Advertisement
ಈ ಸೊಪ್ಪು ಆರೋಗ್ಯಕ್ಕೆ ಬಹಳ ಒಳ್ಳೆಯದು. ಅಲ್ಲದೇ ಇದರಲ್ಲಿ ಜೌಷಧೀಯ ಗುಣಗಳನ್ನು ಹೊಂದಿದ್ದು ಆಯುರ್ವೇದದಲ್ಲಿ ಇದನ್ನು ಉಪಯೋಗಿಸುತ್ತಾರೆ. ಈ ಸೊಪ್ಪಿನಿಂದ ದೋಸೆ, ಪ್ರತೋಡೆ, ವಡೆ, ಸುಕ್ಕ, ಪಲ್ಯ… ಹೀಗೆ ನಾನಾ ಬಗೆಯ ತಿಂಡಿ-ತಿನಿಸುಗಳನ್ನು ಮಾಡುತ್ತಾರೆ.
ಬೇಕಾಗುವ ಸಾಮಗ್ರಿಗಳು
ತಗತೆ ಸೊಪ್ಪು(ಚಿಗುರು ಎಲೆ)-4 ಕಪ್(ಸಣ್ಣದಾಗಿ ಹೆಚ್ಚಿದ್ದು),ಬೆಳ್ತಿಗೆ ಅಕ್ಕಿ-ಅರ್ಧ ಕಪ್(2ಗಂಟೆ ನೆನೆಸಿದ ಅಕ್ಕಿ),ತೊಗರಿ ಬೇಳೆ-1/4 ಕಪ್(2 ಗಂಟೆ ನೆನೆಸಿದ ಬೇಳೆ), ಒಣಮೆಣಸು (ಬ್ಯಾಡಗಿಮೆಣಸು)-6ರಿಂದ8, ತೆಂಗಿನ ತುರಿ-1/4ಕಪ್, ಕೊತ್ತಂಬರಿ-2ಚಮಚ, ಹುಣಸೇ ಹಣ್ಣು(ಲಿಂಬೆ ಗಾತ್ರದಷ್ಟು), ಹಿಂಗಿನ ನೀರು ಸ್ವಲ್ಪ, ಎಣ್ಣೆ-ಕರಿಯಲು,ರುಚಿಗೆ ತಕ್ಕಷ್ಟು ಉಪ್ಪು.
Related Articles
ಮೊದಲಿಗೆ ಚಿಗುರಿದ ತಗತೆ ಎಲೆಗಳನ್ನು ಬಿಡಿಸಿ ಚೆನ್ನಾಗಿ ತೊಳೆದು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ. ನಂತರ ಒಂದು ಮಿಕ್ಸಿಜಾರಿಗೆ ನೆನೆಸಿದ ಅಕ್ಕಿ,ತೊಗರಿ ಬೇಳೆ, ಒಣಮೆಣಸು, ಕೊತ್ತಂಬರಿ, ಹುಣಸೇ ಹಣ್ಣು ಹಾಗೂ ತೆಂಗಿನ ತುರಿಯನ್ನು ಹಾಕಿ ಸ್ವಲ್ಪ ನೀರನ್ನು ಸೇರಿಸಿ ರುಬ್ಬಿಕೊಳ್ಳಿ (ನುಣ್ಣಗೆ ರುಬ್ಬಬಾರದು). ರುಬ್ಬಿಟ್ಟ ಮಸಾಲೆಗೆ ಸ್ವಲ್ಪ ಹಿಂಗಿನ ನೀರನ್ನು ಬೆರೆಸಿ ಅದಕ್ಕೆ ತಗತೆ ಸೊಪ್ಪನ್ನು ಹಾಕಿ, ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ತದನಂತರ ಒಲೆಯ ಮೇಲೆ ಒಂದು ಬಾಣಲೆಯಿಟ್ಟು ಎಣ್ಣೆ ಹಾಕಿ ಕಾದನಂತರ ಮಾಡಿಟ್ಟ ಹಿಟ್ಟನ್ನು ಚಿಕ್ಕ-ಚಿಕ್ಟ ಉಂಡೆಗಳನ್ನಾಗಿ ಮಾಡಿ ತೆಳ್ಳಗೆ ತಟ್ಟಿ ಎಣ್ಣೆಯಲ್ಲಿ ಕರಿದರೆ ರುಚಿಕರವಾದ ಆರೋಗ್ಯಭರಿತ ತಗತೆ ಸೊಪ್ಪಿನ ವಡೆ ಸವಿಯಲು ಸಿದ್ಧ.
Advertisement
ತಗತೆ ಸೊಪ್ಪಿನ ದೋಸೆಬೇಕಾಗುವ ಸಾಮಗ್ರಿಗಳು
ಬೆಳ್ತಿಗೆ ಅಕ್ಕಿ-2ಕಪ್, ತಗತೆ ಸೊಪ್ಪು-1ಕಪ್, ಕಡ್ಲೆಬೇಳೆ-2ಚಮಚ, ಉದ್ದಿನ ಬೇಳೆ-2ಚಮಚ, ಮೆಂತೆ-1/4ಚಮಚ, ಕೊತ್ತಂಬರಿ-2ಚಮಚ, ಜೀರಿಗೆ-1ಚಮಚ, ಒಣಮೆಣಸು-7ರಿಂದ8, ಎಣ್ಣೆ-3ಚಮಚ, ಹುಣಸೇ ಹಣ್ಣು-ಬೆಲ್ಲ(ನೆಲ್ಲಿ ಗಾತ್ರದಷ್ಟು), ಕರಿಬೇವು-2ಎಸಳು, ತೆಂಗಿನ ತುರಿ-ಅರ್ಧಕಪ್, ಹಿಂಗು-ಸ್ವಲ್ಪ, ಅರಿಶಿನ ಪುಡಿ-ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು.
ಮೊದಲಿಗೆ ತಗತೆ ಸೊಪ್ಪನ್ನು ಚೆನ್ನಾಗಿ ತೊಳೆದು ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಿ. ನಂತರ ಒಂದು ಬಾಣಲೆಗೆ 3 ಚಮಚ ಎಣ್ಣೆ ಹಾಕಿ ಅದಕ್ಕೆ ಕಡ್ಲೆಬೇಳೆ, ಉದ್ದಿನಬೇಳೆ, ಮೆಂತೆ ಹಾಕಿ ಸ್ವಲ್ಪ ಕೆಂಪಾಗುವ ತನಕ ಹುರಿಯಿರಿ. ತದನಂತರ ಕೊತ್ತಂಬರಿ, ಜೀರಿಗೆ, ಒಣಮೆಣಸು, ಕರಿಬೇವಿನ ಎಸಳು ಹಾಕಿ ಪುನಃ ಸ್ವಲ್ಪ ಹುರಿಯಿಟ್ಟುಕೊಳ್ಳಿ. ನಂತರ ಒಂದು ಮಿಕ್ಸಿಜಾರಿಗೆ ತೆಂಗಿನ ತುರಿ, ಹಿಂಗು, ಹುಣಸೇ ಹಣ್ಣು, ಬೆಲ್ಲ, ಅರಿಶಿನ, ನೆನೆಸಿಟ್ಟ ಅಕ್ಕಿ,ರುಚಿಗೆ ತಕ್ಕಷ್ಟು ಉಪ್ಪು ಮತ್ತು ಮಾಡಿಟ್ಟ ಮಸಾಲೆಯನ್ನು ಹಾಕಿ,ಸ್ವಲ್ಪ ನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ತದನಂತರ ಹೆಚ್ಚಿಟ್ಟ ತಗತೆ ಸೊಪ್ಪನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.ನಂತರ ಒಲೆಯ ಮೇಲೆ ಕಾವಲಿ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಚ್ಚಿ,ಸೌಟಿನಲ್ಲಿ ಮಾಡಿಟ್ಟ ತಗತೆ ಸೊಪ್ಪಿನ ದೋಸೆ ಹಿಟ್ಟನ್ನು ಕಾವಲಿ ಮೇಲೆ ಹಾಕಿ ಎರಡು ಕಡೆ ಎಣ್ಣೆ ಹಾಕಿ ಬೇಯಿಸಿದರೆ ಸ್ವಾದಿಷ್ಟಕರವಾದ ತಗತೆ ಸೊಪ್ಪಿನ ದೋಸೆ ಸವಿಯಲು ಸಿದ್ಧ. -ಶ್ರೀರಾಮ್ ಜಿ ನಾಯಕ್