ಮೂಡಬಿದಿರೆ: ಬಹುಕಾಲದಿಂದ ನಿರೀಕ್ಷಿಸುತ್ತಿದ್ದ ಮೂಡಬಿದಿರೆ ತಾಲೂಕು ಆಡಳಿತ ಸೌಧದ ನಿರ್ಮಾಣ ಬಹುತೇಕ ಪೂರ್ಣಗೊಂಡಿದೆ. ಈಗಿರುವ ತಾಲೂಕು ಕಚೇರಿ ಪಕ್ಕದಲ್ಲೇ ಒಂದೂವರೆ ವರ್ಷದೊಳಗಾಗಿ ಮೈದಳೆದ ಈ ಸೌಧ ಎ. 27ರಂದು ಉದ್ಘಾಟನೆಗೆ ಸಜ್ಜಾಗುತ್ತಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಆಗಮಿಸಲಿದ್ದಾರೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ತಿಳಿಸಿದರು.
ಶಾಸಕರ ಭವನ, ತಹಶೀಲ್ದಾರ್ ಕಚೇರಿ, ರೆಕಾರ್ಡ್ ರೂಮ್, ಚುನಾವಣ ಕಚೇರಿ, ಭೂಮಿ, ಸಬ್‌ರಿಜಿಸ್ಟರ್ ಸಹಿತ ವಿವಿಧ ಇಲಾಖೆಗಳ ಕಚೇರಿಗಳು, ಸಭಾಂಗಣ ಮೊದಲಾದ ವ್ಯವಸ್ಥೆಗಳೆಲ್ಲ, ಸಾಕಷ್ಟು ಗಾಳಿ, ಬೆಳಕು, ಜನರೇಟರ್, ಲಿಫ್ಟ್ ಮತ್ತು ಇತರ ಸೌಕರ್ಯಗಳೊಂದಿಗೆ ನೆಲೆಯಾಗಲಿವೆ. ಎರಡು ಎಕ್ರೆ ಪ್ರದೇಶದ ಪಶ್ಚಿಮ ಭಾಗದಲ್ಲಿ ಉತ್ತರಾಭಿಮುಖವಾಗಿ ನಿರ್ಮಾಣವಾಗಿರುವ ಈ ಆಡಳಿತ ಸೌಧದ ಸುತ್ತಲೂ ಉದ್ಯಾನವನ ನಿರ್ಮಿಸಲಾಗುತ್ತಿದ್ದು ಕಟ್ಟಡದ ಎದುರು ಪಾರ್ಕಿಂಗ್‌ಗೆ ಸಾಕಷ್ಟು ಸ್ಥಳಾವಕಾಶವಿದೆ.
ರಾಷ್ಟ್ರೀಯ ಹೆದ್ದಾರಿಯಿಂದ ಸಂಪರ್ಕ ರಸ್ತೆಯನ್ನು ವಿಸ್ತರಿಸಿ ನಿರ್ಮಿಸಲಾಗುತ್ತಿದೆ. ನ್ಯಾಯಾಲಯ, ಪ್ರವಾಸಿ ಮಂದಿರ, ಪುರಸಭೆ, ಆಸ್ಪತ್ರೆಗಳು, ಮೈದಾನ, ಮಾರುಕಟ್ಟೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಹಲವು ವಾಣಿಜ್ಯ ಸಂಕೀರ್ಣಗಳು, ಪೆಟ್ರೋಲ್ ಬಂಕ್ ಕಾರ್ಯಾಚರಿಸುತ್ತಿರುವ, ನಗರ ನಡುವೆ ನಿರ್ಮಾಣಗೊಂಡಿರುವ ತಾಲೂಕು ಆಡಳಿತ ಸೌಧದಿಂದ ಜನತೆಗೆ ಬಹಳಷ್ಟು ಅನುಕೂಲ ವಾಗಲಿದೆ ಎಂದು ವಿವರಿಸಿದರು.
ಆಡಳಿತ ಸೌಧ ಉದ್ಘಾಟನೆಯೊಂದಿಗೆ ಕ್ಷೇತ್ರದಲ್ಲಿ ನಡೆಯಲಿರುವ ಹಲವಾರು ಕಾರ್ಯಕ್ರಮಗಳಲ್ಲಿ ಕಂದಾಯ ಸಚಿವ ಆರ್. ಅಶೋಕ, ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ, ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ, ವಿವಿಧ ಜಿಲ್ಲೆಗಳ ಉಸ್ತುವಾರಿ ಸಚಿವರಾದ ವಿ. ಸುನಿಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಎಸ್. ಅಂಗಾರ , ಸಂಸದ ನಳಿನ್ ಕುಮಾರ್ ಸಹಿತ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.
ಪುರಸಭೆ ಅಧ್ಯಕ್ಷ ಪ್ರಸಾದ್ ಕುಮಾರ್, ಸ್ಥಾಯೀ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ, ಮುಡಾ ಅಧ್ಯಕ್ಷ ಮೇಘನಾಥ ಶೆಟ್ಟಿ, ಸದಸ್ಯ ಲಕ್ಷ್ಮಣ ಪೂಜಾರಿ, ಅಜಯ್ ರೈ ಸಹಿತ ಸದಸ್ಯರು, ಗುತ್ತಿಗೆದಾರ ಬಿಮಲ್‌ಕನ್‌ಸ್ಟ್ರಕ್ಷನ್‌ನವರು,ಕಂದಾಯ ಅಧಿಕಾರಿಗಳು ಉಪಸ್ಥಿತರಿದ್ದರು.
ವಿಶಿಷ್ಟ ವಾಸ್ತು ವಿನ್ಯಾಸ
ಆಡಳಿತ ಸೌಧದ ನಿರ್ಮಾಣದ ಪ್ರಗತಿಯನ್ನು ಶನಿವಾರ ವೀಕ್ಷಿಸಿದ ಶಾಸಕರು ಕರ್ನಾಟಕ ಹೌಸಿಂಗ್ ಬೋರ್ಡ್ ಮೇಲುಸ್ತುವಾರಿ, ಖಾಸಗಿ ಎಂಜಿನಿಯರ್‌ಗಳ ಸಲಹೆಗಳನ್ನು ಗಮನದಲ್ಲಿರಿಸಿಕೊಂಡು, ಪರಂಪರಾಗತ ಶೈಲಿಯಲ್ಲಿ ವಿಶಿಷ್ಟ ವಾಸ್ತು ವಿನ್ಯಾಸದೊಂದಿಗೆ 10 ಕೋ. ರೂ. ವೆಚ್ಚದಲ್ಲಿ ಸದ್ಯದ ಕಾಮಗಾರಿಗಳು ನಡೆದಿವೆ. ಇನ್ನೂ 2 ಕೋ. ರೂ. ವೆಚ್ಚದಲ್ಲಿ ಇದನ್ನು ಪೂರ್ಣ ಗೊಳಿಸಬಹುದು ಎಂದು ತಿಳಿಸಿದರು.