ನವದೆಹಲಿ: ನಮ್ಮ ದೇಶದ ರೈತರ ಪಾಲಿಗೆ ನಿರ್ಣಾಯಕವಾಗಿರುವ ಮತ್ತು ಬಹುತೇಕ ಜನಜೀವನ ಅವಲಂಬಿತವಾಗಿರುವ ಮುಂಗಾರು ಮಳೆ ಮಾರುತಗಳು ಈ ವರ್ಷ ಜೂನ್ 4ನೇ ತಾರೀಖಿನ ಸುಮಾರಿಗೆ ಕೇರಳವನ್ನು ಪ್ರವೇಶಿಸಲಿದೆ ಎಂದು ಖಾಸಗಿ ಹವಾಮಾನ ಮುನ್ಸೂಚನಾ ಸಂಸ್ಥೆ ‘ಸ್ಕೈ ಮೆಟ್’ ಅಂದಾಜಿಸಿದೆ.
ಜೂನ್ 4ರಂದು ಕೇರಳವನ್ನು ಪ್ರವೇಶಿಸಲಿರುವ ಮುಂಗಾರು ಬಳಿಕ ಹಂತ ಹಂತವಾಗಿ ದೇಶದ ವಿವಿಧ ರಾಜ್ಯಗಳಿಗೆ ವ್ಯಾಪಿಸಲಿದೆ ಹಾಗೂ ಜೂನ್ 29ರ ಸುಮಾರಿಗೆ ರಾಷ್ಟ್ರ ರಾಜಧಾನಿಯನ್ನು ಪ್ರವೇಶಿಸಲಿದೆ ಎಂದು ಸ್ಕೈಮೆಟ್ ಮುನ್ಸೂಚನೆ ನೀಡಿದೆ.
ಇದೇ ಮೇ 22ರಂದು ಅಂಡಮಾನ್ ನಿಕೋಬಾರ್ ದ್ವೀಪ ಸಮೂಹಗಳನ್ನು ಪ್ರವೇಶಿಸಲಿರುವ ಮುಂಗಾರು ಮಾರುತಗಳು ಆ ಬಳಿಕ ಕೇರಳ ರಾಜ್ಯದ ಮೂಲಕ ಭಾರತವನ್ನು ಅಧಿಕೃತವಾಗಿ ಪ್ರವೇಶಿಸಲಿವೆ.
ಆದರೆ ಈ ಬಾರಿ ಸಾಮಾನ್ಯಕ್ಕಿಂತ ಕಡಿಮೆ ಪ್ರಮಾಣದ ಮಳೆಯ ಮುನ್ಸೂಚನೆಯನ್ನು ಸ್ಕೈಮೆಟ್ ನೀಡಿರುವುದು ಕಳವಳಕ್ಕೆ ಕಾರಣವಾಗಿದೆ. ದೇಶದ ಎಲ್ಲಾ ನಾಲ್ಕು ಭಾಗಗಳಲ್ಲಿ ಈ ವರ್ಷ ಸಾಮಾನ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮಳೆಯಾಗಲಿದೆ.
ಪೂರ್ವ ಭಾರತ, ಈಶಾನ್ಯ ಭಾರತದ ರಾಜ್ಯಗಳು ಹಾಗೂ ಮಧ್ಯ ಭಾರತದಲ್ಲಿ ಕಡಿಮೆ ಮಳೆಯಾಗಲಿದೆ ಹಾಗೂ ವಾಯುವ್ಯ ಮತ್ತು ದಕ್ಷಿಣ ಭಾರತದಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯನ್ನು ಈ ಮುನ್ಸೂಚನೆ ವ್ಯಕ್ತಪಡಿಸಿದೆ. ಜೂನ್ 4ರಂದು ಮುಂಗಾರಿನ ಪ್ರವೇಶವಾದರೂ ದಖ್ಖನ್ ಪ್ರಸ್ಥಭೂಮಿ ಭಾಗದಲ್ಲಿ ಮುಂಗಾರಿನ ಮುನ್ನಡೆ ನಿಧಾನವಾಗುವ ಸಾಧ್ಯತೆ ಇದೆ.
ಭಾರತದಂತಹ ಕೃಷಿ ಪ್ರಧಾನ ದೇಶದಲ್ಲಿ ಬಹುತೇಕ ಕೃಷಿ ಚಟುವಟಿಕೆಗಳು ಮಳೆಯನ್ನೇ ಅವಲಂಬಿಸಿರುವುದರಿಂದ ‘ಸಾಧಾರಣ ಮಳೆ’ಯ ಸುದ್ದಿ ನಮ್ಮ ರೈತರಿಗೆ ಶುಭ ಸುದ್ದಿಯಲ್ಲ ಎಂಬುದೇ ಬೇಸರದ ವಿಷಯ.