ಬೆಂಗಳೂರು: ರಾಜ್ಯದಲ್ಲಿ ಕೆಲ ದಿನಗಳಿಂದ ಮಂಕಾಗಿದ್ದ ಮುಂಗಾರು ಕರಾವಳಿಯಲ್ಲಿ ಮತ್ತೆ ಚುರುಕುಗೊಂಡಿದೆ.
ಮುಂದಿನ ಎರಡು-ಮೂರು ದಿನಗಳಲ್ಲಿ ಆಯ್ದ ಭಾಗಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ.
ಘಟ್ಟಪ್ರದೇಶ ಮತ್ತು ಕರಾವಳಿಯ ಆಯ್ದ ಭಾಗಗಳಲ್ಲಿ ಬುಧವಾರ ಉತ್ತಮ ಮಳೆಯಾಗಿದ್ದು, ಉಳಿದೆಡೆ
ಮೋಡಕವಿದ ವಾತಾವರಣವಿತ್ತು. ಅಲ್ಲಲ್ಲಿ ತುಂತುರು ಮಳೆ ಹನಿದಿದೆ. ಇನ್ನೂ 2-3 ದಿನ ಇದೇ ವಾತಾವರಣ
ಮುಂದುವರಿಯುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈ ಮಧ್ಯೆ, ಗುರುವಾರ ಬೆಳಗ್ಗೆ ಉಡುಪಿಯಲ್ಲಿ ಅತಿ ಹೆಚ್ಚು 110 ಮಿ.ಮೀ. ಮಳೆದಾಖಲಾಗಿದೆ. ಕೊಲ್ಲೂರಿನಲ್ಲಿ 100, ಕಾರ್ಕಳ 90, ತೀರ್ಥಹಳ್ಳಿಯ ಆಗುಂಬೆಯಲ್ಲಿ 80, ದಕ್ಷಿಣ ಕನ್ನಡದ ಮೂಡಬಿದರೆ 70, ಕೋಟ 60, ಕುಂದಾಪುರ, ಸಿದ್ದಾಪುರ, ಕದ್ರಾ, ನೆಲಮಂಗಲದಲ್ಲಿ 40, ಧರ್ಮಸ್ಥಳ, ಕಮ್ಮರಡಿಯಲ್ಲಿ 30, ಶಿರಾಲಿ, ಗೇರುಸೊಪ್ಪ, ಗೋಕರ್ಣ, ಕ್ಯಾಸಲ್‌ರಾಕ್,ಬೀದರ್‌ನ ಔರಾದ್, ಬೆಂಗಳೂರು ಕೃಷಿ ವಿವಿ ಕ್ಯಾಂಪಸ್, ಮಾಗಡಿಯಲ್ಲಿ ತಲಾ 20 ಮಿ.ಮೀ. ಮಳೆಯಾಗಿದೆ.