ಧಾರವಾಡ: ಜಿಲ್ಲೆಯಲ್ಲಿ ಈವರೆಗೆ ಮುಂಗಾರು ಪೂರ್ವ ಮಳೆಯು ವಾಡಿಕೆಗಿಂತ ಅಲ್ಪ ಪ್ರಮಾಣದಲ್ಲಿ ಹೆಚ್ಚಾಗಿದೆ. ಹೆಸರು ಮತ್ತು ಸೋಯಾಬೀನ್ ಬಿತ್ತನೆ ಬೀಜಗಳಿಗೆ ಸಾಕಷ್ಟು ಬೇಡಿಕೆ ಇದ್ದು, ಬೇಡಿಕೆಗನುಸಾರವಾಗಿ ಬೀಜ ಪೂರೈಸಬೇಕು ಎಂದು ಡಿಸಿ ದೀಪಾ ಚೋಳನ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಡಿಸಿ ಕಚೇರಿಯಲ್ಲಿ ಗುರುವಾರ ನಡೆದ ಮುಂಗಾರು ಹಂಗಾಮಿನ ಬಿತ್ತನೆ ಚಟುವಟಿಕೆಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿತರಣಾ ಕೇಂದ್ರಗಳಲ್ಲಿ ಅನಗತ್ಯವಾಗಿ ಜನಸಂದಣಿ ಉಂಟಾಗುವುದನ್ನು ತಡೆಯಲು ರೈತರಿಗೆ ಮುಂಚಿತವಾಗಿಯೇ ಟೋಕನ್ ನೀಡಿ, ನಿಗದಿತ ದಿನಾಂಕಗಳಂದು ಆಗಮಿಸಿ ಬೀಜ ಪಡೆಯಲು ಸೂಚಿಸಬೇಕು. ನಿಗದಿಪಡಿಸಿದ ದಿನಗಳಂದು ಬೀಜ ದಾಸ್ತಾನು ಇರುವಂತೆ ಕ್ರಮ ವಹಿಸಬೇಕು. ರಸಗೊಬ್ಬರ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗಬಾರದು. ಅಧಿಕ ಬೀಜದ ಬೇಡಿಕೆ ಇದ್ದರೆ ಕೂಡಲೇ ಸರ್ಕಾರಕ್ಕೆ ಕೋರಿಕೆ ಪ್ರಸ್ತಾವನೆ ಸಲ್ಲಿಸಬೇಕು. ಲಭ್ಯವಿರುವ ಜಿಲ್ಲೆಗಳಿಂದ ಖರೀದಿಸಬೇಕು ಎಂದು ಸೂಚಿಸಿದರು.
ಜಿಪಂ ಸಿಇಒ ಡಾ| ಬಿ.ಸಿ. ಸತೀಶ ಮಾತನಾಡಿ, ಮುಂಗಾರು ಮಳೆ ಆಧರಿಸಿ ಹೆಸರು ಕಾಳಿನ ಬೇಡಿಕೆ ನಿರೀಕ್ಷೆಗಿಂತ ಹೆಚ್ಚಳವಾಗಬಹುದು. ಸೋಯಾಬೀನ್ ಬೀಜಗಳಿಗೆ ಬೇಡಿಕೆ ಇದೆ. ಶೇಂಗಾ ಮತ್ತಿತರ ಬೆಳೆಗಳ ಬೀಜಗಳನ್ನು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಇರುವುದನ್ನು ಖಚಿತಪಡಿಸಿಕೊಳ್ಳಬೇಕು. ಏಕಾಏಕಿಯಾಗಿ ರೈತರಿಂದ ಬೇಡಿಕೆ ಅಧಿಕವಾಗಿ, ಬೀಜ ವಿತರಣಾ ಕೇಂದ್ರಗಳಲ್ಲಿ ಜನದಟ್ಟಣೆ ಉಂಟಾಗುವ ಸಂಭವ ಕಂಡು ಬಂದರೆ ವಿವಿಧ ಇಲಾಖೆ ಸಿಬ್ಬಂದಿ ಸಹಕಾರ ಪಡೆದು ಪರಿಸ್ಥಿತಿ ನಿರ್ವಹಿಸಲು ಯೋಜಿಸಿರಬೇಕು ಎಂದರು.
ಜಂಟಿ ಕೃಷಿ ನಿರ್ದೇಶಕ ರಾಜಶೇಖರ ಬಿಜಾಪುರ ಮಾತನಾಡಿ, 2018-19ರಲ್ಲಿ ಹೆಸರು ಕಾಳು 905.4 ಕ್ವಿಂಟಲ್ ಗರಿಷ್ಠ ಮಾರಾಟವಾಗಿತ್ತು. ಪ್ರಸಕ್ತ ಸಾಲಿನಲ್ಲಿ ಈವರೆಗೆ 732 ಕ್ವಿಂಟಲ್ ಮಾರಾಟವಾಗಿದ್ದು, ಒಟ್ಟು 978.9 ಕ್ವಿಂಟಲ್ ಹೆಸರುಕಾಳು ಬೀಜಗಳಿಗೆ ಬೇಡಿಕೆ ನಿರೀಕ್ಷಿಸಲಾಗಿದೆ. ಸೋಯಾಬೀನ್ 2018-19ರಲ್ಲಿ 21322.3 ಗರಿಷ್ಠ ಪ್ರಮಾಣದಲ್ಲಿ ಮಾರಾಟವಾಗಿತ್ತು. ಪ್ರಸಕ್ತ ಸಾಲಿನಲ್ಲಿ ಈವರೆಗೆ 8088.7 ಕ್ವಿಂಟಲ್ ಮಾರಾಟವಾಗಿದ್ದು, ಒಟ್ಟು 14030 ಕ್ವಿಂಟಲ್ ಬೇಡಿಕೆ ನಿರೀಕ್ಷಿಸಲಾಗಿದೆ. ಕಳೆದ ವರ್ಷ 1589.1 ಕ್ವಿಂಟಲ್ ಶೇಂಗಾಬೀಜ ಮಾರಾಟವಾಗಿದೆ. ಪ್ರಸಕ್ತ ಸಾಲಿನಲ್ಲಿ ಈವರೆಗೆ 883.5 ಕ್ವಿಂಟಲ್ ಮಾರಾಟವಾಗಿದ್ದು, ಒಟ್ಟು 1664 ಕ್ವಿಂಟಲ್ ಬೇಡಿಕೆ ನಿರೀಕ್ಷಿಸಲಾಗಿದೆ ಎಂದು ವಿವರಿಸಿದರು. ಉಪವಿಭಾಗಾಧಿ ಕಾರಿ ಮಹಮ್ಮದ್ ಜುಬೇರ್, ತೋಟಗಾರಿಕೆ ಉಪನಿರ್ದೇಶಕ ಡಾ| ರಾಮಚಂದ್ರ ಮಡಿವಾಳರ ಇನ್ನಿತರರಿದ್ದರು.
ಜಿಪಿಎಸ್‌ಗೆ ಅಳವಡಿಸಲು ಸೂಚನೆ ಕಳೆದ ವರ್ಷ ಅತಿವೃಷ್ಟಿಯಿಂದಾಗಿ ಹಾನಿಗೀಡಾಗಿದ್ದ ಮನೆಗಳ ಪುನರ್‌ನಿರ್ಮಾಣ ಕಾರ್ಯ ಚುರುಕುಗೊಳಿಸಿ ಜಿಪಿಎಸ್‌ಗೆ ಅಳವಡಿಸಬೇಕು. ಜೂ. 3ರ ವರೆಗೆ ಎ ಕೆಟಗೇರಿಯ 110 ಮನೆಗಳ ನಿರ್ಮಾಣ ಆರಂಭವಾಗಿದೆ. ಇನ್ನು 8 ಮನೆಗಳ ನಿರ್ಮಾಣ ಕಾರ್ಯ ಕೂಡಲೇ ಪ್ರಾರಂಭಿಸಬೇಕು. ಬಿ ಕೆಟಗೇರಿಯಲ್ಲಿ 1466 ಮನೆಗಳ ನಿರ್ಮಾಣ ಕಾರ್ಯ ಪ್ರಾರಂಭವಾಗಿದ್ದರೆ, ಸಿ ಕೆಟಗೇರಿಯ 19170 ಮನೆಗಳಲ್ಲಿ ಈಗಾಗಲೇ ಬಹುತೇಕ ಮನೆಗಳ ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ. ಅವುಗಳನ್ನು ತ್ವರಿತವಾಗಿ ಜಿಪಿಎಸ್ ಮಾಡಬೇಕು ಎಂದು ಡಿಸಿ ದೀಪಾ ಚೋಳನ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಾಕಷ್ಟು ಪ್ರಮಾಣದ ಬೀಜ ದಾಸ್ತಾನಿದೆ. ರೈತರ ದಾಖಲೆಗಳನ್ನು ಗಣಕೀಕೃತ ಎಂಐಎಸ್ ವ್ಯವಸ್ಥೆಗೆ ದಾಖಲಿಸಲು ಸಮಯ ತೆಗೆದುಕೊಳ್ಳುತ್ತಿರುವುದರಿಂದ ವಿತರಣೆಯಲ್ಲಿ ಅಲ್ಲಲ್ಲಿ ವಿಳಂಬವಾಗುತ್ತಿದೆ. ಇದನ್ನು ಸರಿಪಡಿಸಲು ಹೆಚ್ಚುವರಿ ಡಾಟಾ ಎಂಟ್ರಿ ಆಪ್‌ರೇಟರ್‌ಗಳನ್ನು ನಿಯೋಜಿಸಲಾಗುತ್ತಿದೆ. ರೈತರು ಯಾವುದೇ ಆತಂಕಕ್ಕೆ ಒಳಗಾಗದೆ ಬೀಜಗಳನ್ನು ಪಡೆದು ಸಹಕರಿಸಬೇಕು.
–ದೀಪಾ ಚೋಳನ್, ಜಿಲ್ಲಾಧಿಕಾರಿ
ಜಿಲ್ಲೆಯ 14 ರೈತ ಸಂಪರ್ಕ ಕೇಂದ್ರಗಳು ಹಾಗೂ 15 ಹೆಚ್ಚುವರಿ ಮಳಿಗೆಗಳಲ್ಲಿ ಮುಂಗಾರು ಹಂಗಾಮಿನ ಬೀಜ ವಿತರಣೆ ಕಾರ್ಯಗಳು ನಡೆದಿವೆ. ಮುಂಗಾರಿನ ಜೂನ್ ಅಂತ್ಯದವರೆಗೆ 10,200 ಮೆಟ್ರಿಕ್ ಟನ್ ರಸಗೊಬ್ಬರದ ಬೇಡಿಕೆ ಇದೆ. ಪ್ರಸ್ತುತ 12,544 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನಿದೆ.
-ರಾಜಶೇಖರ ಬಿಜಾಪುರ, ಜಂಟಿ ಕೃಷಿ ನಿರ್ದೇಶಕ