Advertisement

ಮಳೆಗೆ ಕೊಚ್ಚಿ ಹೋದ ಶಿರ್ವ-ಕಟ್ಟಿಂಗೇರಿ-ಮೂಡುಬೆಳ್ಳೆ ಸಂಪರ್ಕ ರಸ್ತೆ

06:00 AM Jul 10, 2018 | Team Udayavani |

ಶಿರ್ವ: ಜಿಲ್ಲೆಯಾದ್ಯಂತ ಶನಿವಾರ ಸುರಿದ ಮಹಾಮಳೆಗೆ ಶಿರ್ವ ಮಾಣಿಬೆಟ್ಟು ಗರಡಿಯ ಬಳಿ ಮೂಡುಬೆಳ್ಳೆ-ಕಟ್ಟಿಂಗೇರಿ-ಶಿರ್ವ ಸಂಪರ್ಕ ರಸ್ತೆಯು ಕೊಚ್ಚಿಹೋಗಿದ್ದು ರಸ್ತೆ ಸಂಪರ್ಕ ಕಡಿತಗೊಂಡು ಎರಡೂ ಗ್ರಾಮಗಳ ಜನರು ಸಂಚಾರಕ್ಕಾಗಿ ಪರದಾಡುತ್ತಿದ್ದಾರೆ. 

Advertisement

ಶಿರ್ವ ಮಾಣಿಬೆಟ್ಟು ಹಾಗೂ ಕಟ್ಟಿಂಗೇರಿ ಪರಿಸರದ ಜನ ನಿತ್ಯ ಕೆಲಸ ಕಾರ್ಯಗಳಿಗೆ ಹಾಗೂ ಶಾಲೆ ಕಾಲೇಜುಗಳಿಗೆ ಹೋಗಲು ಈ ರಸ್ತೆಯನ್ನೇ ಬಳಸುತ್ತಿದ್ದು ಈಗ ರಸ್ತೆ ಕಡಿತಗೊಂಡಿದ್ದು ಜನ ಅತ್ತಿತ್ತ ಸಾಗಲು ಪರದಾಟ ನಡೆಸುವಂತಾಗಿದೆ.ದಿನನಿತ್ಯಈ ಮಾರ್ಗದಲ್ಲಿ ಐದಾರು ಶಾಲಾ ವಾಹನಗಳು ಓಡಾಟ ನಡೆಸುತ್ತಿದ್ದು ರಸ್ತೆ ಕೊಚ್ಚಿ ಹೋಗಿದ್ದರಿಂದಾಗಿ ಜನರು ಮತ್ತು ಶಾಲಾ ವಿದ್ಯಾರ್ಥಿಗಳು ದೂರದ ಮಟ್ಟಾರು-ನಾಲ್ಕುಬೀದಿ ರಸ್ತೆಯನ್ನು ಬಳಸುವಂತಾಗಿದೆ. ಶಾಲಾ ವಾಹನಗಳು ಸಂಚರಿಸುವ ಸಮಯದಲ್ಲಿಯೇ ಈ ರಸ್ತೆ ಕುಸಿತಗೊಂಡಿದ್ದು ಶನಿವಾರ ಶಾಲೆಗೆ ರಜೆಯಿದ್ದುದರಿಂದ ಜರಗಬಹುದಾದ ಅನಾಹುತವೊಂದು ತಪ್ಪಿದಂತಾಗಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

ಅವೈಜ್ಞಾನಿಕ ಕಾಮಗಾರಿ
ಸುಮಾರು ಐದಾರು ವರ್ಷದ ಹಿಂದೆ ಜಿ.ಪಂ.ಅನುದಾನದಿಂದ ಈ ರಸ್ತೆ ನಿರ್ಮಾಣಗೊಂಡಿದ್ದು ರಭಸದಿಂದ ನೀರು ಹರಿಯುವ ತೋಡಿನಲ್ಲಿ ಸೇತುವೆ ನಿರ್ಮಾಣದ ಬದಲಿಗೆ ಸಿಮೆಂಟ್‌ಪೈಪ್‌ ಅಳವಡಿಸಿದ್ದರಿಂದಾಗಿ ರಸ್ತೆ ಕುಸಿದಿದೆ. ತೋಡಿನಲ್ಲಿ ರಭಸದಿಂದ ನೀರು ಹರಿಯುವ ಸ್ಥಳದಲ್ಲಿ ಸಂಕ ನಿರ್ಮಿಸದೆ ಸಿಮೆಂಟ್‌ಪೈಪ್‌ ಅಳವಡಿಸಿ ಪೈಪ್‌ನ ಮೇಲೆ ಜೇಡಿ ಮಣ್ಣು ಹಾಕಲಾಗಿದ್ದು ಅವೈಜ್ಞಾನಿಕವಾಗಿ ನಡೆಸಿದ ಕಾಮಗಾರಿ ರಸ್ತೆ ಕುಸಿಯಲು ಕಾರಣ ಎಂದು ಗ್ರಾಮಸ್ಥರು ದೂರಿದ್ದಾರೆ. 

ಸೂಚನಾ ಫಲಕವಿಲ್ಲ
ರಸ್ತೆ ಸಂಪರ್ಕ ಕಡಿತಗೊಂಡು ವಾಹನ ಸಂಚಾರ ನಡೆಸಲು ಸಾಧ್ಯವಾಗದಿದ್ದರೂ ಸ್ಥಳಿಯಾಡಳಿತ ಎಲ್ಲೂ ಸೂಚನಾ ಫಲಕ ಅಳವಡಿಸಿಲ್ಲ. ಗ್ರಾಮಸ್ಥರೇ ರಸ್ತೆಯ ಎರಡೂ ಬದಿ ಮರದ ತುಂಡು ಮತ್ತು ಗೆಲ್ಲುಗಳನ್ನಿಟ್ಟು ತಡೆ ಹಾಕಿದ್ದು ಸ್ಥಳಿಯಾಡಳಿತ ಕೈಕಟ್ಟಿ ಕುಳಿತಿದೆ. 

ಕಟ್ಟಿಂಗೇರಿ ಪರಿಸರದಿಂದ ಬರುವವರು ಮತ್ತು ಶಿರ್ವ ಪರಿಸರದಿಂದ ಹೋಗುವವರು ರಸ್ತೆ ಕಡಿತಗೊಂಡ ಸ್ಥಳಕ್ಕೆ ಹೋಗಿ ಹಿಂದಿರುಗಿ ಬರಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. 

Advertisement

ಸ್ಥಳೀಯ ಜಿ.ಪಂ.ಸದಸ್ಯ ವಿಲ್ಸನ್‌ ರೊಡ್ರಿಗಸ್‌ ಗ್ರಾ.ಪಂ.ಸದಸ್ಯ ಕೆ.ಆರ್‌ ಪಾಟ್ಕರ್‌ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ್ದು ಜಿ.ಪಂ.ಎಂಜಿನಿಯರ್‌ ಅವರೊಂದಿಗೆ ಚರ್ಚಿಸಿ ಕೂಡಲೇ ಕಾಮಗಾರಿ ಪ್ರಾರಂಭಿಸಿ ಸಂಚಾರಕ್ಕೆ ಅನುವು ಮಾಡಿಕೊಡಲು ಶ್ರಮಿಸುವುದಾಗಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಗರಡಿಮನೆ ಆನಂದ ಪೂಜಾರಿ,ಜಯಕರ್‌, ಉಮೇಶ್‌ ಮತ್ತು ರಮೇಶ್‌ ಉಪಸ್ಥಿತರಿದ್ದರು.

ಸಂಕ ನಿರ್ಮಿಸಲು ಪ್ರಯತ್ನ
ಜಿ.ಪಂ.ಅನುದಾನದಿಂದ ಈಗಾಗಲೇ ಈ ರಸ್ತೆಗೆ 5. ಲ.ರೂ.ವೆಚ್ಚ ಮಾಡಿ ದುರಸ್ತಿಗೊಳಿಸಲಾಗಿದೆ. ರಸ್ತೆ ಸಂಪರ್ಕ ಕಡಿತಗೊಂಡ ಬಗ್ಗೆ ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿ ಅನುದಾನ ಬಿಡುಗಡೆಗೊಳಿಸಿ ಸಂಕ ನಿರ್ಮಿಸಲು ಪ್ರಯತ್ನಿಸುತ್ತೇವೆ.
– ವಿಲ್ಸನ್‌ ರೊಡ್ರಿಗಸ್‌, ಶಿರ್ವ ಜಿ.ಪಂ.ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next