Advertisement

ಈ ವರ್ಷವೂ ಮಳೆ ಕಡಿಮೆ?

12:01 PM Mar 28, 2017 | Team Udayavani |

ಹೊಸದಿಲ್ಲಿ: ಕರ್ನಾಟಕ, ಕೇರಳ ಸಹಿತ ವಿವಿಧ ಭಾಗಗಳಲ್ಲಿ ಮಳೆ ಕಡಿಮೆಯಾಗಿದ್ದ ಪರಿಣಾಮ ಕುಡಿಯುವ ನೀರಿಗೂ ಹಾಹಾಕಾರ ಸೃಷ್ಟಿಯಾಗಿದೆ. ಏತನ್ಮಧ್ಯೆ ಈ ವರ್ಷವೂ ಮಳೆ ಕಡಿಮೆ ಇರಬಹುದು ಎಂಬ ಆಘಾತಕಾರಿ ಸುದ್ದಿ ಬಂದಿದೆ. ಸ್ಕೈಮೆಟ್‌ ಖಾಸಗಿ ಹವಾಮಾನ ಸಂಸ್ಥೆ ಈ ಬಾರಿ ಮುಂಗಾರು ಸಾಮಾನ್ಯಕ್ಕಿಂತ ಕಡಿಮೆ ಇರಲಿದೆ ಎಂದು ಹೇಳಿದೆ. ಇದಕ್ಕೆ ಕಾರಣ ಎಲ್‌ನಿನೋ ಎಫೆಕ್ಟ್ ಎಂದಿದೆ. ಜೂನ್‌ – ಸೆಪ್ಟಂಬರ್‌ ಅವಧಿಯಲ್ಲಿ ಭಾರತದಲ್ಲಿ ಮುಂಗಾರು ಮಳೆ ಸುರಿಯುತ್ತದೆ. ಈ ಬಾರಿ ಶೇ. 95 ಮಾತ್ರ ಮಳೆ ಸುರಿಯಲಿದೆ. ದೀರ್ಘಾವಧಿಗೆ ಇದರ ಪ್ರಮಾಣ 887 ಮೀ.ಮೀ. ಆಗಿರಲಿದೆ ಎಂದು ಸ್ಕೈಮೆಟ್‌ ಹೇಳಿದೆ. 

Advertisement

ಸ್ಕೈಮೆಟ್‌ ಮುಂಗಾರುಪೂರ್ವ ಸೂಚನೆ ಪ್ರಕಾರ ಈ ವರ್ಷ ಪೂರ್ವ ಭಾರತ, ಒಡಿಶಾ, ಝಾರ್ಖಂಡ್‌, ಪಶ್ಚಿಮ ಬಂಗಾಲದಲ್ಲಿ  ಮಾತ್ರ ಉತ್ತಮ ಮಳೆಯಾಗಲಿದೆ ಎಂದಿದೆ. ದೇಶದಲ್ಲಿ ಶೇ. 50 ಮಳೆ ಸಾಮಾನ್ಯ ಇರುವ ಸಾಧ್ಯತೆ (ದೀರ್ಘಾವಧಿಯಲ್ಲಿ ಶೇ. 96ರಿಂದ ಶೇ. 104 ಮಳೆ ಸಾಧ್ಯತೆ), ಶೇ. 25 ಮಳೆ ಕಡಿಮೆ ಬರುವ ಸಾಧ್ಯತೆ (ದೀರ್ಘಾವಧಿಯಲ್ಲಿ ಶೇ. 90ರಿಂದ ಶೇ. 95 ಮಳೆ ಸಾಧ್ಯತೆ) ಮತ್ತು ಶೇ. 15 ಬರಗಾಲ (ದೀರ್ಘಾವಧಿಯಲ್ಲಿ ಶೇ. 90ಕ್ಕಿಂತಲೂ ಹೆಚ್ಚು  ಮಳೆ ಸಾಧ್ಯತೆ) ಇದೆ ಎಂದು ಹೇಳಿದೆ.

ಏನಿದು ಎಲ್‌ನಿನೋ?
ಪೆಸಿಫಿಕ್‌ ಸಾಗರದ ಸಮುದ್ರ ಮೇಲ್ಮೈ ಉಷ್ಣಾಂಶ, ಸರಾಸರಿ ತಾಪಮಾನಕ್ಕಿಂತ ಹೆಚ್ಚಾಗಿ ದೀರ್ಘ‌ಕಾಲಕ್ಕೆ ಮುಂದುವರಿದರೆ ಅದು ಎಲ್‌ನಿನೋ. ಪೆಸಿಫಿಕ್‌ ಸಾಗರದ ಪೂರ್ವ – ಮಧ್ಯದ ನಿರ್ದಿಷ್ಟ ಭಾಗದಲ್ಲಿ ಈ ಸರಾಸರಿ ಉಷ್ಣಾಂಶ 3 ತಿಂಗಳು ಮುಂದುವರಿದರೆ ಅದು ಎಲ್‌ನಿನೋ ಲಕ್ಷಣ. ಎಲ್‌ನಿನೋ ಸುಮಾರು 9 ತಿಂಗಳಿಂದ 2 ವರ್ಷಗಳಿಗೆ ಮುಂದುವರಿಯುತ್ತದೆ. 2ರಿಂದ 7 ವರ್ಷಗಳ ಅವಧಿಯಲ್ಲಿ ಸಂಭವಿಸುತ್ತದೆ. ಇದರಿಂದ ಭಾರತದ ಮುಂಗಾರು ಮತ್ತು ಚಳಿಗಾಲದ ಮೇಲೆ ದುಷ್ಪರಿಣಾಮ ಬೀರುತ್ತದೆ. ತಾಪಮಾನ ಏರುತ್ತದೆ.

ಜುಲೈ ಅನಂತರ ಎಲ್‌ ನಿನೋ ಪ್ರಭಾವ?
ಈ ಬಾರಿಯ ಮಾನ್ಸೂನ್‌ ವೇಳೆಯಲ್ಲಿ ಎಲ್‌ ನಿನೋ ಪ್ರಭಾವ ಬೀರುವುದು ಸತ್ಯ. ಆದರೆ ಇದು ಜುಲೈ ಅನಂತರದಲ್ಲಿ ಕಾಣಿಸಿಕೊಳ್ಳುವ ಸಂಭವವಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಜೂನ್‌ 1ಕ್ಕೆ ಕೇರಳಕ್ಕೆ ಮುಂಗಾರು ಆಗಮಿಸಲಿದ್ದು, ಜುಲೈ ಅನಂತರದಲ್ಲಿ ರಾಜಸ್ಥಾನದತ್ತ ಹೋಗಲಿದೆ. ಜತೆಗೆ ಈ ಬಾರಿ ಸರಿಯಾದ ಸಮಯಕ್ಕೆ ಮುಂಗಾರು ಪ್ರವೇಶವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮಹಾ ನಿರ್ದೇಶಕ ಕೆ.ಜೆ. ರಮೇಶ್‌ ಹೇಳಿದ್ದಾರೆ. ಇದಷ್ಟೇ ಅಲ್ಲ, ಅಮೆರಿಕದ ಹವಾಮಾನ ಸಂಸ್ಥೆ ಈ ಬಾರಿ ಎಲ್‌ ನಿನೋ ಪ್ರಭಾವ ಇರುವುದಿಲ್ಲ ಎಂದು ಹೇಳಿದ್ದು, ಮುಂಗಾರು ಆಶಾದಾಯಕ ವಾಗಿದೆ ಎಂದು ಅವರು ತಿಳಿಸಿದ್ದಾರೆ.

ಮಳೆ ಎಷ್ಟು ಕಡಿಮೆ ? 
ಜೂನ್‌ ತಿಂಗಳಲ್ಲಿ ಶೇ. 102ರಷ್ಟು ಮಳೆ (ಜೂನ್‌ನಲ್ಲಿ ದೀರ್ಘಾವಧಿ ಮಳೆ ಸುರಿವ ಪ್ರಮಾಣ 164 ಮಿ.ಮೀ.)

Advertisement

ಜುಲೈ ತಿಂಗಳಲ್ಲಿ ಶೇ. 94ರಷ್ಟು ಮಳೆ (ಜುಲೈನಲ್ಲಿ ದೀರ್ಘಾವಧಿ ಮಳೆ ಸುರಿವ ಪ್ರಮಾಣ 289 ಮಿ.ಮೀ)

ಆಗಸ್ಟ್‌ ತಿಂಗಳಲ್ಲಿ ಶೇ. 93ರಷ್ಟು ಮಳೆ (ಆಗಸ್ಟ್‌ನಲ್ಲಿ ದೀರ್ಘಾವಧಿ ಮಳೆ ಸುರಿವ ಪ್ರಮಾಣ 261 ಮಿ.ಮೀ.)

ಸೆಪ್ಟಂಬರ್‌ ತಿಂಗಳಲ್ಲಿ ಶೇ. 93ರಷ್ಟು ಮಳೆ (ದೀರ್ಘಾವಧಿ ಮಳೆ ಸುರಿವ ಪ್ರಮಾಣ 173 ಮಿ.ಮೀ.)

Advertisement

Udayavani is now on Telegram. Click here to join our channel and stay updated with the latest news.

Next