Advertisement

ರಜಪೂತ ಠಾಕೂರ ಜನಾಂಗದ ಕೈಚಳಕ

06:03 AM Jan 14, 2019 | |

ಮೂಡುಬಿದಿರೆ: ಸ್ವರಾಜ್ಯ ಮೈದಾನದ ಪುರಸಭಾ ಮಾರುಕಟ್ಟೆಯ ಪಕ್ಕದಲ್ಲಿರುವ ಜಾಗದಲ್ಲಿ 10-12 ಮಂದಿ ಕಮ್ಮಾರಿಕೆಯ ಕುಶಲಕರ್ಮಿಗಳು ಚಟುವಟಿಕೆ ಪ್ರಾರಂಭಿಸಿದ್ದಾರೆ. ಅಂದಹಾಗೆ ಇವರು ಮಧ್ಯಪ್ರದೇಶದ ಹೊಸಂಗಾಬಾದ್‌ ಜಿಲ್ಲೆಯ ಪಿತರಿಯಾ ಗ್ರಾಮದ ರಜಪೂತ ಠಾಕೂರ ಜನಾಂಗದವರು. ಕಮ್ಮಾರಿಕೆ ಇವರ ಕುಲಕಸುಬು.

Advertisement

ಮೈದಾನದಲ್ಲಿಯೇ ಹೊಂಡ ಮಾಡಿಕೊಂಡು ಇದ್ದಿಲು ತುಂಬಿಸಿ ಕುಲುಮೆ ಸಿದ್ದಮಾಡಿಕೊಂಡು ಘನವಾಹನಗಳ ಸ್ಪ್ರಿಂಗ್‌ಪ್ಲೇಟ್, ಶಾಫ್ಟ್‌ ಭಾಗಗಳನ್ನು ಬೆಂಕಿಯಲ್ಲಿ ಕಾಯಿಸಿ ಮೆದುವಾಗಿಸಿದ ತತ್‌ಕ್ಷಣ ಅದನ್ನು ಬೇಕಾದ ಆಕಾರಕ್ಕೆ ಹೊಂದಿಸಿಕೊಂಡು ಕತ್ತಿ, ಸುತ್ತಿಗೆ, ಮಚ್ಚು ಹೀಗೆ ಕಬ್ಬಿಣದ ತರಾವಳಿ ವಸ್ತುಗಳನ್ನು ನೋಡನೋಡುತ್ತಿದ್ದಂತೆಯೇ ತಯಾರಿಸುವ ಈ ಕುಶಲಿಗರಿಗೆ ಬಿಸಿಲ ಪರಿವೆಯೇ ಇಲ್ಲ. ಈ ಬಯಲು ಕಾರ್ಯಾಗಾರಕ್ಕೆ ಆಕಾಶವೇ ಸೂರು.

ಕಮ್ಮಾರಿಕೆಯೇ ಜೀವನ
ಊರಲ್ಲಿ ಸ್ವಲ್ಪ ಜಮೀನಿದೆ. ಆದರೆ ನೀರಿನ ಸಮಸ್ಯೆಯಿಂದಾಗಿ ಹೇಳಿಕೊಳ್ಳುವ ಬೆಳೆ ತೆಗೆಯಲು ಆಗುತ್ತಿಲ್ಲ. ಹಾಗಾಗಿ ಇವರು ತಮ್ಮ ಕಮ್ಮಾರಿಕೆಯನ್ನೇ ನೆಚ್ಚಿಕೊಂಡು ಊರೂರು ಅಲೆದಾಡುತ್ತ ಕಬ್ಬಿಣದ ಹತ್ಯಾರ್‌ಗಳನ್ನು ತಯಾರಿಸುವ ಕಾಯಕ ನಡೆಸುತ್ತ ಬಂದಿದ್ದಾರೆ. ನೋಡಲು ಮೂರು ನಾಲ್ಕು ಗುಂಪುಗಳಂತೆ ಕಂಡರೂ ಇವರೆಲ್ಲ ಒಂದೇ ಕುಟುಂಬ ಪರಿವಾರದವರು.

ಶಂಕರ್‌ ತಂಡದ ಹಿರಿಯವರು. ಅವರ ಪುತ್ರರಲ್ಲಿ ರಾಮ್‌ ಓದಿಲ್ಲ; ಚೋಟು ಏಳನೇ ತರಗತಿಗೆ ಓದು ಮುಗಿಸಿ ತಂದೆಯೊಂದಿಗೆ ಕಮ್ಮಾರಿಕೆ ನಡೆಸುತ್ತಿದ್ದಾರೆ. ಶಂಕರ್‌ ಅವರ ಪುತ್ರರು, ಪುತ್ರಿಯರು, ಸೊಸೆಯಂದಿರು, ಮೊಮ್ಮಕ್ಕಳು ಎಲ್ಲರೂ ತಂಡದಲ್ಲಿದ್ದಾರೆ.

ರಜೆಯಲ್ಲಿ ಕೆಲಸ
ಈ ಪುಟ್ಟ ಮಕ್ಕಳ ಶಿಕ್ಷಣದ ಕಥೆ ಏನು ? ಎಂದು ಕೇಳಿದಾಗ ಆ ಮಕ್ಕಳ ಐಡಿ ಕಾರ್ಡ್‌ ತೋರಿಸಿದ ಚೋಟು ‘ನಮ್ಮ ಮಕ್ಕಳು ಒಂದೂವರೆ ತಿಂಗಳ ರಜೆಯಲ್ಲಿ ನಮ್ಮೊಂದಿಗೆ ಇದ್ದಾರೆ. ಇವರು ಊರಲ್ಲಿ ಶಾಲೆಗೆ ಹೋಗುತ್ತಿದ್ದಾರೆ ಎಂದರು.

Advertisement

ಕರ್ನಾಟಕ ಅಚ್ಚುಮೆಚ್ಚು
ಕರ್ನಾಟಕ ಇವರಿಗೆ ಹಿಡಿಸಿದೆ. ಇಲ್ಲಿನ ಜನರೆಲ್ಲ ಉತ್ತಮ ನಡೆ ನುಡಿಯವರು, ವ್ಯಾಪಾರ ಒಳ್ಳೆಯದಾಗಿ ನಡೆಯುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಇನ್ನೊಂದೆರಡು ವಾರಗಳಲ್ಲಿ ಹುಬ್ಬಳ್ಳಿ ಮೂಲಕ ಇವರು ಸ್ವಸ್ಥಾನ ಸೇರುತ್ತಾರಂತೆ.

ಊರಿನಿಂದ ಊರಿಗೆ
ಶಂಕರ್‌ ಪರಿವಾರದವರು ಒಂದು ಊರಿನಲ್ಲಿ ಹೆಚ್ಚೆಂದರೆ ಮೂರು ನಾಲ್ಕು ದಿನ ನಿಲ್ಲತ್ತಾರೆ. ಮುಂದೆ ಐದಾರು ಕಿಲೋಮೀಟರ್‌ ದೂರದ ಊರಿನತ್ತ ಸಾಗುತ್ತಾರೆ. ಇದೊಂದು ರೀತಿಯಲ್ಲಿ ‘ಮೊಬೈಲ್‌ ಕಮ್ಮಾರ ಸಾಲೆ’ ಇದ್ದಂತಿದೆ. ಬಯಲಲ್ಲೇ ಅಡುಗೆ ಮಾಡಿಕೊಂಡು, ಅಲ್ಲೇ ಗುಡಾರ ಎಳೆದುಕೊಂಡು ನಿದ್ರಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next