Advertisement

ಮೂಡಬಿದಿರೆ: ಅಡಿಕೆ ಸಸಿಗಳಿಗೆ ವಿಚಿತ್ರ ರೋಗ

10:13 AM Sep 22, 2018 | Team Udayavani |

ಮೂಡಬಿದಿರೆ: ಪುತ್ತಿಗೆ ಗ್ರಾ.ಪಂ. ವ್ಯಾಪ್ತಿಯ ಕೊಡ್ಯಡ್ಕ ಮಿತ್ತಬೈಲ್‌ನ ಆಗಸ್ಟಿನ್‌ ಪಿಂಟೋ ಅವರ ಅಡಿಕೆ ತೋಟಕ್ಕೆ ವಿಚಿತ್ರ ರೋಗ ಬಂದಿದೆ. ಎರಡು ಮೂರು ವರ್ಷಗಳ ಹಿಂದೆ ನೆಟ್ಟ ಅಡಿಕೆ ಸಸಿಗಳ ಸೋಗೆ ಹಳದಿ ಬಣ್ಣಕ್ಕೆ ತಿರುಗುತ್ತ, ಸುಟ್ಟ ಗಾಯಗಳಂತೆ ಕಂದು ಬಣ್ಣದ ಚುಕ್ಕಿಗಳು ಮೂಡುತ್ತ ಕ್ರಮೇಣ ಇಡೀ ಸೋಗೆಯೇ ಸುಟ್ಟುಹೋದಂತಾಗುತ್ತಿದೆ. ಕೆಲವೇ ವಾರಗಳಲ್ಲಿ ಅಡಿಕೆ ಗಿಡದ ಬುಡವೇ ಕಿತ್ತು ನೆಲಕ್ಕುರುಳುತ್ತಿವೆ. 400 ಗಿಡಗಳಿರುವ ತೋಟದಲ್ಲಿ ಈಗಾಗಲೇ 35-40 ಗಿಡಗಳು ಹೀಗೆ ಧರಾಶಾಯಿಯಾಗಿವೆ.

Advertisement

ಗಿಡ ಸಾಯುತ್ತಿರುವುದನ್ನು ಪರಿಶೀಲಿಸಿದಾಗ ನೆಲದಿಂದ ಗೇಣೆತ್ತರದಲ್ಲಿ ಗಿಡದ ಕಾಂಡ ಕೊಳೆತು ಹೋಗಿರುವುದು ಕಂಡು ಬರುತ್ತಿದೆ. ಜೋರಾಗಿ ಮಳೆ ಸುರಿಯುತ್ತಿರುವಾಗಲೇ ಆರಂಭವಾದ ಈ ರೋಗ ಈಗ ಜೋರಾದ ಬಿಸಿಲು ಕಾಯುತ್ತಿರುವ ವೇಳೆ ಇನ್ನಷ್ಟು ವ್ಯಾಪಕವಾಗಿ ಹರಡಿದ್ದು, ಹತ್ತಿರದ ತೆಂಗು, ಬಾಳೆಗಿಡಗಳಿಗೂ ವ್ಯಾಪಿಸುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.

ಕೊಡ್ಯಡ್ಕದಲ್ಲಿ ಕೇವಲ ಆಗಸ್ಟಿನ್‌ ಅವರ ತೋಟದಲ್ಲಿ ಮಾತ್ರ ಈ ರೋಗ ಕಂಡು ಬಂದಿರುವುದಲ್ಲ. ಹತ್ತಿರದ ಗೋವರ್ಧನ ನಾಯಕ್‌, ಮೈಕಲ್‌ ಡಿ’ಸೋಜಾ ಮೊದಲಾದವರ ತೋಟಗಳಲ್ಲೂ  ಗಿಡಗಳು ನೆಲಕ್ಕು ರುಳುತ್ತಿವೆ. ಕೆಲವೆಡೆ ದೊಡ್ಡ ಮರಗಳಲ್ಲೂ ಈ ರೋಗ ಕಾಣಿಸಿಕೊಳ್ಳತೊಡಗಿದೆ.

ದರೆಗುಡೆಯಲ್ಲೂ ?
ಕೊಡ್ಯಡ್ಕ ಮಾತ್ರವಲ್ಲ, ಮೂಡಬಿದಿರೆಯಿಂದ ಪೂರ್ವಕ್ಕೆ ದರೆಗುಡ್ಡೆ ಪರಿಸರದ ತೋಟಗಳಲ್ಲೂ ಈ ರೋಗ ಕಾಣಿಸಿಕೊಂಡಿರುವುದಾಗಿ ಅಲ್ಲಿನ ಕೃಷಿಕರು ತಿಳಿಸಿದ್ದಾರೆ. ಬೆನ್ನಿ ಲೋಬೋ ಅವರ ತೋಟದ ದೊಡ್ಡ ಮರಗಳಲ್ಲಿ ಸೋಗೆ ಮೂಡುತ್ತಿರುವಾಗಲೇ ಹಳದಿ ಬಣ್ಣಕ್ಕೆ ತಿರುಗಿತ್ತಿವೆ. ಇನ್ನಷ್ಟು ತೋಟಗಳಿಗೆ ರೋಗ ವ್ಯಾಪಿಸುವ ಭಯ ಕಾಡುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಭರವಸೆ ಮಾತ್ರ
ಕೃಷಿವಿಜ್ಞಾನ ಕೇಂದ್ರಗಳ ಅಧಿಕಾರಿಗಳನ್ನೂ ಸಂಪರ್ಕಿಸಿದ್ದೇನೆ. ಬರುತ್ತೇವೆ ಎಂದಷ್ಟೇ ಭರವಸೆ ನೀಡುತ್ತಾರೆ. ಇನ್ನಷ್ಟು ಒತ್ತಾಯ ಮಾಡಿದರೆ ನಮ್ಮಲ್ಲಿ ವಿಜ್ಞಾನಿಗಳ ಕೊರತೆ ಇದೆ, ಕಾರ್ಯದೊತ್ತಡ ಇದೆ ಎನ್ನುತ್ತಾರೆ.
– ಆಗಸ್ಟಿನ್‌, ಕೃಷಿಕರು

Advertisement

ಮುಂದಿನ ವಾರ ಪರಿಶೀಲನೆ
ನಮ್ಮ ಇಲಾಖೆಯ ಮೂಡಬಿದಿರೆ ವಲಯದ ಅಧಿಕಾರಿ ಯೋಗೀಂದ್ರ ಅವರನ್ನು ಕೊಡ್ಯಡ್ಕ ಮಿತ್ತಬೈಲ್‌ಗೆ ಕಳುಹಿಸಿದ್ದೇವೆ. ಅವರು ಪರಿಶೀಲಿಸಿ ನೀಡಿದ ಸಲಹೆಗಳಿಂದ ತೋಟದ ಮಾಲಕರಿಗೆ ಸಮಾಧಾನವಾಗದ ಕಾರಣ ನಾವು ಕಾಸರಗೋಡು ಸಿಪಿಸಿಆರ್‌ಐ ವಿಜ್ಞಾನಿಗಳಲ್ಲಿ ವಿನಂತಿಸಿದ್ದು ಮುಂದಿನ ವಾರ ಅವರು ಸ್ಥಳಕ್ಕೆ ಭೇಟಿ ನೀಡಬಹುದು.
– ಎಚ್‌. ಆರ್‌. ನಾಯಕ್‌,
ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ
ಮಂಗಳೂರು

ಧನಂಜಯ ಮೂಡಬಿದಿರೆ

Advertisement

Udayavani is now on Telegram. Click here to join our channel and stay updated with the latest news.

Next