Advertisement

‘ಪ್ರಜೆಗಳು, ಅಧಿಕಾರಿಗಳ ನಡುವೆ ಪಾರದರ್ಶಕತೆ ಅತ್ಯವಶ್ಯ’

05:01 AM Mar 09, 2019 | Team Udayavani |

ಮೂಡುಬಿದಿರೆ : ನೂತನ ಮೂಡುಬಿದಿರೆ ತಾಲೂಕನ್ನು ರಾಜ್ಯ ಕಂದಾಯ ಸಚಿವ ಆರ್‌. ವಿ. ದೇಶಪಾಂಡೆ ಅವರು ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಉದ್ಘಾಟಿಸಿದರು. ಅದಕ್ಕೂ ಮುನ್ನ ತಹಶೀಲ್ದಾರರ ಕಚೇರಿಯ ಬಳಿ 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ನೂತನ ಮಿನಿ ವಿಧಾನಸೌಧದ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಿದರು.

Advertisement

ಹೌಸಿಂಗ್‌ ಬೋರ್ಡ್‌ ಮೂಲಕ ಮಿನಿ ವಿಧಾನ ಸೌಧ ನಿರ್ಮಾಣವಾಗಲಿದ್ದು, ಕೂಡಲೇ ಟೆಂಡರ್‌ ಪ್ರಕ್ರಿಯೆ ನಡೆಸಲು ಜಿಲ್ಲಾಧಿಕಾರಿಗೆ ಸೂಚನೆ ನೀಡಿದ ದೇಶಪಾಂಡೆ, ಕಾಮಗಾರಿ ಪಾರದರ್ಶಕವಾಗಿ, ಗುಣಮಟ್ಟ ಕಾಯ್ದುಕೊಳ್ಳಲು ನಿಗಾ ಇರಿಸಬೇಕು. ಪ್ರಜೆಗಳು ಮತ್ತು ಅಧಿಕಾರಿಗಳ ನಡುವೆ ಪಾರದರ್ಶಕತೆ ಇದ್ದಾಗ ಮಾತ್ರ ಪ್ರಜೆಗಳಿಗೆ ನ್ಯಾಯ ಲಭಿಸಲು ಸಾಧ್ಯ ಎಂದು ಹೇಳಿದರು.

ಈ ಹಿಂದೆ ಭೂ ಪರಿವರ್ತನೆಗಾಗಿ 14 ದಾಖಲೆಗಳು ಬೇಕಾಗಿದ್ದರೆ ಈಗ ಕೇವಲ ಪಹಣಿ ಪತ್ರ, ಮ್ಯುಟೇಶನ್‌ ಎಂಟ್ರಿ, ಅಫಿದವಿತ್‌ ಇಷ್ಟೇ ಸಾಕು. ಅಂಥ ಕ್ರಾಂತಿಕಾರಿ ಹೆಜ್ಜೆಯನ್ನು ಕಂದಾಯ ಇಲಾಖೆ ಇರಿಸಿದೆ ಎಂದ ಅವರು, ಸಿಬಂದಿ ಕೊರತೆಗಳ ಬಗ್ಗೆ ಪ್ರಸ್ತಾಪಿಸಿ, ಕೂಡಲೇ 109 ತಹಶೀಲ್ದಾರರು, 800 ಸರ್ವೇಯರ್‌ಗಳ ನೇಮಕಾತಿ ನಡೆಯಲಿದೆ. ಗ್ರಾಮಕರಣಿಕರು, ಪ್ರಥಮ, ದ್ವಿತೀಯ ದರ್ಜೆ ಗುಮಾಸ್ತರ ಹುದ್ದೆಗಳನ್ನು ತುಂಬುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ ಎಂದು ಪ್ರಕಟಿಸಿದರು.

ಸಂಬಂಧಿತ ಸ್ಥಳೀಯ ಆಡಳಿತೆಯಲ್ಲಿ ನೋಂದಣಿ ಮಾಡಿಸಿಯೇ 94 ಸಿ, 94ಸಿಸಿ ಹಕ್ಕು ಪತ್ರ ಕೊಟ್ಟರೆ ಮುಂದೆ ಫಲಾನುಭವಿಗಳಿಗೆ ಮನೆ ಕಟ್ಟಲು ಯಾವ ತೊಂದರೆ, ವಿಳಂಬ ಆಗುವುದಿಲ್ಲ ಎಂದು ದೇಶಪಾಂಡೆ ಅಭಿಪ್ರಾಯಪಟ್ಟರು. ರಾಜಕೀಯ ಚುನಾವಣೆಗೆ ಮಾತ್ರ ಸೀಮಿತವಾಗಿರಲಿ, ಅಭಿವೃದ್ಧಿ ಗೆ ಎಲ್ಲರೂ ಜತೆಯಾಗಿ ಕೆಲಸ ಮಾಡಬೇಕು ಎಂಬುದನ್ನು ಅವಿಭಜಿತ ದ.ಕ. ಜಿಲ್ಲೆಯವರು ತೋರಿಸಿಕೊಟ್ಟಿದ್ದಾರೆ. ಆ ಪರಂಪರೆ ಇಂದಿಗೂ ಮುಂದುವರಿದಿದೆ ಎಂದು ದೇಶಪಾಂಡೆ ಮೆಚ್ಚುಗೆ ವ್ಯಕ್ತಪಡಿಸಿದರು. ಪದ್ಮಾವತಿ ಕಲಾಮಂದಿರದಲ್ಲಿ ನಡೆದ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಉಮಾನಾಥ ಕೋಟ್ಯಾನ್‌ ವಹಿಸಿದ್ದರು.

ನಗರಾಭಿವೃದ್ಧಿ ಎಂದರೆ ಕೇವಲ ಪೇಟೆಯ ಹೃದಯಭಾಗದಲ್ಲೇ ಎಲ್ಲ ಕಚೇರಿಗಳನ್ನು ಕೂಡಿಹಾಕುವುದಲ್ಲ. ಕನಿಷ್ಠ 3 ದಶಕಗಳ ಮುನ್ನೋಟದಿಂದ ಕಚೇರಿಗಳನ್ನು ಮತ್ತು ಪೂರಕ  ವ್ಯ ವಸ್ಥೆಗಳು, ಸೌಕರ್ಯಗಳನ್ನು ಹೊರವಲಯದಲ್ಲೂ ಸ್ಥಾಪಿಸುವಂತಾಗಬೇಕು. ಇಲ್ಲವಾದಲ್ಲಿ ಮುಂದೆ ಮುಂದಿನ ಜನಾಂಗ ನಮ್ಮನ್ನು ಶಪಿ ಸುವ ಕಾಲ ಬರುತ್ತದೆ ಎಂದು ಖಾದರ್‌ ಎಚ್ಚರಿಸಿದರು.

Advertisement

ಧರ್ಮಸ್ಥಳವೂ ತಾಲೂಕಾಗಲಿ
ಬೆಳ್ತಂಗಡಿ ತಾಲೂಕು ವಿಸ್ತಾರವಾಗಿದ್ದು, ಅದರೊಳಗಿರುವ ಧರ್ಮಸ್ಥಳವನ್ನು ತಾಲೂಕು ಆಗಿ ರೂಪಿಸಬೇಕಾಗಿದೆ ಎಂದು ಯು.ಟಿ. ಖಾದರ್‌ ಅವರು ದೇಶಪಾಂಡೆ ಅವರನ್ನು ಆಗ್ರಹಿಸಿದರು.

ಶಾಸಕರ ಅಸಮಾಧಾನ
ಸಬ್‌ರಿಜಿಸ್ಟ್ರಾರ್‌ ಕಚೇರಿ, ತಾಲೂಕು ಕಚೇರಿ ಮೊದಲಾದ ಕಚೇರಿಗಳಲ್ಲಿ, ಇಲಾಖೆಗಳಲ್ಲಿ ಈಗ ಇರುವ ಕೊರತೆಗಳನ್ನು ನೀಗಬೇಕಾಗಿದೆ ಎಂದು ಸಭಾಧ್ಯಕ್ಷ ಉಮಾನಾಥ ಕೋಟ್ಯಾನ್‌ ಸಚಿವರಲ್ಲಿ ಮನವಿ ಮಾಡಿದರು.

ಸಚಿವ ದೇಶಪಾಂಡೆ ಅವರು ಮೂಡುಬಿದಿರೆಗೆ ಬರುವ ಮುನ್ನ ಕಿನ್ನಿಗೋಳಿಯಲ್ಲಿ ರಸ್ತೆ ಉದ್ಘಾಟನೆಯನ್ನು ನೆರವೇರಿಸಿದ್ದು, ಕ್ಷೇತ್ರ ಶಾಸಕನಾದ ತನಗೆ ಮಾಹಿತಿ ನೀಡದೇ ಇರುವುದು ಬೇಸರ ತಂದಿದೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಸಮ್ಮಾನ
ತಾಲೂಕು ನಿರ್ಮಾಣಕ್ಕಾಗಿ ಹೋರಾಟ ನಡೆಸಿದವರಲ್ಲಿ ಪ್ರಮುಖರಾದ ಮಾಜಿ ಸಚಿವರಾದ ಅಮರನಾಥ ಶೆಟ್ಟಿ ಹಾಗೂ ಅಭಯಚಂದ್ರ ಅವರನ್ನು ಸಚಿವ ದೇಶಪಾಂಡೆ ಒಂದೇ ಶಾಲನ್ನು ಹೊದೆಸಿ, ಹಾರ ತೊಡಿಸಿ ಸಮ್ಮಾನಿಸಿದರು.

ಮುಖ್ಯಅತಿಥಿಗಳಾಗಿ ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿ (ಕಂದಾಯ) ಐವನ್‌ ಡಿ’ಸೋಜಾ, ವಿಧಾನ  ಪರಿಷತ್‌ ಸದಸ್ಯ ಕೆ. ಹರೀಶ್‌ ಕುಮಾರ್‌, ಮಂಗಳೂರು ತಾ.ಪಂ. ಅಧ್ಯಕ್ಷ ಮಹಮ್ಮದ್‌ ಮೋನು, ಮೂಡುಬಿದಿರೆ ಪುರಸಭಾ ಅಧ್ಯಕ್ಷೆ ಹರಿಣಾಕ್ಷಿ ಸುವರ್ಣ, ಜಿ.ಪಂ. ಸದಸ್ಯ ಕೆ.ಪಿ. ಸುಚರಿತ ಶೆಟ್ಟಿ , ಜಿಲ್ಲಾಧಿಕಾರಿ ಎಸ್‌. ಸಸಿಕಾಂತ ಸೆಂಥಿಲ್‌ ಭಾಗವಹಿಸಿದ್ದರು.

ನಾಡಗೀತೆಯೊಂದಿಗೆ ಪ್ರಾರಂಭವಾದ ಸಭಾ ಕಾರ್ಯಕ್ರಮದಲ್ಲಿ ಮಂಗಳೂರು ಉಪವಿಭಾಗದ ಸ. ಆಯುಕ್ತ ರವಿಚಂದ್ರ ನಾಯಕ್‌ ಸ್ವಾಗತಿಸಿ, ತಹಶೀಲ್ದಾರ್‌ ಸುದರ್ಶನ್‌ ಬಿ.ಕೆ. ಅತಿಥಿಗಳನ್ನು ಗೌರವಿಸಿದರು. ಅಂಡಾರು ಗುಣಪಾಲ ಹೆಗ್ಡೆ ನಿರೂಪಿಸಿದರು.

ನಗರದ ಹೊರವಲಯವೂ ಅಭಿವೃದ್ಧಿಯಾಗಲಿ
ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಮಾತನಾಡಿ, ಮೂಡುಬಿದಿರೆ, ಕಡಬ ಇವುಗಳ ಬಳಿಕ ಮೂಲ್ಕಿ ಹಾಗೂ ಉಳ್ಳಾಲ ತಾಲೂಕು ರಚನೆಯನ್ನೂ ಘೋಷಿಸಿದ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಿಗೆ ಕೃತಜ್ಞತೆ ಸೂಚಿಸಿದರು. ಶ್ರೀ ಮಹಾವೀರ ಕಾಲೇಜಿನಲ್ಲಿ ಪಿಯು ವಿದ್ಯಾರ್ಥಿಯಾಗಿದ್ದ ದಿನಗಳನ್ನು ನೆನಪಿಸಿದ ಅವರು ಇಲ್ಲಿನ ಮಣ್ಣಿನ ಗುಣ ತನ್ನಲ್ಲಿ ನಾಯಕತ್ವದ ಗುಣವನ್ನು ಬಿತ್ತಿ ಬೆಳೆಸಿದೆ ಎಂದು ಸ್ಮರಿಸಿಕೊಂಡರು.

ಅನುಮತಿ ಬೇಕಿಲ್ಲ
’94 ಸಿ ಅನ್ವಯ ಅರ್ಜಿ ಸಲ್ಲಿಸಲು ಇದೇ ಮಾ. 31, ಹಾಗೂ ಬಗರ್‌ಹುಕುಂ ಕುರಿತಾಗಿ 57ರಲ್ಲಿ ಅರ್ಜಿ ಸಲ್ಲಿಸಲು ಮಾ.16 ಕೊನೆಯ ದಿನವಾಗಿದೆ. ಬಗರ್‌ ಹುಕುಂ ಮಂಜೂರಾದ ಅನಂತರ 25 ವರ್ಷಗಳ ಬಳಿಕ ಪರಾಧೀನ ಮಾಡಲು ಯಾರ ಅನುಮತಿಯೂ ಬೇಕಾಗಿಲ್ಲ.
 - ಆರ್‌.ವಿ. ದೇಶಪಾಂಡೆ
ರಾಜ್ಯ ಕಂದಾಯ ಸಚಿವ 

Advertisement

Udayavani is now on Telegram. Click here to join our channel and stay updated with the latest news.

Next