ಕೆಲವರಿಗೆ, ಮನೆಯಲ್ಲಿ ಮಕ್ಕಳು ಆಟವಾಡಿದರೂ, ಹೆಂಡತಿ ಜೋಕು ಮಾಡಿದರೂ, ಅಮ್ಮ ಸ್ವಲ್ಪ ರೇಗಿದರೂ ಮೂಡ್ ಕೆಟ್ಟುಹೋಗುತ್ತದೆ. ಅಷ್ಟಕ್ಕೇ ಇಡೀ ದಿನ ಮುಗುಮ್ಮಾಗಿ ಇದ್ದು ಬಿಡುತ್ತಾರೆ…
ಥತ್ತೇರಿಕೆ, ಯಾವ ಕೆಲಸ ಮಾಡೋಕೂ ಮೂಡ್ ಇಲ್ಲ. ಹೀಗಂತ ಹೇಳುವ ಜನ ನಮ್ಮಲ್ಲಿ ಇದ್ದಾರೆ. ಸುಮ್ಮನೆ ಗಮನಿಸಿ: ಇಂಥವರು, ಸಣ್ಣದೊಂದು ಬೇಸರ ಆದರೂ ಸಾಕು; ಯಾವ ಕೆಲಸವನ್ನೂ ಮಾಡೋಲ್ಲ. ನಿನ್ನೆ ಹೇಗಿತ್ತೋ ಇವತ್ತೂ ಹಾಗೇ ಇರಬೇಕು ಅಂತಾರೆ. ಕಿರಿಕಿರಿ ಇಲ್ಲದ ನಿನ್ನೆಯನ್ನು ಇವತ್ತು, ನಾಳೆ ಹೇಗೆ ತರೋದು? ಬಹಳ ಕಷ್ಟ. ಕೆಲವರಿಗೆ, ಮನೆಯಲ್ಲಿ ಮಕ್ಕಳು ಆಟವಾಡಿದರೂ, ಹೆಂಡತಿ ಜೋಕು ಮಾಡಿದರೂ, ಅಮ್ಮ ಸ್ವಲ್ಪ ರೇಗಿದರೂ ಮೂಡ್ ಕೆಟ್ಟುಹೋಗುತ್ತದೆ.
ಅಷ್ಟಕ್ಕೇ ಇಡೀ ದಿನ ಮುಗುಮ್ಮಾಗಿ ಇದ್ದುಬಿಡುತ್ತಾರೆ. ಮನಸ್ಸು ಲಾಕ್‌ಡೌನ್. ಮನೆಯಲ್ಲಿ 144 ಸೆಕ್ಷನ್. ಇವರನ್ನು ಅರ್ಥ ಮಾಡಿಕೊಳ್ಳೋದೇ ಕಷ್ಟ. ಈ ಮೂಡ್ ಅನ್ನೋದು ಎಲ್ಲಿ ಸಿಗುತ್ತದೆ? ಅದನ್ನು ತಂದು ಸ್ವಲ್ಪ ಔಷಧ ಕುಡಿಸೋಣ ಅಂತ ಎಷ್ಟೋ ಸಲ ಅನಿಸೋದು ಉಂಟು. ಈ ಥರದ ಮನೋಭಾವಕ್ಕೆ ಕಾರಣ, ಮೆದುಳಲ್ಲಿ ಗಾಬಾ ಪೇಟಿಂಗ್ ಅನ್ನೋ ಹಾರ್ಮೋನ್‌ನ ಉತ್ಪಾದನೆ ಹೆಚ್ಚಾಗಿರುವುದು. ನಾವು ಮಾಡುವ ನೆಗೆಟೀವ್ ಯೋಚನೆಗ ಳಿಂದಲೇ ಇದು ಹುಟ್ಟೋದು.
ಮೂಡಿಗಳು, ಸಾಮಾನ್ಯವಾಗಿ ಬೆಳಗ್ಗೆ ಎದ್ದಾಕ್ಷಣ ಒಂದು ಪ್ಲಾನ್ ಮಾಡಿಕೊಳ್ಳಬೇಕು. ನೆಗೆಟೀವ್ ಅಂಶಗಳನ್ನು ಮನಸ್ಸಿಂದ ತೆಗೆದುಹಾಕಬೇಕು. ಅಪರಾಧ ಕುರಿತ ಸುದ್ದಿಗಳನ್ನು ಓದುವುದು- ನೋಡುವುದನ್ನು ನಿಲ್ಲಿಸಬೇಕು. ಸಾಧ್ಯವಾದರೆ, ಎದ್ದಾಕ್ಷಣ ಪ್ರಾಣಾಯಾಮ ಮಾಡಿ. ಹಿಂದಿನ ದಿನ ಮಾಡಿಕೊಂಡ ಪ್ಲಾನ್ ಪ್ರಕಾರ, ಕೆಲಸ ಶುರು ಮಾಡಬೇಕು. ಹೀಗೆ ಮಾಡಿದ ನಂತರವೂ ಒಂದು ಪಕ್ಷ ಮೂಡ್ ಹಾಳಾಗಿ ಹೋಯಿತು ಅಂತಿಟ್ಟುಕೊಳ್ಳಿ. ಚಿಂತೆ ಬೇಕಿಲ್ಲ. ನೆಗೆಟಿವ್ ಯೋಚನೆಯನ್ನು ಮನಸಿಂದ ತೆಗೆದುಹಾಕಿ, ಸಂಗೀತ ಕೇಳುವುದು, ಚಿತ್ರಕಲೆಯಲ್ಲಿ ತೊಡಗಿಕೊಳ್ಳುವುದನ್ನು ಮಾಡಿದರೆ, ಮೂಡ್ ತಂತಾನೇ ಸರಿಯಾಗುತ್ತದೆ.
ಮೂಡ್ ಅನ್ನೋದು ಒಂಥರಾ ಜೇಡಿ ಮಣ್ಣು ಇದ್ದಹಾಗೆ. ಜೇಡಿಮಣ್ಣನ್ನು ನಾವು ಹೇಗೆ ತಟ್ಟುತ್ತೇವೆಯೋ ಹಾಗೇ ಮೂರ್ತಿಯಾಗುತ್ತದೆ. ಅದಕ್ಕೆ ಹೆಚ್ಚು ನೀರು ಬೆರೆಸಿದರೆ ಗಟ್ಟಿತನ ಕಡಿಮೆಯಾಗುತ್ತದೆ. ಹಾಗೇನೇ ಮೂಡ್ ಕೂಡ. ಹಾಗಾಗಿ, ನಮಗೆ ಏನು ಬೇಕು ಅನ್ನೋದನ್ನು ಮೊದಲು ನಾವು ತಿಳಿದುಕೊಳ್ಳಬೇಕು. ಅದನ್ನು ಮನೆಯವರಿಗೂ ತಿಳಿಸಬೇಕು. ಆಗ, ಮೂಡ್ ಕೆಡುವುದಿಲ್ಲ. ಒಂದೊಮ್ಮೆ ಕೆಟ್ಟರೂ ಕೆಟ್ಟರೂ ಬೇಗ ಸರಿಹೋಗುತ್ತದೆ…