ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆಗಷ್ಟೇ ಅಲ್ಲ, ಈಗ ಮೋಡ ಬಿತ್ತನೆಗೂ ಅನಿಶ್ಚಿತತೆ ಮುಂದುವರಿದಿದೆ. ಸರ್ಕಾರದ ಮೋಡ ಬಿತ್ತನೆ ಯೋಜನೆ “ದೇವರು ವರ ಕೊಟ್ಟರೂ ಪೂಜಾರಿ ಕೊಟ್ಟಿಲ್ಲ’ ಎಂಬಂತಾಗಿದೆ. ಹೌದು! ಆಗಸ್ಟ್ ಮೊದಲ ವಾರದಲ್ಲಿ ಮೋಡ ಬಿತ್ತನೆ ಮಾಡಲು ಗ್ರಾಮೀಣಾಭಿವೃದ್ಧಿ ಇಲಾಖೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿತ್ತು. ಆದರೆ, ಮೋಡ ಬಿತ್ತನೆಗೆ ಬೇಕಾದ ರೆಡಾರ್‌ಗಳಿಗೆ ಸುಂಕ (ಕಸ್ಟಮ್ಸ್) ಇಲಾಖೆಯು ಇನ್ನೂ ಅನುಮತಿ ನೀಡಿಲ್ಲ. ಹಾಗಾಗಿ ಇನ್ನೂ ರೆಡಾರ್ ಗಳ ಅಳವಡಿಕೆ (ಇನ್ಸ್‌ಟಾಲೇಷನ್) ಪೂರ್ಣವಾಗಿ ಆಗಿಲ್ಲ. ಹಾಗಾಗಿ ಮೋಡ ಬಿತ್ತನೆಯ ಈ ಅನಿಶ್ಚಿತತೆ ಇನ್ನೂ ಒಂದಷ್ಟು ದಿನ ಮುಂದುವರಿಯಲಿದೆ.
ಮೋಡಗಳ ಸಾಂದ್ರತೆ ಆಧರಿಸಿ ಮೋಡ ಬಿತ್ತನೆಗೆ ಭಾರತೀಯ ವಿಜ್ಞಾನ ಸಂಸ್ಥೆ, ಐಐಟಿ ಪುಣೆ, ಐಐಟಿ ಮದ್ರಾಸ್ ಇಲ್ಲಿನ ಹವಾಮಾನ ತಜ್ಞರ ಜತೆಗೆ ಚರ್ಚಿಸಿ ಯೋಜನೆ ರೂಪಿಸಲಾಗಿದೆ. ಅದರಂತೆ ಕಾವೇರಿ, ಮಲಪ್ರಭಾ ಮತ್ತು ತುಂಗಭದ್ರಾ ಜಲಾಶಯಗಳನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರು, ಗದಗ ಹಾಗೂ ಯಾದಗಿರಿ ಜಿಲ್ಲೆಯ ಸುರಪುರದಲ್ಲಿ ರೆಡಾರ್ ಅಳವಡಿಕೆ ಮಾಡಿ ಮೋಡ ಬಿತ್ತನೆಗೆ ಕಾರ್ಯಕ್ರಮ ರೂಪಿಸಲಾಗಿದೆ. ಮೋಡ ಬಿತ್ತನೆಗಾಗಿ ಮೂರು ರೆಡಾರ್‌ಗಳು ಮತ್ತು ಏರ್‌ಕ್ರಾಫ್ಟ್ಗಳು ಬೆಂಗಳೂರಿಗೆ ಬಂದಿಳಿದಿವೆ. ಆದರೆ, ರೆಡಾರ್‌ಗಳಿಗೆ ಕಸ್ಟಮ್ಸ್ ಅನುಮತಿ ಸಿಕ್ಕಿಲ್ಲ.
ಆ.14ಕ್ಕೆ ಮೋಡ ಬಿತ್ತನೆ?: ಜಿಎಸ್‌ಟಿ ಜಾರಿಗೆ ಬರುವುದಕ್ಕಿಂತ ಮುಂಚೆ ರೆಡಾರ್‌ಗಳನ್ನು ಬುಕ್ ಮಾಡಲಾಗಿತ್ತು. ಅಲ್ಲದೇ ಹೊರಗಡೆಯಿಂದ ರೆಡಾರ್ ಗಳು ತರಬೇಕಾದರೆ, ಅದಕ್ಕೆ ಕಸ್ಟಮ್ಸ್ ಅನುಮತಿ ಬೇಕು. ಈಗಾಗಲೇ ರೆಡಾರ್‌ಗಳನ್ನು ಅಳವಡಿಸುವ ಕಾರ್ಯ ಪೂರ್ಣಗೊಂಡಿದೆ. ಸೋಮವಾರ ಸುಂಕ ಇಲಾಖೆಯ ಅನುಮತಿ ಸಿಗುವ ನಿರೀಕ್ಷೆಯಿದೆ. ಸೋಮವಾರವೇ ಪ್ರಾಯೋಗಿಕವಾಗಿ ಮೋಡ ಬಿತ್ತನೆ ಮಾಡಿ, ಮಂಗಳವಾರ ಪೂರ್ಣ ಪ್ರಮಾಣದಲ್ಲಿ ಮೋಡ ಬಿತ್ತನೆ ಕಾರ್ಯ ಆರಂಭಗೊಳ್ಳುವ ಸಾಧ್ಯತೆಯಿದೆ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೋಡ ಬಿತ್ತನೆ ಹೇಗೆ?
ಮೋಡ ಬಿತ್ತನೆ ಕಾರ್ಯದ ಅನುಷ್ಠಾನಕ್ಕೆ 35 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರು ಮೂಲದ ಹೊಯ್ಸಳ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಒಟ್ಟು 60 ದಿನ 300 ತಾಸು ಮೋಡ ಬಿತ್ತನೆ ನಡೆಯಲಿದೆ. ಬೆಂಗಳೂರು, ಗದಗ, ಹಾಗೂ ಸುರಪುರದಲ್ಲಿ ಸ್ಥಾಪಿಸಿದ ರೆಡಾರ್‌ಗಳಿಂದ ಮಾಹಿತಿ ಪಡೆದು
ಬೆಂಗಳೂರು, ಹುಬ್ಬಳ್ಳಿ ಹಾಗೂ ಬೀದರ್ ವಾಯು ನೆಲೆಗಳನ್ನು ಬಳಸಿಕೊಂಡು ಮೋಡ ಬಿತ್ತನೆ ಮಾಡಲಾಗುತ್ತದೆ. ದಟ್ಟ ಮೋಡಗಳು ಇರುವ ಕಡೆ ಏರ್‌ಕ್ರಾಫ್ಟ್ಗಳ ಮೂಲಕ ರಾಸಾಯನಿಕ ಸಿಂಪಡಿಸಿ, ಮಳೆ ಬರಿಸುವ ಸಾಮರ್ಥಯ ಹೆಚ್ಚಿಸಲಾಗುತ್ತದೆ. ಹವಾಮಾನ ಇಲಾಖೆ ನಾಲ್ವರು ನಿವೃತ್ತ ಅಧಿಕಾರಿಗಳ ತಂಡದ ಉಸ್ತುವಾರಿಯಲ್ಲಿ ಮೋಡ ಬಿತ್ತನೆ ಕಾರ್ಯ ನಡೆಯಲಿದೆ.
ಮೋಡ ಬಿತ್ತನೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ರೆಡಾರ್‌ಗಳ ಅಳವಡಿಕೆ ಕಾರ್ಯ ನಡೆಯುತ್ತಿದೆ. ಆದರೆ ರೆಡಾರ್ ಗಳಿಗೆ ಕಸ್ಟಮ್ಸ್ ಅನುಮತಿ ಇನ್ನೂ ಸಿಕ್ಕಿಲ್ಲ. ಸೋಮವಾರದ ವೇಳೆಗೆ ಅನುಮತಿ ಸಿಗುವ ಸಾಧ್ಯತೆ ಇದೆ. ಅದಾದ ಬಳಿಕ ಮೋಡ ಬಿತ್ತನೆ ಕಾರ್ಯಕ್ಕೆ ಚಾಲನೆ ನೀಡಲಾಗುವುದು.
ಪ್ರಕಾಶ್ ಕುಮಾರ್, ಮುಖ್ಯ ಎಂಜಿನಿಯರ್, ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ