾಲದ ಹೊರೆ ಕೈಮೀರಿ ಹೋಗಿಲ್ಲ ಎನ್ನುವ ಅಂಶ ರೇಟಿಂಗ್‌ನಿಂದ ತಿಳಿದುಬಂದಿದೆ. ಇತ್ತೀಚೆಗಷ್ಟೇ ಸರಕಾರ ಬ್ಯಾಂಕುಗಳಿಗೆ ಬಂಡವಾಳ ಮರುಪೂರಣ ಘೋಷಿಸಿರುವುದು ರೇಟಿಂಗ್‌ ಮೇಲೆ ಸಕಾರಾತ್ಮಕವಾದ ಪರಿಣಾಮ ಬೀರಿದೆ. ಆದರೆ ಮೂಡೀಸ್‌ ಆಗಲಿ ಇನ್ಯಾವುದೇ ರೇಟಿಂಗ್‌ ಏಜೆನ್ಸಿ ಆಗಲಿ ದರಗಳನ್ನು ನಿರ್ಧರಿಸುವುದು ದೇಶದ ಸಂಘಟಿತ ಆರ್ಥಿಕ ಕ್ಷೇತ್ರದ ವ್ಯವಹಾರಗಳನ್ನು ನೋಡಿಕೊಂಡು. ಆದರೆ ನಮ್ಮಲ್ಲಿ ಸಂಘಟಿತ ವಲಯಕ್ಕಿಂತಲೂ ಅಸಂಘಟಿತ ವಲಯವೇ ದೊಡ್ಡದಾಗಿದೆ. ಜಿಎಸ್‌ಟಿ ಮತ್ತು ನೋಟು ರದ್ದು ನಿರ್ಧಾರಗಳಿಂದ ದೊಡ್ಡ ಹೊಡೆತ ಬಿದ್ದಿರುವುದು ಕೂಡ ಈ ವಲಯಕ್ಕೆ ಈ ವಲಯದ ಅಭಿವೃದ್ಧಿಯಾದರೆ ಮಾತ್ರ ನಿಜವಾದ ವಿಕಾಸವನ್ನು ಸಾಧಿಸಲು ಸಾಧ್ಯ.

Advertisement

Udayavani is now on Telegram. Click here to join our channel and stay updated with the latest news.

Next