Advertisement

Moodgall: ಈಗ ಭಾರೀ ಜನ!; ಗುಹಾಂತರ ಕೇಶವನಾಥೇಶ್ವರ ದೇವಾಲಯಕ್ಕೆ ಪ್ರವಾಸಿಗರ‌ ಸಂಖ್ಯೆ ಹೆಚ್ಚಳ

07:30 PM Sep 27, 2024 | Team Udayavani |

ಕುಂದಾಪುರ: ಕೆರಾಡಿ ಸಮೀಪದ ಮೂಡುಗಲ್ಲುವಿನ ಶ್ರೀ ಕೇಶವನಾಥೇಶ್ವರ ಗುಹಾಂತರ ದೇಗುಲವು ಪುರಾತನ ಹಿನ್ನೆಲೆಯ, ಭಕ್ತರಿಗೆ ವಿಶಿಷ್ಟ ಅನುಭೂತಿ ನೀಡುವ ಭಕ್ತಿಯ ತಾಣ. ಸುತ್ತಲೂ ಹಚ್ಚ ಹಸುರಿನಿಂದ ಕಂಗೊಳಿಸುವ ಪ್ರಾಕೃತಿಕ ಸೌಂದರ್ಯದ ಈ ಕ್ಷೇತ್ರ ಇದೀಗ ಪ್ರವಾಸಿ ತಾಣವಾಗಿಯೂ ಜನಾಕರ್ಷಣೆ ಪಡೆದಿದೆ.

Advertisement

ಮೂಡಗಲ್ಲು ದೇಗುಲಕ್ಕೆ ಕೆಲ ವಾರಗಳ ಹಿಂದೆ ತೆಲುಗು ಸ್ಟಾರ್‌ ನಟ ಜೂನಿಯರ್‌ ಎನ್‌ಟಿಆರ್‌, ನಿರ್ದೇಶಕ ಪ್ರಶಾಂತ್‌ ನೀಲ್‌ ಅವರು, ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಜತೆಗೂಡಿ ಭೇಟಿ ನೀಡಿದ್ದರು. ಈ ಭೇಟಿಯ ಬಳಿಕ ಈಗ ದೇಗುಲಕ್ಕೆ ಬರುವಂತಹ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದೆ. ಮೊದಲು ವಾರಂತ್ಯ, ರಜಾ ದಿನಗಳಲ್ಲಿ ಸೀಮಿತ ಸಂಖ್ಯೆಯ ಜನ ಬರುತ್ತಿದ್ದರೆ, ಈಗ ವಾರಾಂತ್ಯ ಏನಿಲ್ಲವೆಂದರೂ 50-60 ವಾಹನಗಳು, ಬಸ್‌ಗಳು ಬರುತ್ತಿವೆ. ಅದರಲ್ಲೂ ಕೊಲ್ಲೂರು, ಮಾರಣಕಟ್ಟೆಗೆ ಬರುವ ಆಂಧ್ರ ಪ್ರದೇಶದ ಸಾಕಷ್ಟು ಭಕ್ತರು ಇಲ್ಲಿಗೂ ಭೇಟಿ ನೀಡುತ್ತಿದ್ದಾರೆ.

ಪ್ರಕೃತಿಯ ಅದ್ಭುತ ತಾಣ
ಸುಮಾರು 50 ಅಡಿ ದೂರದವರೆಗೆ ಹಬ್ಬಿರುವ ವಿಶಾಲ ಗುಹೆ, ಆ ಗುಹೆಯೊಳಗೆ ಉದ್ಭವವಾಗಿರುವ ಶ್ರೀ ಕೇಶವನಾಥೇಶ್ವರ ದೇವರ ಲಿಂಗ, ಅಲ್ಲಿ ಸದಾ ಹರಿಯುವ ನೀರು, ಕೈ ಮುಗಿದು ನಿಂತ ಭಕ್ತರ ಕಾಲಿಗೆ ಕಚಗುಳಿ ಇಡುವ ಹಲವು ಬಗೆಯ ಮೀನುಗಳು, ಗುಹೆಯೊಳಗೆ ತುಂಬಿರುವ ಕತ್ತಲು, ದೇವರ ದೀಪವೊಂದೇ ಬೆಳಕು. ನೀರಿನಲ್ಲಿ ನಿಂತುಕೊಂಡೇ ದೇವರ ದರ್ಶನ ಪಡೆಯುವ ಅನೂಹ್ಯ ಅನುಭವ. ಹಸಿರು ಸೀರೆ ಹೊತ್ತು ಕುಳಿತಿರುವ ಕಾನನ, ತಣ್ಣಗೆ ಮೈಸೋಕುವ ಕುಳಿìಗಾಳಿ, ಹಕ್ಕಿಗಳ ಚಿಲಿಪಿಲಿ ನಿನಾದ, ಜೆನ್ನೋಣಗಳ ಝೇಂಕಾರ, ಅಬ್ಬಬ್ಟಾ..ನಿಸರ್ಗದ ಚೆಲುವನ್ನೆಲ್ಲಾ ಮೈಮೇಲೆಳೆದುಕೊಂಡಂತಿರುವ ಈ ತಾಣವು ಇಲ್ಲಿಗೆ ಬರುವ ಭಕ್ತರ ಮನತಣಿಸಿ, ನವಚೈತನ್ಯ ಮೂಡಿಸುವುದರಲ್ಲಿ ಅಚ್ಚರಿಯಿಲ್ಲ. ದೇವಸ್ಥಾನದ ಎದುರು ನೂರಾರು ಎಕರೆಯ ಮ್ಯಾಂಗನಿಸ್‌ ನಿಕ್ಷೇಪ ಹೊಂದಿರುವ ಪ್ರದೇಶದಲ್ಲಿ ನಿಂತು ಸೂರ್ಯಾಸ್ತ, ಉದಯ ನೋಡಬಹುದು. ಒಟ್ಟಿನಲ್ಲಿ ಇದು ಪ್ರಕೃತಿಯ ಅದ್ಭುತ, ವಿಸ್ಮಯಕಾರಿ ತಾಣ.

ಹೋಗುವುದು ಹೇಗೆ?
ಕುಂದಾಪುರದಿಂದ ತಲ್ಲೂರು – ನೇರಳಕಟ್ಟೆ- ಹೆಮ್ಮಕ್ಕಿ ಕ್ರಾಸ್‌ ಆಗಿ ಕೆರಾಡಿಗೆ ಬರಬಹುದು, ಹೆಮ್ಮಾಡಿ – ವಂಡ್ಸೆ, ಮಾರಣಕಟ್ಟೆ- ಹೊಸೂರು ಮೂಲಕ ಕೆರಾಡಿಗೆ ಬರಬಹುದು, ಸಿದ್ದಾಪುರ- ಆಜ್ರಿ- ಮೋರ್ಟು ಮೂಲಕ ಮೂಡುಗಲ್ಲಿಗೆ ಬರಬಹುದು. ಕುಂದಾಪುರದಿಂದ 40 ಕಿ.ಮೀ. ದೂರ, ಕೆರಾಡಿಯಿಂದ ನಾಲ್ಕು ಕಿ.ಮೀ. ದೂರದಲ್ಲಿದೆ.

Advertisement

ಸಂಪರ್ಕ ರಸ್ತೆ ಸರಿಯಾಗಬೇಕು..
ಸೆಲೆಬ್ರಿಟಿಗಳ ಭೇಟಿ ಬಳಿಕ ಇಲ್ಲಿಗೆ ಹೆಚ್ಚೆಚ್ಚು ಭಕ್ತರು ಬರುತ್ತಿದ್ದಾರೆ. ಆಂಧ್ರ, ತೆಲಂಗಾಣದಿಂದ ಬಸ್‌ಗಳಲ್ಲಿ ಬರುತ್ತಿದ್ದಾರೆ. ಆದರೆ ರಸ್ತೆ ಸರಿಯಿಲ್ಲದೆ ವಾಪಾಸು ಹೋಗುತ್ತಿದ್ದಾರೆ. ಹಾಗಂತ ದೇವಸ್ಥಾನದ ಪರಿಸರದಲ್ಲಿ ಅಂತಹ ಅಭಿವೃದ್ಧಿ ಬೇಡ. ಅದರಿಂದ ಇಲ್ಲಿನ ಪ್ರಾಕೃತಿಕ ಸೌಂದರ್ಯಕ್ಕೂ ಧಕ್ಕೆ ಆಗಬಹುದು. ಇಲ್ಲಿಗೆ ಸಂಪರ್ಕಿಸುವ ರಸ್ತೆಯನ್ನು ಅಗಲೀಕರಣಗೊಳಿಸಿ, ಕನಿಷ್ಠ ಆರಂಭದ ಸ್ವಲ್ಪ ದೂರವಾದರೂ ಡಾಮರು ಮಾಡಿಕೊಟ್ಟರೆ ಸಾಕು. ಮಣ್ಣಿನ ರಸ್ತೆಯಾದರೂ, ಕನಿಷ್ಠ ವಾಹನಗಳು ಸುಗಮವಾಗಿ ಸಂಚರಿಸುವಷ್ಟು ಮಾಡಿದರೆ ಉತ್ತಮ.
– ಅಜಿತ್‌ ಶೆಟ್ಟಿ ಕೆರಾಡಿ, ಶಶಿಧರ ಮಿತ್ರವೃಂದದ ಸದಸ್ಯರು 

ಪ್ರಸ್ತಾವನೆ ಸಲ್ಲಿಸಲಿ
ಸ್ಥಳೀಯ ಗ್ರಾ.ಪಂ.ನಿಂದ ಒಂದು ಸಂಪರ್ಕ ರಸ್ತೆ ಅಭಿವೃದ್ಧಿ ಬಗ್ಗೆ ಪ್ರಸ್ತಾವನೆ ಸಲ್ಲಿಸಲಿ. ಅದನ್ನು ನಮ್ಮ ಇಲಾಖೆಯ ಮೂಲಕ ಡಿಸಿಯವರಿಗೆ ಸಲ್ಲಿಸಿ, ಸರಕಾರಕ್ಕೆ ಸಲ್ಲಿಸಲಾಗುವುದು. ಸಂಪರ್ಕ ರಸ್ತೆಗೆ ನಾವು ಪ್ರಯತ್ನಿಸಬಹುದು. ದೇಗುಲ ಅಭಿವೃದ್ಧಿ, ಅಲ್ಲಿ ಮೂಲಸೌಕರ್ಯ ವೃದ್ಧಿ ಹೊಣೆ ಮುಜರಾಯಿ ಇಲಾಖೆಯದ್ದು.
– ಕುಮಾರ್‌ ಸಿ.ಯು., ಸಹಾಯಕ ನಿರ್ದೇಶಕ, ಪ್ರವಾಸೋದ್ಯಮ ಇಲಾಖೆ ಉಡುಪಿ

ಆ ದಿನ ಮೇಳ್ಯ ಕೆರೆಯಲ್ಲಿ ಹೂವಿನ ಎಸಳುಗಳು ತೇಲುವುದನ್ನು ಕಾಣಬಹುದಂತೆ. ಸುತ್ತಲೂ ಕಲ್ಲು ಬಂಡೆಗಳಿಂದ ಕೂಡಿದ್ದು, ನೀರು ಬತ್ತಿ ಹೋದ ನಿದರ್ಶನವೇ ಇಲ್ಲ. ಕೆಲ ವರ್ಷಗಳಿಂದ ಶಶಿಧರ ಮಿತ್ರ ವೃಂದದ ಮೂಲಕ ಊರಿನ ಯುವಕರೇ ಒಗ್ಗೂಡಿ, ದೇಗುಲದ ಜಾತ್ರೆ, ವಿಶೇಷ ದಿನದಂದು ಎಲ್ಲ ಕಾರ್ಯಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ.

ಪೌರಾಣಿಕ ಹಿನ್ನೆಲೆ: ಭೂಮಿಯಲ್ಲಿ ಸೃಷ್ಟಿ ಮಾಡಲು ಪುರುಷನ ಸಮಸ್ಯೆ ಎದುರಾದಾಗ ದೇವತೆಗಳು ಸೃಷ್ಟಿಕರ್ತನಾದ ಶಿವನನ್ನು ಭೂಮಿಗೆ ಬರುವಂತೆ ಮಾಡುತ್ತಾರೆ. ಆಗ ಪಾರ್ವತಿ, ನಂದಿಯೊಂದಿಗೆ ಬರುವ ಶಿವನು ಮೂಡಗಲ್ಲು ಪರಿಸರವನ್ನು ಮೆಚ್ಚಿದ್ದಲ್ಲದೆ, ಇಲ್ಲಿನ ಕಲ್ಲಿನ ಗುಹೆಯೊಳಗೆ ತಪಸ್ಸಿಗೆ ಕೂರುತ್ತಾನೆ. ಬಳಿಕ ಅಲ್ಲೇ ಕೇಶವನಾಥನಾಗಿ ನೆಲೆ ನಿಲ್ಲುತ್ತಾನೆ. ಇನ್ನು ಕಲಿಯುಗದಲ್ಲಿ ಶಿವನ ಲಿಂಗವನ್ನು ಮುಟ್ಟಿ ಪೂಜೆ ಮಾಡಿದರೆ ಅಪವಿತ್ರವಾಗುವುದು ಎನ್ನುವುದನ್ನು ಅರಿತ ದೇವತೆಗಳು ಇಲ್ಲಿನ ಗುಹೆಯೊಳಗೆ ನಿಜವಾದ ಲಿಂಗವನ್ನು ಮರೆಮಾಚಿ, ಉದ್ಭವ ಲಿಂಗವನ್ನು ಸೃಷ್ಟಿಸುತ್ತಾರೆ. ಅದಕ್ಕೆ ನಿತ್ಯ ಪೂಜೆ ಮಾಡಲಾಗುತ್ತದೆ. ಈ ಉದ್ಭವ ಲಿಂಗಕ್ಕೆ ಪೂಜೆ ಮಾಡಿದರೆ ಗುಹೆಯೊಳಗೆ ಅಂತರ್ಗತವಾದ ಲಿಂಗಕ್ಕೆ ಪೂಜೆ ಸಲ್ಲಿಸಿದಂತೆ ಎನ್ನುವ ಪ್ರತೀತಿಯಿದೆ. ಆ ಗುಹೆಯೊಳಗಿನ ಲಿಂಗಕ್ಕೆ ಅಭಿಷೇಕವಾದ ನೀರು ಸಪ್ತ ನದಿಗಳಾಗಿ ಹೊರ ಹೋಗುತ್ತದೆ ಎನ್ನುವ ಐತಿಹ್ಯವಿದೆ.

Advertisement

Udayavani is now on Telegram. Click here to join our channel and stay updated with the latest news.

Next