Advertisement

ಸಿದ್ದರಾಮಯ್ಯ ಅವರ ದಾಖಲೆಯ ಬಜೆಟ್‌ನತ್ತ ರಾಜ್ಯದ ಚಿತ್ತ

09:06 PM Jul 06, 2023 | Team Udayavani |

ರಾಜ್ಯದಲ್ಲಿ ಸಂಪೂರ್ಣ ಬಹುಮತದೊಂದಿಗೆ ಮರಳಿ ಅಧಿಕಾರಕ್ಕೇರಿರುವ ಕಾಂಗ್ರೆಸ್‌ ಸರಕಾರದ ಮೊದಲ ಬಜೆಟ್‌ ಶುಕ್ರವಾರ ಮಂಡನೆಯಾಗಲಿದೆ. ಹಣಕಾಸು ಖಾತೆಯನ್ನೂ ನಿರ್ವಹಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ 2023-24ನೇ ಸಾಲಿನ ಮುಂಗಡಪತ್ರವನ್ನು ಮಂಡಿಸಲಿದ್ದು ರಾಜ್ಯದ ಜನತೆಯಲ್ಲಿ ಕುತೂಹಲ ಮೂಡಿಸಿದೆ. ಚುನಾವಣೆಗೂ ಮುನ್ನ ಕಾಂಗ್ರೆಸ್‌ ರಾಜ್ಯದ ಜನರಿಗೆ ನೀಡಿದ್ದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಜತೆಯಲ್ಲಿ ಈಗಾಗಲೇ ಜಾರಿಯಲ್ಲಿರುವ ವಿವಿಧ ಅಭಿವೃದ್ಧಿ ಮತ್ತು ಜನ ಕಲ್ಯಾಣ ಯೋಜನೆಗಳಿಗೆ ಹಣ ಮೀಸಲಿಡುವುದು, ಹೊಸ ಯೋಜನೆಗಳಿಗೆ ಅನುದಾನ ಒದಗಿಸುವ ಅನಿವಾರ್ಯತೆಯಲ್ಲಿ ಸರಕಾರ ಸಿಲುಕಿದೆ.

Advertisement

ಇವೆಲ್ಲ ಯೋಜನೆಗಳು ಮತ್ತು ಕಾರ್ಯಕ್ರಮಗಳಿಗೆ ಅನುದಾನ ಹಂಚಿಕೆಯಲ್ಲಿ ಸಮತೋಲನ ಕಾಯ್ದುಕೊಳ್ಳುವ ಮತ್ತು ಆದಾಯ ಕ್ರೋಡೀಕರಣದ ಸವಾಲುಗಳು ಸಿದ್ದರಾಮಯ್ಯ ಅವರ ಪಾಲಿಗೆ ಹಗ್ಗದ ಮೇಲಿನ ನಡಿಗೆಯೇ ಸರಿ.

ಈವರೆಗೆ ರಾಜ್ಯದಲ್ಲಿ ಗರಿಷ್ಠ ಬಜೆಟ್‌ ಮಂಡನೆ ಮಾಡಿದ ದಾಖಲೆ ತಲಾ 13 ಬಜೆಟ್‌ಗಳನ್ನು ಮಂಡಿಸಿರುವ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಮತ್ತು ಸ್ವತಃ ಸಿದ್ದರಾಮಯ್ಯ ಅವರ ಹೆಸರಿನಲ್ಲಿದ್ದು, ಶುಕ್ರವಾರ ಸಿದ್ದರಾಮಯ್ಯ ಅವರು, 14ನೇ ಬಜೆಟ್‌ ಅನ್ನು ವಿಧಾನಸಭೆಯಲ್ಲಿ ಮಂಡಿಸುವ ಮೂಲಕ ಹೊಸ ದಾಖಲೆ ಬರೆಯಲು ಸಜ್ಜಾಗಿದ್ದಾರೆ.

ಸಿದ್ದರಾಮಯ್ಯ ಅವರು ಈವರೆಗೆ ಮಂಡಿಸಿದ ಬಜೆಟ್‌ಗಳಲ್ಲಿ ಆರ್ಥಿಕ ಶಿಸ್ತು ಕಾಯ್ದುಕೊಳ್ಳಲು ಆದ್ಯತೆ ನೀಡುತ್ತಲೇ ಬಂದಿದ್ದು ಕೆಲವೊಂದು ಸುಧಾರಣ ನೀತಿಯನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದರು. ಆದರೆ ಈ ಬಾರಿ ಸಿದ್ದರಾಮಯ್ಯ ಅವರ ಮುಂದೆ ಹತ್ತು ಹಲವು ಸವಾಲುಗಳಿರುವುದರಿಂದ ಯಾವ ರೀತಿಯಲ್ಲಿ ಸರಕಾರದ ಆದಾಯ ಮತ್ತು ವೆಚ್ಚದ ನಡುವೆ ಸಮತೋಲನ ಕಾಯ್ದುಕೊಳ್ಳುವ ಪ್ರಯತ್ನ ನಡೆಸಲಿದ್ದಾರೆ ಎಂಬುದೇ ಸದ್ಯದ ಕುತೂಹಲ.

ಪಂಚ ಗ್ಯಾರಂಟಿ ಯೋಜನೆಗಳಿಗೆ ಅಗತ್ಯ ಪ್ರಮಾಣದ ಹಣ ಹೊಂದಿಸಲೇ ಬೇಕಿದೆ. ಹೀಗಾಗಿ ಈ ಬಜೆಟ್‌ನಲ್ಲಿ ಮತ್ತಷ್ಟು ಜನಪ್ರಿಯ ಯೋಜನೆಗಳಿಗೆ ಸಿದ್ದರಾಮಯ್ಯ ಅವರು ಮಣೆ ಹಾಕುವ ಸಾಧ್ಯತೆ ತೀರಾ ವಿರಳವಾದರೂ ಮುಂದಿನ ವರ್ಷ ಲೋಕಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ಹಿಂದಿನ ಬಿಜೆಪಿ ಸರಕಾರದ ಎಲ್ಲ ಜನಪ್ರಿಯ ಯೋಜನೆಗಳನ್ನು ಸ್ಥಗಿತಗೊಳಿಸುವ ದುಸ್ಸಾಹಸಕ್ಕೆ ಕೈಹಾಕಲಾರರು. ಆದರೆ ಬಿಜೆಪಿ ಸರಕಾರ ಚುನಾವಣೆಗೂ ಮುನ್ನ ಮಂಡಿಸಿದ್ದ ಬಜೆಟ್‌ನಲ್ಲಿ ಘೋಷಿಸಿದ್ದ ಹೊಸ ಯೋಜನೆಗಳನ್ನು ಕೈಬಿಡಲಿರುವುದಂತೂ ಸ್ಪಷ್ಟ. ಈಗಾಗಲೇ ರಾಜ್ಯದ ಜನರನ್ನು ಬೆಲೆಯೇರಿಕೆ ಬಿಸಿ ತಟ್ಟತೊಡಗಿದೆ. ಅಗತ್ಯ ವಸ್ತುಗಳ ಬೆಲೆ ಇಳಿಕೆಗೆ ಪೂರಕವಾದ ಕ್ರಮಗಳನ್ನು ಸರಕಾರ ಕೈಗೊಂಡೀತು ಎಂಬುದು ಜನಸಾಮಾನ್ಯರ ನಿರೀಕ್ಷೆ. ರೈತಾಪಿ ವರ್ಗವಂತೂ ಬಜೆಟ್‌ನತ್ತ ಆಶಾವಾದದ ದೃಷ್ಟಿ ಬೀರಿದೆ.

Advertisement

ಆದಾಯ ಕ್ರೋಡೀಕರಣ ಸಿದ್ದರಾಮಯ್ಯ ಅವರ ಪಾಲಿಗಿರುವ ಗುರುತರ ಸವಾಲಾಗಿದೆ. ಆದಾಯ ಹೆಚ್ಚಿಸಿಕೊಳ್ಳಲು ಕೆಲವೊಂದು ವಲಯಗಳಿಂದ ಹೆಚ್ಚುವರಿಯಾಗಿ ಮತ್ತು

ಹೊಸ ಮೂಲಗಳನ್ನು ಹುಡುಕಲೇಬೇಕಿದೆ. ಅಷ್ಟು ಮಾತ್ರವಲ್ಲದೆ ತೆರಿಗೆ ಸಂಗ್ರಹವನ್ನು ಇನ್ನಷ್ಟು ಬಿಗಿಗೊಳಿಸುವುದು, ಸರಕಾರಿ ಇಲಾಖೆ ಮತ್ತು ಕಚೇರಿಗಳಲ್ಲಿ ಆದಾಯ ಸೋರಿಕೆ ತಡೆಗೆ ಕಟ್ಟುನಿಟ್ಟಿನ ಕ್ರಮ ಮತ್ತಿತರ ಸುಧಾರಣ ನೀತಿಗಳ ಮೂಲಕ ರಾಜ್ಯದ ಬೊಕ್ಕಸ ಮತ್ತು ಜನಸಾಮಾನ್ಯರ ಮೇಲೆ ಹೆಚ್ಚಿನ ಹೊರೆ ಬೀಳದಂತೆ ನೋಡಿಕೊಳ್ಳುವ ತಂತ್ರಗಾರಿಕೆಗೆ ಜೋತು ಬೀಳುವರೇ? ಎಂಬುದನ್ನು ಕಾದುನೋಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next