ಮೂಡುಬಿದಿರೆ: “ಕೊರತೆಗಳ ರೋಗ ಪೀಡಿತ ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರ’ ಶೀರ್ಷಿಕೆಯಡಿ ಉದಯವಾಣಿ ಸುದಿನದಲ್ಲಿ ಡಿ. 22 ರಂದು ಪ್ರಕಟವಾದ ಸಚಿತ್ರ ವರದಿಯನ್ನು ಓದುಗರೊಬ್ಬರು ಮುಖ್ಯ ಮಂತ್ರಿಗಳ ಕಾರ್ಯಾಲಯಕ್ಕೆ ಮಿಂಚಂಚೆ ಮೂಲಕ ಶುಕ್ರವಾರವೇ ರವಾನಿಸಿದ್ದಾರೆ.
ಕೂಡಲೇ ಮುಖ್ಯಮಂತ್ರಿಗಳ ಕಾರ್ಯದರ್ಶಿಯವರು “ಮುಂದಿನ ಅಗತ್ಯ ಕ್ರಮಕ್ಕಾಗಿ ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ’ ವರದಿಯನ್ನು ಕಳುಹಿಸಿದ್ದಾರೆನ್ನಲಾಗಿದ್ದು, ಅದರ ಪರಿಣಾಮ ವರದಿಯ ಪ್ರತಿ ಮಿಂಚಂಚೆ ಮೂಲಕ ದ.ಕ. ಜಿಲ್ಲಾಧಿಕಾರಿ, ದ.ಕ. ಜಿ. ಪಂ. ಸಿಇಒ ಅವರಿಗೂ ರವಾನೆಯಾಗಿರುವುದಾಗಿ ಅಧಿಕೃತ ಮಾಹಿತಿ ಲಭಿಸಿದೆ.
ಆಡಳಿತ ವೈದ್ಯಾಧಿಕಾರಿ, ಹಿರಿಯ ವೈದ್ಯಾಧಿಕಾರಿ ಸಹಿತ ಇರುವ 53 ಹುದ್ದೆಗಳಲ್ಲಿ 31 ಹುದ್ದೆಗಳು ಖಾಲಿ ಇರುವುದೂ ಸೇರಿದಂತೆ ಆಸ್ಪತ್ರೆಯ ದುಃಸ್ಥಿತಿಯ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಇದೇ ಸಂದರ್ಭದಲ್ಲಿ ಮೂಡಬಿದಿರೆಯ ಶಿಕ್ಷಣ ಸಂಸ್ಥೆಯ ಕಾರ್ಯಕ್ರಮಕ್ಕೆ ಬಂದಿದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಕೇಂದ್ರಕ್ಕೆ ಭೇಟಿ ನೀಡುವುದಾಗಿ ಹೇಳಿದ್ದರು. ಹಾಗಾಗಿ ಎಲ್ಲರೂ ಕೇಂದ್ರದಲ್ಲಿ ಕಾಯುತ್ತ ಕುಳಿತಿದ್ದರೆ ಸಚಿವರು ಕಾರ್ಯಕ್ರಮ ಮುಗಿಸಿ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡದೇ ಮಂಗಳೂರಿಗೆ ತೆರಳಿರುವುದು ಗಮನಕ್ಕೆ ಬಂದಿತು.
ಸಚಿವರು ಊರಿಗೆ ಬಂದರೂ ಕೇಂದ್ರಕ್ಕೆ ಭೇಟಿ ನೀಡಿ ಅದರ ಸುಧಾರಣೆಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸುವ ಬದಲು ಹಾಗೆಯೇ ತೆರಳಿದ್ದು ಸರಿಯಲ್ಲ ಎಂಬ ಅಭಿಪ್ರಾಯ ಸಾರ್ವಜನಿಕರದ್ದು.