ಹೊಸದಿಲ್ಲಿ : ಈ ಬಾರಿಯ ಮುಂಗಾರು ಮಳೆ ಜೂನ್ 4ರಂದು ಕೇರಳ ಕರಾವಳಿಗೆ ಆಗಮಿಸಲಿವೆ ಎಂದು ಸ್ಕೈ ಮೆಟ್ ಹೇಳಿದೆ.
ಆದರೆ 2019ರ ಮುಂಗಾರು ಮಳೆ ಸಾಮಾನ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿ ಬೀಳಲಿದೆ ಎಂದು ಅದು ಅಂದಾಜಿಸಿದೆ.
ಇದರಿಂದಾಗಿ ದೇಶದ 2.6 ಟ್ರಿಲಿಯ ಡಾಲರ್‌ಗಳ ದೇಶದ ಆರ್ಥಿಕತೆಗೆ ಹೆಚ್ಚಿನ ಕೃಷಿ ಮತ್ತು ಆರ್ಥಿಕಾಭಿವೃದ್ಧಿಯ ಕೊಡುಗೆ ಸಲ್ಲುವ ಸಾಧ್ಯತೆಗಳು ಕ್ಷೀಣವಾಗಿವೆ.
ಮುಂಗಾರು ಮಳೆ ಸಾಮಾನ್ಯವಾಗಿ ಜೂನ್ 1ರಂದು ಕೇರಳ ಕರಾವಳಿ ಪ್ರವೇಶಿಸುವುದು ವಾಡಿಕೆ ಮತ್ತು ಜುಲೈ ಮಧ್ಯದೊಳಗೆ ಇಡಿಯ ದೇಶವನ್ನು ಅದು ವ್ಯಾಪಿಸುತ್ತದೆ. ಸಕಾಲದಲ್ಲಿ ಮುಂಗಾರು ಮಳೆ ಆಗಮಿಸಿದಲ್ಲಿ ದೇಶದಲ್ಲಿ ಭತ್ತ, ಸೋಯಾಬೀನ್ ಮತ್ತು ಹತ್ತಿ ಬೆಳೆ ಬಿತ್ತನೆ ಕಾರ್ಯಗಳು ಸಾಂಗವಾಗಿ ನಡೆಯಲು ಸಾಧ್ಯ.
2019ರಲ್ಲಿ ದೇಶದಲ್ಲಿ ದೀರ್ಘಾವಧಿ ಸರಾಸರಿ ಶೇ. 93ರಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ಸ್ಕೈಮೆಟ್ ಇಂದು ಬಿಡುಗಡೆಗೊಳಿಸಿರುವ ಹೇಳಿಕೆಯಲ್ಲಿ ತಿಳಿಸಿದೆ.
ಮುಂಗಾರು ಮಾರುತಗಳು ದೇಶದ ವಾರ್ಷಿಕ ಮಳೆಯ ಶೇ.70ರಷ್ಟನ್ನು ಸುರಿಸುತ್ತವೆ ಮತ್ತು ಏಶ್ಯದ ಮೂರನೇ ದೊಡ್ಡ ಕೃಷಿ ಆರ್ಥಿಕತೆಯಾಗಿರುವ ಭಾರತದ ಕೃಷಿ ರಂಗದ ಯಶಸ್ಸಿನಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ.