Advertisement

ಪ್ಲಾಸ್ಟಿಕ್‌ ನಿಷೇಧ ಅನುಷ್ಠಾನ ವಿಫ‌ಲ: ಆಕ್ರೋಶ

12:22 PM Oct 12, 2018 | Team Udayavani |

ಮೂಡಬಿದಿರೆ: ಪ್ಲಾಸ್ಟಿಕ್‌ ಕ್ಯಾರಿ ಬ್ಯಾಗ್‌ ಬಳಕೆಯನ್ನು ಆಗಸ್ಟ್‌ 15ರಿಂದ ನಿಷೇಧಿಸಿದ ಮೂಡಬಿದಿರೆ ಪುರಸಭೆಯು ಅದನ್ನು ಅನುಷ್ಠಾನಗೊಳಿಸುವಲ್ಲಿ ವಿಫ‌ಲವಾಗಿದೆ. ಇದರಿಂದಾಗಿ ಸಾರ್ವಜನಿಕರು, ವ್ಯಾಪಾರಿಗಳು ತೊಂದರೆ ಅನುಭವಿಸುವಂತಾಗಿದೆ ಎಂದು ಗುರುವಾರ ನಡೆದ ಮಾಸಿಕ ಸಭೆಯಲ್ಲಿ ಪುರಸಭಾ ಸದಸ್ಯರು ಆಕ್ರೋಶವ್ಯಕ್ತಪಡಿಸಿದರು.

Advertisement

ಹನೀಫ್‌ ಅಲಂಗಾರು ವಿಷಯ ಪ್ರಸ್ತಾವಿಸಿ, ಪುರಸಭಾ ಅಧಿಕಾರಿಗಳು ಒತ್ತಡಕ್ಕೆ ಮಣಿದು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ, ಮೂಡಬಿದಿರೆಯಲ್ಲಿ ಮಾತ್ರ ಪ್ಲಾಸ್ಟಿಕ್‌ ನಿಷೇಧ ಮಾಡಿದರೆ ಪ್ರಯೋಜನವಿಲ್ಲ. ಹೊರಗಿನಿಂದ ಬಂದವರ ಕೈಯಲ್ಲಿ ಪ್ಲಾಸ್ಟಿಕ್‌ ಚೀಲ ಇದ್ದರೆ ಅವರಿಂದ ದಂಡ ವಸೂಲಿ ಮಾಡಿ ಅವರಿಗೆ ಇರಿಸುಮುರಿಸು ಉಂಟಾಗುವಂತೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು. 

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಶೀನ ನಾಯ್ಕ, ದ.ಕ. ಜಿಲ್ಲೆಯ ಹಲವೆಡೆ ಪ್ಲಾಸ್ಟಿಕ್‌ ನಿಷೇಧವಿಲ್ಲದಿರುವುದನ್ನು ಮೂಡಬಿದಿರೆಯ ನಾಗರಿಕರು ಪ್ರಶ್ನಿಸುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ತಿಳಿಸಲಾಗಿದೆ. ಇದರ ಬಳಿಕ ಜಿಲ್ಲಾದ್ಯಂತ ಪ್ಲಾಸ್ಟಿಕ್‌ ಬಳಕೆ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಕ್ರಮ ಜರಗಿಸಿರುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ ಎಂದರು.

ಬಯೋಗ್ಯಾಸ್‌ ಉತ್ಪಾದನೆ ಇಲ್ಲ
ಕರಿಂಜೆ ಮಾರಿಂಜಗುಡ್ಡದಲ್ಲಿರುವ ಘನ ತ್ಯಾಜ್ಯಘಟಕವನ್ನು ವೈಜ್ಞಾನಿಕವಾಗಿ ನಿರ್ವಹಿಸಲಾಗುವುದು. ಬಯೋಗ್ಯಾಸ್‌, ಗೊಬ್ಬರ ಉತ್ಪಾದನೆ ಮಾಡಲಾಗುವುದು ಎಂದೆಲ್ಲ ಹೇಳಲಾಗಿತ್ತು. ಆದರೆ ಅದು ಇನ್ನೂ ಆಗಿಲ್ಲ. ಅವೈಜ್ಞಾನಿಕವಾಗಿ ಕಾರ್ಯನಿರ್ವಹಿಸುವ ಈ ಘಟಕದಲ್ಲಿ ಪ್ಲಾಸ್ಟಿಕ್‌ ಸಹಿತ ತ್ಯಾಜ್ಯರಾಶಿ ಹಾಕಿ ಮೇಲೆ ಮಣ್ಣು ಹಾಕುತ್ತ ಅದಕ್ಕಾಗಿ ಬಿಲ್‌ ಹಾಕಲಾಗುತ್ತಿದೆ ಎಂದು ಹನೀಫ್‌ ಆರೋಪಿಸಿದರು. ಪ್ರಸಾದ್‌ ಕುಮಾರ್‌, ನಾಗರಾಜ ಪೂಜಾರಿ, ಲಕ್ಷ್ಮಣ ಪೂಜಾರಿ, ಮನೋಜ್‌ ಶೆಟ್ಟಿ ಮೊದಲಾದವರು ಪ್ಲಾಸ್ಟಿಕ್‌ ಕ್ಯಾರಿಬ್ಯಾಗ್‌ ನಿಷೇಧ ತಂದೊಡ್ಡಿರುವ ಸಮಸ್ಯೆಯ ತೀವ್ರತೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಉಪಾಧ್ಯಕ್ಷ ವಿನೋದ್‌ ಸೆರಾವೋ ಅಧ್ಯಕ್ಷತೆ ವಹಿಸಿದ್ದರು.

ರಾಜೀವ್‌ ಗಾಂಧಿ ವಾಣಿಜ್ಯ ಸಂಕೀಣದ ಮೇಲಿನ ಮಹಡಿಯಲ್ಲಿ ವಿದ್ಯುತ್‌ ಪೂರೈಕೆ ಇಲ್ಲ ಎಂಬ ಕಾರಣವೊಡ್ಡಿ ಅನೇಕರು ಪುರಸಭೆಗೆ ಬಾಡಿಗೆ ನೀಡದಿರುವ ಬಗ್ಗೆ ಪ್ರಸಾದ್‌ ಪ್ರಸ್ತಾಪಿಸಿದರು. ಸ್ಥಾಯೀ ಸಮಿತಿ ಅಧ್ಯಕ್ಷ ಅಬ್ದುಲ್‌ ಬಶೀರ್‌, ಪರಿಸರ ಅಭಿಯಂತರೆ ಶಿಲ್ಪಾ ಎಸ್‌., ಪುರಸಭಾ ಪ್ರಬಂಧಕ ಸೂರ್ಯಕಾಂತ ಖಾರ್ವಿ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next